ADVERTISEMENT

ರಾಮದೇವ್ ಸ್ಪಷ್ಟನೆ, ನಿಲ್ಲದು ನಿರಶನ, ಸಚಿವರ ಭೇಟಿ ವಿಫಲ

​ಪ್ರಜಾವಾಣಿ ವಾರ್ತೆ
Published 1 ಜೂನ್ 2011, 12:20 IST
Last Updated 1 ಜೂನ್ 2011, 12:20 IST

ನವದೆಹಲಿ / ಉಜ್ಜೈನಿ (ಪಿಟಿಐ): ಜೂನ್ 4ರಿಂದ ಆರಂಭವಾಗುವುದೆಂದು ಘೋಷಿತವಾಗಿರುವ ಯೋಗ ಗುರು ಬಾಬಾ ರಾಮದೇವ್ ಅವರ ಭ್ರಷ್ಟಾಚಾರ ವಿರೋಧಿ ಅನಿರ್ದಿಷ್ಟ ನಿರಶನ ಸತ್ಯಾಗ್ರಹದಿಂದ ಚಿಂತೆಗೀಡಾಗಿರುವ ಕೇಂದ್ರ ಸರ್ಕಾರ ಬುಧವಾರ ಬಾಬಾ ಮೊನವೊಲಿಕೆಗಾಗಿ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಮತ್ತು ಇತರ ಮೂವರು ಹಿರಿಯ ಸಚಿವರ ನಿಯೋಗವನ್ನು ವಿಮಾನ ನಿಲ್ದಾಣಕ್ಕೆ ಕಳುಹಿಸಿ ಅವರೊಂದಿಗೆ ಮಾತುಕತೆ ನಡೆಸುವ ಅಸಾಧಾರಣ ಕ್ರಮ ಕೈಗೊಂಡಿತು.

ಆದರೆ ರಾಮದೇವ್ ಅವರು ತಮ್ಮ ಗುರಿಯಿಂದ ಹಿಂದೆ ಸರಿಯಲು ಒಪ್ಪದ ಕಾರಣ ಈ ಮಾತುಕತೆ ವಿಫಲಗೊಂಡಿತು ಎಂದು ಹೇಳಲಾಗಿದೆ.

ಅಣ್ಣಾ ಹಜಾರೆ ನೇತೃತ್ವದ ನಾಗರಿಕ ಸಮಾಜ ಕಳೆದ ಏಪ್ರಿಲ್‌ನಲ್ಲಿ ಭ್ರಷ್ಟಾಚಾರದ ವಿರುದ್ಧ ನಡೆಸಿದ ಸತ್ಯಾಗ್ರಹದ ಸಂದರ್ಭದಲ್ಲಿ ಉದ್ಭವಿಸಿದಂತಹ ಪರಿಸ್ಥಿತಿಯ ಪುನರಾವರ್ತನೆಯನ್ನು ತಡೆ ಹಿಡಿಯುವ ಸಲುವಾಗಿ ಪ್ರಣವ್ ಮುಖರ್ಜಿಯವರು ಸಚಿವರಾದ ಕಪಿಲ್ ಸಿಬಲ್, ಪವನ್ ಕುಮಾರ ಬನ್ಸಲ್ ಮತ್ತು ಸುಬೋಧ ಕಾಂತ್ ಸಹಾಯ್ ಜೊತೆಗೆ ರಾಮದೇವ್ ಬಳಿಗೆ ತೆರಳಿ ಮಾತುಕತೆ ನಡೆಸಿದರು.

ರಾಮದೇವ್ ಅವರು ಮಧ್ಯಪ್ರದೇಶದಿಂದ ಉಜ್ಜೈನಿಗೆ ವಿಮಾನದಲ್ಲಿ ಬಂದು ಇಳಿಯುತ್ತಿದ್ದಂತೆಯೇ ವಿಮಾನ ನಿಲ್ದಾಣದ ಟಿ-3 ಟರ್ಮಿನಲ್ ನಲ್ಲಿಯೇ ಈ ಮಾತುಕತೆ ನಡೆಯಿತು.

ಉಜ್ಜೈನಿ ವರದಿ: ಈ ಮಧ್ಯೆ, ಪ್ರಧಾನಿ ಮತ್ತು ಭಾರತದ ಮುಖ್ಯ ನ್ಯಾಯಮೂರ್ತಿಯವರನ್ನು ಉದ್ದೇಶಿತ ಲೋಕಪಾಲ ಮಸೂದೆ ವ್ಯಾಪ್ತಿಗೆ ತರಬಾರದು ಎಂಬುದಾಗಿ ಹೇಳಿದ ಒಂದು ದಿನದ ಬಳಿಕ ತಾವು ಅಂತಹ ಹೇಳಿಕೆ ನೀಡಿಯೇ ಇಲ್ಲ ಎಂದು ಯೋಗ ಗುರು ಬಾಬಾ ರಾಮದೇವ್ ಬುಧವಾರ ಸ್ಪಷ್ಟ ಪಡಿಸಿದರು.

ಕೇಂದ್ರ ಸರ್ಕಾರದ ಮನವಿಯ ಹೊರತಾಗಿಯೂ, ಭ್ರಷ್ಟಾಚಾರದ ವಿರುದ್ಧ ಜೂನ್ 4ರಿಂದ ಆರಂಭಿಸಲು ಉದ್ದೇಶಿಸಿರುವ ತಮ್ಮ ಅನಿರ್ದಿಷ್ಟ ಉಪವಾಸದ ಯೋಜನೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ  ಎಂದೂ ಅವರು ದೃಢ ಪಡಿಸಿದರು.

‘ಪ್ರಧಾನಿ ಮತ್ತು ಭಾರತ ಮುಖ್ಯ ನ್ಯಾಯಮೂರ್ತಿಗಳ (ಸಿಜೆ ಐ) ಹುದ್ದೆಗಳು ಗೌರವಾನ್ವಿತ ಹುದ್ದೆಗಳಾದ ಕಾರಣ ಅವುಗಳನ್ನು ಪ್ರಸ್ತಾವಿತ ಲೋಕಪಾಲ ಮಸೂದೆ ವ್ಯಾಪ್ತಿಗೆ ತರಬಾರದು ಎಂಬುದಾಗಿ ನಾನು ಹೇಳಿಯೇ ಇಲ್ಲ’ ಎಂದು ತಮ್ಮ ಒಂದು ಲಕ್ಷ ಕಿ.ಮೀ.ದೂರದ  ಭಾರತ ಸ್ವಾಭಿಮಾನ ಯಾತ್ರೆಯ ಸಮಾರೋಪದ ಬಳಿಕ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

‘ಪ್ರಧಾನಿ ಮತ್ತು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯ ಮೂರ್ತಿಯವನರನ್ನು ಲೋಕಪಾಲ ಮಸೂದೆಯ ವ್ಯಾಪ್ತಿಯಿಂದ ಹೊರಗಿಡಬೇಕು ಎಂಬುದು ಎಂದೂ ನನ್ನ ವೈಯಕ್ತಿಕ ಅಭಿಪ್ರಾಯ ಆಗಿರಲೇ ಇಲ್ಲ. ಈ ಹುದ್ದೆಗಳು ಲೋಕಪಾಲ ವ್ಯಾಪ್ತಿಗೆ ಬರಬಾರದು ಎಂಬುದಾಗಿ ಸಾರ್ವಜನಿಕ ಚರ್ಚೆಗಳು ನಡೆಯುತ್ತಿವೆ ಅಷ್ಟೆ ಎಂದು ಅವರು ನುಡಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.