ADVERTISEMENT

ರಾಮಲೀಲಾ ಮೈದಾನ: ಪೊಲೀಸ್, ಸರ್ಕಾರಕ್ಕೆ ಸುಪ್ರೀಂ ತಪರಾಕಿ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2012, 19:30 IST
Last Updated 23 ಫೆಬ್ರುವರಿ 2012, 19:30 IST

ನವದೆಹಲಿ (ಪಿಟಿಐ): ಕಳೆದ ವರ್ಷ ಜೂನ್‌ನಲ್ಲಿ ರಾಮಲೀಲಾ ಮೈದಾನದಲ್ಲಿ ಮಧ್ಯರಾತ್ರಿ  ಬಾಬಾ ರಾಮದೇವ್ ಮತ್ತು ಅವರ ಬೆಂಬಲಿಗರ ಮೇಲೆ ಬಲಪ್ರಯೋಗ ಮಾಡಿದ ದೆಹಲಿ ಪೊಲೀಸರು ಮತ್ತು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಸುಪ್ರೀಂಕೋರ್ಟ್, ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಪೊಲೀಸ್ ಸಿಬ್ಬಂದಿಯನ್ನು ಕ್ರಿಮಿನಲ್ ವಿಚಾರಣೆಗೆ ಗುರಿಪಡಿಸಬೇಕು ಎಂದು ಆದೇಶಿಸಿದೆ.

ರಾಮಲೀಲಾ ಮೈದಾನದಲ್ಲಿ ಸರ್ಕಾರ ತನ್ನ ಬಲ ಪ್ರದರ್ಶನ ಮಾಡುವ ಮೂಲಕ ಪ್ರಜಾಸತ್ತೆಯ ಮೂಲ ಆಶಯಕ್ಕೆ ಧಕ್ಕೆ ಉಂಟು ಮಾಡಿದೆ ಎಂದು ನ್ಯಾಯಮೂರ್ತಿ ಬಿ.ಎಸ್.ಚವಾಣ್, ಸ್ವತಂತ್ರ ಕುಮಾರ್ ಅವರನ್ನೊಳಗೊಂಡ ಪೀಠವು ಟೀಕಿಸಿದೆ.

ಒಬ್ಬರ ಸಾವಿಗೆ ಮತ್ತು ಹಲವಾರು ಜನರು ಗಾಯಗೊಳ್ಳಲು ಕಾರಣವಾದ ಘಟನೆಯನ್ನು ಸರ್ಕಾರ ಹಾಗೂ ಪೊಲೀಸರು ತಡೆಯಬಹುದಾಗಿತ್ತು ಎಂದು ತಿಳಿಸಿರುವ ನ್ಯಾಯಪೀಠವು, ಸರ್ಕಾರ ಮತ್ತು ಜನರ ಮಧ್ಯೆಯ ಅಪನಂಬಿಕೆಗೆ ಇದೊಂದು ಸ್ಪಷ್ಟ ಉದಾಹರಣೆ ಎಂದು ತಿಳಿಸಿದೆ.

ADVERTISEMENT

ಮೈದಾನದಲ್ಲಿ ನಡೆದ ಹಿಂಸಾಚಾರಕ್ಕೆ ರಾಮದೇವ್ ಮತ್ತು ಅವರ ಬೆಂಬಲಿಗರೂ ಕಾರಣ ಎಂದು ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿದೆ. ಪೊಲೀಸರು ಮತ್ತು ರಾಮದೇವ್ ಬೆಂಬಲಿಗರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ವಿಚಾರಣೆಗೆ ಗುರಿಪಡಿಸಬೇಕು ಎಂದು ಸೂಚಿಸಲಾಗಿದೆ.

ಪೊಲೀಸರು ಅತಿರೇಕದಿಂದ ನಡೆದುಕೊಂಡು ಶಾಂತಿ ಕಾಪಾಡುವ ಬದಲು ಹಿಂಸಾಚಾರ ನಡೆಸಿದ್ದಾರೆ ಎಂದು ಟೀಕಿಸಿದೆ.

