
ನವದೆಹಲಿ (ಪಿಟಿಐ): ಖ್ಯಾತ ವಿಜ್ಞಾನಿ, ಕರ್ನಾಟಕದ ಪ್ರೊ.ಸಿ.ಎನ್.ಆರ್ ರಾವ್ ಹಾಗೂ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರಿಗೆ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಮಂಗಳವಾರ ದೇಶದ ಅತ್ಯುನ್ನತ ನಾಗರಿಕ ಗೌರವ ‘ಭಾರತ ರತ್ನ’ ಪ್ರದಾನ ಮಾಡಿದರು.
ರಾಷ್ಟ್ರಪತಿ ಭವನದ ದರ್ಬಾರ್ ಹಾಲ್‌ನಲ್ಲಿ ಕೇವಲ ಆರು ನಿಮಿಷಗಳ ಕಾಲ ನಡೆದ ಸಮಾರಂಭದಲ್ಲಿ ಪ್ರಣವ್ ಮುಖರ್ಜಿ ಅವರು ಈ ಇಬ್ಬರು ಖ್ಯಾತನಾಮರಿಗೆ ‘ಭಾರತ ರತ್ನ’ ಪುರಸ್ಕಾರವನ್ನು ಪ್ರದಾನ ಮಾಡಿದರು.
ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ಕಳೆದ ನವೆಂಬರ್ 16ರಂದು ನಿವೃತ್ತರಾಗಿದ್ದ 40 ವರ್ಷದ ಸಚಿನ್ ತೆಂಡೂಲ್ಕರ್ ಅವರು ಈ ಗೌರವಕ್ಕೆ ಪಾತ್ರರಾಗಿರುವ ಏಕೈಕ ಕ್ರೀಡಾಪಟುವಾಗಿದ್ದಾರೆ.
.jpg)
| ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ಮಂಗಳವಾರ ನಡೆದ ‘ಭಾರತ ರತ್ನ’ ಪ್ರದಾನ ಸಮಾರಂಭದಲ್ಲಿ ಖ್ಯಾತ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರ ಪತ್ನಿ ಅಂಜಲಿ ಹಾಗೂ ಮಗಳು ಸಾರಾ ಪಾಲ್ಗೊಂಡಿದ್ದರು –ಪಿಟಿಐ ಚಿತ್ರ |
ಕಪ್ಪು ಬಣ್ಣದ ಸೂಟ್ ಧರಿಸಿದ್ದ ರಾಜ್ಯಸಭಾ ಸದಸ್ಯರೂ ಆಗಿರುವ ತೆಂಡೂಲ್ಕರ್, ಪ್ರಧಾನಿ ಮನಮೋಹನ್ ಸಿಂಗ್, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಇತರ ಗಣ್ಯರ ಬಳಿಗೆ ತೆರಳಿ ಕುಶಲೋಪರಿ ವಿಚಾರಿಸಿದರು.
ಉಪರಾಷ್ಟ್ರಪತಿ ಹಮೀದ್ ಅನ್ಸಾರಿ, ಕೇಂದ್ರ ಸಚಿವರು, ಸಚಿನ್ ಪತ್ನಿ ಅಂಜಲಿ ಪುತ್ರಿ ಸಾರಾ ಸೇರಿದಂತೆ ಹಲವರು ಸಮಾರಂಭದಲ್ಲಿ ಹಾಜರಿದ್ದರು.
ಸಮಾರಂಭದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರೊ.ರಾವ್, ‘ಇದು ಶ್ರೇಷ್ಠ ಗೌರವ. ಎಲ್ಲಕ್ಕಿಂತಲೂ ಮಿಗಿಲಾಗಿದ್ದು. ಭಾರತ ನನ್ನನ್ನು ಗೌರವಿಸಿರುವುದನ್ನು ಯಾವುದಕ್ಕೂ ಹೋಲಿಸಲಾಗದು’ ಎಂದು ಹೇಳಿದರು.
ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸಲು ನಿರಾಕರಿಸಿದ ಸಚಿನ್ ತೆಂಡೂಲ್ಕರ್, ‘ಭಾರತದ ಪರ ಬ್ಯಾಟಿಂಗ್ ಮಾಡುವುದನ್ನು ಮುಂದುವರಿಸುತ್ತೇನೆ. ನಾನು ಕ್ರಿಕೆಟ್‌ನಲ್ಲಿ ಬ್ಯಾಟಿಂಗ್ ನಿಲ್ಲಿಸಿದ್ದರೂ, ದೇಶದ ಪರ ಕೆಲಸ ಮಾಡಿ ಜನರ ಮೊಗದಲ್ಲಿ ನಗುಮೂಡಿಸಲು ಯತ್ನಿಸುತ್ತೇನೆ’ ಎಂದಷ್ಟೇ ಹೇಳಿದರು.
ಪ್ರಯಾಸಪಟ್ಟ ಸಿಬ್ಬಂದಿ: ಸಮಾರಂಭದಲ್ಲಿ ಸೇರಿದ್ದ ಜನರನ್ನು ನಿಯಂತ್ರಿಸಲು ರಾಷ್ಟ್ರಪತಿ ಭವನದ ಸಿಬ್ಬಂದಿ ಪ್ರಯಾಸ ಪಟ್ಟರು.
ಸೇರಿದವರಲ್ಲಿ ಹೆಚ್ಚಿನವರು ಸಚಿನ್ ಅವರಿಗೆ ಅಭಿನಂದನೆ ಸಲ್ಲಿಸಲು ಮತ್ತು ಗೃಹ ಸಚಿವಾಲಯ ಹಂಚಿದ್ದ ಕಿರುಹೊತ್ತಗೆಯಲ್ಲಿ ಹಸ್ತಾಕ್ಷರ ಪಡೆಯಲು ಬಯಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.