ADVERTISEMENT

ರಾಮಮಂದಿರಕ್ಕಾಗಿ ತೊಗಾಡಿಯಾ ನಿರಶನ: ಮೋದಿ ವಿರುದ್ಧ ಆಕ್ರೋಶ

ಪಿಟಿಐ
Published 15 ಏಪ್ರಿಲ್ 2018, 19:30 IST
Last Updated 15 ಏಪ್ರಿಲ್ 2018, 19:30 IST
ಪ್ರವೀಣ್‌ ತೊಗಾಡಿಯಾ
ಪ್ರವೀಣ್‌ ತೊಗಾಡಿಯಾ   

ಅಹಮದಾಬಾದ್: ವಿಶ್ವ ಹಿಂದೂ ಪರಿಷತ್‌ (ವಿಎಚ್‌ಪಿ) ತೊರೆದ ಬೆನ್ನಲ್ಲೇ ಪ್ರವೀಣ್‌ ತೊಗಾಡಿಯಾ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ವಿಎಚ್‌ಪಿಯ ಅಂತರರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಶನಿವಾರ ನಡೆದ ಚುನಾವಣೆಯಲ್ಲಿ ತಾವು ಬೆಂಬಲಿಸಿದ್ದ ಅಭ್ಯರ್ಥಿ ರಾಘವ್‌ ರೆಡ್ಡಿ ಹೀನಾಯ ಸೋಲುಂಡ ಬಳಿಕ ತೊಗಾಡಿಯಾ ಅವರು ವಿಎಚ್‌ಪಿ ತೊರೆದಿದ್ದರು.

ಅಯೋಧ್ಯೆಯಲ್ಲಿ ರಾಮ ಮಂದಿರ, ಗೋಹತ್ಯೆ ನಿಷೇಧ ಸೇರಿ ಹಿಂದೂಗಳ ಬಹುದಿನಗಳ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅಹಮದಾಬಾದ್‌ನಲ್ಲಿ ಮಂಗಳವಾರದಿಂದ ಅನಿರ್ದಿಷ್ಟಾವಧಿವರೆಗೆ ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ಅವರು ಭಾನುವಾರ ಪ್ರಕಟಿಸಿದ್ದಾರೆ.

ADVERTISEMENT

‘ಕಳೆದ ನಾಲ್ಕು ವರ್ಷಗಳಲ್ಲಿ ಸರ್ಕಾರದೊಂದಿಗಿನ ಸಂಬಂಧ ಕಳಚಿಕೊಂಡಿದ್ದೇನೆ. 2002ರಲ್ಲಿ ಗುಜರಾತ್‌ನಲ್ಲಿ ನಡೆದ ಕೆಲವು ಬೆಳವಣಿಗೆಗಳ ನಂತರ ಈ ಸಂಬಂಧ ಕಳಚಿಕೊಳ್ಳುವ ಪ್ರಕ್ರಿಯೆ ಆರಂಭವಾಗಿತ್ತು’ ಎಂದು ಅವರು ಹೇಳಿದ್ದಾರೆ.

‘ಗೋಧ್ರೋತ್ತರ ಹಿಂಸಾಚಾರದಲ್ಲಿ ಪೊಲೀಸ್‌ ಗುಂಡೇಟಿಗೆ ಅನೇಕ ಹಿಂದೂಗಳು ಬಲಿಯಾದರು. ಅನೇಕ ಹಿಂದೂಗಳನ್ನು ಜೈಲಿಗೆ ಅಟ್ಟಲಾಯಿತು. ನರೇಂದ್ರ ಮೋದಿ ಗುಜರಾತ್‌ ಮುಖ್ಯಮಂತ್ರಿಯಾಗಿದ್ದರೂ ಇದು ಹೇಗೆ ಸಾಧ್ಯವಾಯಿತು‘ ಎಂದು ಅವರು ಪ್ರಶ್ನಿಸಿದ್ದಾರೆ.

‘2014ರಲ್ಲಿ ವಿಎಚ್‌ಪಿಯು ಮೋದಿ ಅವರಿಗೆ ಬೇಷರತ್‌ ಬೆಂಬಲ ನೀಡಿತ್ತು. ಆದರೆ, ಅವರು ಗೋರಕ್ಷಕರನ್ನು ಗೂಂಡಾಗಳು ಎಂದು ಮೂದಲಿಸಿದರು. ಅದಾದ ನಂತರ ಜಾರ್ಖಂಡ್‌ನಲ್ಲಿ 11 ಗೋರಕ್ಷಕರಿಗೆ ಜೀವಾವಧಿ ಶಿಕ್ಷೆ ನೀಡಲಾಯಿತು. ಕಾಂಗ್ರೆಸ್‌ ಸರ್ಕಾರದಲ್ಲೂ ಈ ರೀತಿ ನಡೆದಿರಲಿಲ್ಲ’ ಎಂದು ತೊಗಾಡಿಯಾ ಅವರು ಮೋದಿ ವಿರುದ್ಧ ಕಿಡಿ ಕಾರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.