ನಿದ್ದೆ ಮಾಡುತ್ತಿದ್ದವರ ಮೇಲೆ ಲಾಠಿ ಪ್ರಹಾರ ಮಾಡಿರುವ ಪೊಲೀಸರು, ಅಧಿಕಾರ ದುರ್ಬಳಕೆ ಮಾಡುವ ಮೂಲಕ ಜನರ ಮೂಲಭೂತ ಹಕ್ಕಿಗೆ ಧಕ್ಕೆ ಉಂಟು ಮಾಡಿದ್ದಾರೆ ಎಂದು ನ್ಯಾಯಮೂರ್ತಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಮದೇವ್ ಅವರು ತಮ್ಮ ಬೆಂಬಲಿಗರಿಗೆ ಶಾಂತಿಯುತವಾಗಿ ಮೈದಾನದಿಂದ ಹೋಗಿ ಎಂದು ತಿಳಿಸಬಹುದಾಗಿತ್ತು. ಅವರು ಸಹ ಜವಾಬ್ದಾರಿಯಿಂದ ವರ್ತಿಸಿಲ್ಲ ಎಂದು ಟೀಕಿಸಲಾಗಿದೆ.

ಪರಿಹಾರ: ಘಟನೆಯಲ್ಲಿ ಸತ್ತ ರಾಜಾ ಬಾಲಾ ಅವರ ಕುಟುಂಬಕ್ಕೆ ಐದು ಲಕ್ಷ ರೂಪಾಯಿಗಳ ಪರಿಹಾರ ನೀಡಬೇಕು, ಶೇಕಡಾ 25ರಷ್ಟನ್ನು ರಾಮದೇವ್ ಟ್ರಸ್ಟ್ ಭರಿಸಬೇಕು ಎಂದು ನ್ಯಾಯಪೀಠ ಆದೇಶಿಸಿದೆ.
ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡವರಿಗೆ ತಲಾ 50 ಸಾವಿರ ಮತ್ತು ಸಣ್ಣಪುಟ್ಟ ಗಾಯಗೊಂಡವರಿಗೆ 25 ಸಾವಿರ ರೂಪಾಯಿಗಳ ಪರಿಹಾರ ನೀಡಬೇಕು ಎಂದು ಸೂಚಿಸಿದೆ.

ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಬಂದ ವರದಿ ಮತ್ತು ದೃಶ್ಯಗಳನ್ನು ಆಧರಿಸಿ ಸುಪ್ರೀಂಕೋರ್ಟ್ ಸ್ವಪ್ರೇರಣೆಯಿಂದ ಪ್ರಕರಣದ ವಿಚಾರಣೆಯನ್ನು ಆರಂಭಿಸಿತ್ತು. ಕಳೆದ ಜನವರಿ 20ರಂದು ನ್ಯಾಯಪೀಠವು ತನ್ನ ಆದೇಶವನ್ನು ಕಾಯ್ದಿರಿಸಿತ್ತು.

ಚಿದಂಬರಂ ರಾಜೀನಾಮೆಗೆ ಆಗ್ರಹ: ಸುಪ್ರೀಂಕೋರ್ಟ್ ಟೀಕಿಸಿರುವ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಪಿ. ಚಿದಂಬರಂ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಜನತಾ ಪಕ್ಷದ ಅಧ್ಯಕ್ಷ ಡಾ. ಸುಬ್ರಮಣಿಯನ್ ಸ್ವಾಮಿ  ಒತ್ತಾಯಿಸಿದ್ದಾರೆ.

ತೀರ್ಪು ಪರಿಶೀಲನೆ: ರಾಮಲೀಲಾ ಮೈದಾನದಲ್ಲಿ ರಾಮದೇವ್ ಬೆಂಬಲಿಗರ ಮೇಲೆ ಪೊಲೀಸರು ಬಲಪ್ರಯೋಗ ಮಾಡಿ ನಾಗರಿಕರ ಹಕ್ಕು ದಮನ ಮಾಡಿದ್ದಾರೆ ಎಂಬ ಸುಪ್ರೀಂಕೋರ್ಟ್ ತೀರ್ಪನ್ನು ಅಧ್ಯಯನ ಮಾಡಲಾಗುವುದು ಎಂದು ಕೇಂದ್ರ ತಿಳಿಸಿದೆ.

ದೆಹಲಿ ಪೊಲೀಸರು ನಡೆಸಿದ ಹಿಂಸಾಚಾರಕ್ಕೆ ಚಿದಂಬರಂ ಅವರು ಹೊಣೆ ಹೊತ್ತುಕೊಂಡು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ತಿಳಿಸಿದ್ದಾರೆ.

