ADVERTISEMENT

`ರಾತ್ರಿ ಹೊತ್ತು ಏಕೆ ಓಡಾಡಬೇಕು?'

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2012, 19:59 IST
Last Updated 24 ಡಿಸೆಂಬರ್ 2012, 19:59 IST
ದೆಹಲಿಯಲ್ಲಿ ಯುವತಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಖಂಡಿಸಿ ರಾಜಸ್ತಾನದ ಬಿಕಾನೆರ್‌ನಲ್ಲಿ ಮಹಿಳೆಯರು ಬಾಯಿಗೆ ಬೀಗ ಹಾಕಿಕೊಂಡು ಸೋಮವಾರ ಪ್ರತಿಭಟನೆ ನಡೆಸಿದರು	- ಪಿಟಿಐ ಚಿತ್ರ.
ದೆಹಲಿಯಲ್ಲಿ ಯುವತಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಖಂಡಿಸಿ ರಾಜಸ್ತಾನದ ಬಿಕಾನೆರ್‌ನಲ್ಲಿ ಮಹಿಳೆಯರು ಬಾಯಿಗೆ ಬೀಗ ಹಾಕಿಕೊಂಡು ಸೋಮವಾರ ಪ್ರತಿಭಟನೆ ನಡೆಸಿದರು - ಪಿಟಿಐ ಚಿತ್ರ.   

ಹೈದರಾಬಾದ್ (ಪಿಟಿಐ): ` ಮಹಿಳೆಯರು ರಾತ್ರಿ ಹೊತ್ತು ಓಡಾಡುವ ಅಗತ್ಯವೇನಿದೆ' ಎಂದು ಆಂಧ್ರಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರೂ ಆಗಿರುವ ರಾಜ್ಯ ಸಾರಿಗೆ ಸಚಿವ ಬೊತ್ಸ ಸತ್ಯನಾರಾಯಣ ಅವರ ಹೇಳಿಕೆ ತೀವ್ರ ವಿವಾದಕ್ಕೆ ಕಾರಣವಾಗಿದೆ.

ಯುವತಿ ಮೇಲಿನ ಸಾಮೂಹಿಕ ಅತ್ಯಾಚಾರ ಖಂಡಿಸಿ ದೆಹಲಿ ಸೇರಿದಂತೆ ದೇಶದ ವಿವಿಧೆಡೆ ತೀವ್ರ ಪ್ರತಿಭಟನೆ ನಡೆಸುತ್ತಿರುವ ಸಂದರ್ಭದಲ್ಲಿ ಈ ಹೇಳಿಕೆ ಜನರ ಕೆಂಗಣ್ಣಿಗೆ ಗುರಿಯಾಗಿದೆ.

`ಮಧ್ಯರಾತ್ರಿ ಸ್ವಾತಂತ್ರ್ಯ ಪಡೆದುಕೊಂಡಿದ್ದೇವೆ ಎನ್ನುವ ಕಾರಣಕ್ಕೆ ಮಹಿಳೆಯರು ರಾತ್ರಿ ವೇಳೆ ರಸ್ತೆಯಲ್ಲಿ ಓಡಾಡಬೇಕೆ' ಎಂದು ಪ್ರಶ್ನಿಸಿರುವ ಅವರು, ದೆಹಲಿಯಲ್ಲಿ ಅತ್ಯಾಚಾರಕ್ಕೊಳಗಾದ ಯುವತಿ ಒಂದು ವೇಳೆ ಆ ಖಾಸಗಿ ಬಸ್‌ನಲ್ಲಿ ಪ್ರಯಾಣಿಸದೇ ಇದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ' ಎಂದು ಸೋಮವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ  ತಿಳಿಸಿದರು.

ಇದರಿಂದ ವಿವಾದ ಸೃಷ್ಟಿಯಾಗುತ್ತಿದ್ದಂತೆ ತರಾತುರಿಯಲ್ಲಿ ಮತ್ತೊಂದು ಪತ್ರಿಕಾಗೋಷ್ಠಿ ಕರೆದು ಹೇಳಿಕೆಯನ್ನು ಹಿಂಪಡೆದರು.

`ಒಬ್ಬ ತಂದೆಯಾಗಿ ನನ್ನ ಮನದಾಳದ ಇಂಗಿತವನ್ನು ಮಾತ್ರ ವ್ಯಕ್ತಪಡಿಸಿದ್ದೇನೆ. ದೆಹಲಿಯಲ್ಲಿ ನಡೆದ ಘಟನೆ ನಿಜಕ್ಕೂ ದುರದೃಷ್ಟಕರ. ನಾನು ಇದನ್ನು ತೀವ್ರವಾಗಿ ಖಂಡಿಸುತ್ತೇನೆ' ಎಂದು ಸ್ಪಷ್ಟನೆ ನೀಡಿದರು.

`ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮಿಸಿ. ಮಹಿಳೆಯರ ಸುರಕ್ಷತೆಗೆ ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳಲಿದೆ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.