ಅಣ್ಣಾ ಹಜಾರೆ ಹೇಳಿಕೆ: ನ್ಯಾಯಾಲಯದ ತೀರ್ಪನ್ನು ಓದದೆ ಪ್ರತಿಕ್ರಿಯಿಸಲಾರೆ ಎಂದು ಭ್ರಷ್ಟಾಚಾರ ವಿರೋಧಿ ಆಂದೋಲನದ ನೇತಾರ ಅಣ್ಣಾ ಹಜಾರೆ ತಿಳಿಸಿದ್ದಾರೆ.

ತೀರ್ಪು ಪರಿಶೀಲನೆ: ರಾಮಲೀಲಾ ಮೈದಾನದಲ್ಲಿ ರಾಮದೇವ್ ಬೆಂಬಲಿಗರ ಮೇಲೆ ಪೊಲೀಸರು ಬಲಪ್ರಯೋಗ ಮಾಡಿ ನಾಗರಿಕರ ಹಕ್ಕು ದಮನ ಮಾಡಿದ್ದಾರೆ ಎಂಬ ಸುಪ್ರೀಂಕೋರ್ಟ್ ತೀರ್ಪನ್ನು ಅಧ್ಯಯನ ಮಾಡಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಈ ಮಧ್ಯೆ ವಿರೋಧ ಪಕ್ಷವಾದ ಬಿಜೆಪಿ, ಅಂದಿನ ಹಿಂಸಾಚಾರಕ್ಕೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವೇ ಕಾರಣ ಎಂದು ಟೀಕಿಸಿದೆ.

ರಾಮದೇವ್ ಅವರು ತಮ್ಮ ಬೆಂಬಲಿಗರನ್ನು ನಿಯಂತ್ರಿಸುವ ಬದಲು ವೇದಿಕೆಯಿಂದ ಪರಾರಿಯಾಗಿ ಬೇಜವಾಬ್ದಾರಿಯಿಂದ  ವರ್ತಿಸಿದ್ದಾರೆ ಎಂದು ಕೋರ್ಟ್ ಟೀಕಿಸಿರುವುದನ್ನು ಬಾಬಾ ಅವರು ಗಮನಿಸಬೇಕು ಎಂದು ಸಮಾಚಾರ ಮತ್ತು ಪ್ರಸಾರ ಖಾತೆಯ ಸಚಿವೆ ಅಂಬಿಕಾ ಸೋನಿ ತಿಳಿಸಿದ್ದಾರೆ.

ಬಿಜೆಪಿ ಟೀಕೆ

ರಾಮಲೀಲಾ ಮೈದಾನದ ಘಟನೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ರಾಮದೇವ್ ಬಗ್ಗೆ ಮಾಡಿರುವ ಟೀಕೆಗೆ ಬಿಜೆಪಿ ವಿರೋಧ ವ್ಯಕ್ತಪಡಿಸಿದೆ.

ಸುಪ್ರೀಂಕೋರ್ಟ್ ತೀರ್ಪಿಗೆ ವಿರೋಧ ವ್ಯಕ್ತಪಡಿಸುವ ಮೂಲಕ ಬಿಜೆಪಿ ಸಂವಿಧಾನಿಕ ಸಂಸ್ಥೆಗೆ ಅಗೌರವ ತೋರಿಸಿದೆ ಎಂದು ಕಾಂಗ್ರೆಸ್ ಟೀಕಿಸಿದೆ.

ಕೋರ್ಟ್ ತಿಳಿಸಿರುವಂತೆ ರಾಮದೇವ್ ಬೇಜಾಬ್ದಾರಿಯಿಂದ ನಡೆದುಕೊಂಡಿದ್ದರೆ ಮಹಾತ್ಮಾ ಗಾಂಧಿ ಸಹ ಜನರನ್ನು ನಿಯಂತ್ರಿಸುವಲ್ಲಿ ವಿಫಲರಾಗಿದ್ದರು ಎಂದೇ ಹೇಳಬೇಕಾಗುತ್ತದೆ ಎಂದು ಬಿಜೆಪಿಯ ವಕ್ತಾರ ಪ್ರಕಾಶ್ ಜಾವಡೇಕರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.