ನವದೆಹಲಿ (ಪಿಟಿಐ/ಐಎನ್‌ಎಸ್): ರಾಷ್ಟ್ರಪತಿ ಭಾಷಣದಲ್ಲಿ ಪ್ರಸ್ತಾಪಗೊಂಡಿದ್ದ ವಿವಾದಾತ್ಮಕ `ಎನ್‌ಸಿಟಿಸಿ~ (ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಕೇಂದ್ರ) ಸ್ಥಾಪನೆ ವಿಚಾರಕ್ಕೆ ವಿರೋಧ ಪಕ್ಷಗಳು ಮುಂದಿಟ್ಟಿದ್ದ ತಿದ್ದುಪಡಿಗೆ ಸಹಮತ ವ್ಯಕ್ತಪಡಿಸಲು ಮಿತ್ರಪಕ್ಷಗಳು ಉತ್ಸಾಹ ತೋರದೇ ಇದ್ದುದರಿಂದ ಲೋಕಸಭೆಯಲ್ಲಿ ಸೋಮವಾರ ಸರ್ಕಾರ ನಿರಾಳ ಭಾವ ಅನುಭವಿಸಿತು.
`ಎನ್‌ಸಿಟಿಸಿ~ ಸ್ಥಾಪನೆಗೆ ಸಂಬಂಧಿಸಿ ಬಿಜೆಪಿ, ಬಿಜೆಡಿ ಹಾಗೂ ಎಡಪಕ್ಷಗಳು ಮುಂದಿಟ್ಟಿದ್ದ ತಿದ್ದುಪಡಿಗೆ ಮತ ಹಾಕುವ ಸಂದರ್ಭದಲ್ಲಿ ಯುಪಿಎ ಮಿತ್ರ ಪಕ್ಷಗಳಾದ ತೃಣಮೂಲ ಕಾಂಗ್ರೆಸ್ ಹಾಗೂ ಬಿಎಸ್‌ಪಿ ಸಭಾತ್ಯಾಗ ಮಾಡಿದವು.
ಸರ್ಕಾರದ ಮತ್ತೊಂದು ಮಿತ್ರ ಪಕ್ಷವಾದ ಸಮಾಜವಾದಿ ಪಕ್ಷ ರಾಷ್ಟ್ರಪತಿ ಭಾಷಣಕ್ಕೆ ತಾನು ತರಲು ಇಚ್ಛಿಸಿದ್ದ ತಿದ್ದುಪಡಿಯನ್ನು ಕೊನೆಯ ಗಳಿಗೆಯಲ್ಲಿ ವಾಪಸು ಪಡೆಯಿತು.
`ಎನ್‌ಸಿಟಿಸಿ~ಗೆ ಬಿಜೆಪಿ ತರಲು ಇಚ್ಛಿಸಿರುವ ತಿದ್ದುಪಡಿಯನ್ನು ವಿರೋಧ ಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಮಂಡಿಸಿದರು. 141 ಸದಸ್ಯರು ಈ ತಿದ್ದುಪಡಿಯ ಪರವಾಗಿ ಹಾಗೂ 226 ಜನ ಸದಸ್ಯರು ತಿದ್ದುಪಡಿಯ ವಿರುದ್ಧವಾಗಿ ಮತ ಹಾಕಿದರು. ಒಬ್ಬ ಸದಸ್ಯರು ಮತದಾನದಿಂದ ಹೊರಗುಳಿದರು.
ಸರ್ಕಾರದ ದಬ್ಬಾಳಿಕೆಯ ಧೋರಣೆಗೆ `ಎನ್‌ಸಿಟಿಸಿ~ ತಾಜಾ ಉದಾಹರಣೆಯಾಗಿದೆ. ಇಂತಹ ವಿವಾದಾತ್ಮಕ ವಿಚಾರವನ್ನು ರಾಷ್ಟ್ರಪತಿಗಳ ಭಾಷಣದಲ್ಲಿ ಅಡಕಗೊಳಿಸುವ ಅಗತ್ಯ ಇರಲಿಲ್ಲ.
ಅದರ ಬದಲಾಗಿ ಈ ವಿಚಾರದಲ್ಲಿ ರಾಜ್ಯಗಳ ಅಭಿಪ್ರಾಯ ಪಡೆಯಲಾಗುವುದು ಎಂದು ಸರ್ಕಾರ ಹೇಳಬೇಕಿತ್ತು ಎಂಬುದಾಗಿ ಸುಷ್ಮಾ ಟೀಕಿಸಿದರು. ಈ ಹಂತದಲ್ಲಿ `ಎನ್‌ಸಿಟಿಸಿ~ ವಿರೋಧಿಸಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರಧಾನಿಗೆ ಬರೆದ ಪತ್ರದಲ್ಲಿನ ಸಾಲುಗಳನ್ನು ಸಹ ಸುಷ್ಮಾ ಓದಿ ಹೇಳಿದರು.
ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಕೇಂದ್ರ (ಎನ್‌ಸಿಟಿಸಿ) ವಿರುದ್ಧ ಸಿಪಿಎಂನ ಬಸುದೇವ್ ಆಚಾರ್ಯ ಮಂಡಿಸಿದ ತಿದ್ದುಪಡಿಗೆ 146 ಸದಸ್ಯರ ಮತ ಬಿತ್ತು. 227 ಸದಸ್ಯರು ಇದನ್ನು ವಿರೋಧಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಮಾಜವಾದಿ ಪಕ್ಷದ ನಾಯಕ ಶೈಲೇಂದ್ರ ಕುಮಾರ್, `ಎನ್‌ಸಿಟಿಸಿ~ ಸ್ಥಾಪನೆ ವಿಚಾರದಲ್ಲಿ ರಾಜ್ಯಗಳ ಹಿತ ಕಾಪಾಡಲಾಗುವುದು ಎಂದು ಪ್ರಧಾನಿ ಅಭಯ ನೀಡಿದ್ದರಿಂದ ತಮ್ಮ ಪಕ್ಷ ತಿದ್ದುಪಡಿ ಹಿಂದಕ್ಕೆ ಪಡೆಯುತ್ತಿದೆ ಎಂದರು.
ಮತದಾನದ ಸಂದರ್ಭದಲ್ಲಿ ತೃಣಮೂಲ ಕಾಂಗ್ರೆಸ್ ಸದಸ್ಯರು ಸಭಾತ್ಯಾಗ ಮಾಡಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಎಡಪಕ್ಷಗಳು, ಕೇಂದ್ರ ಸಚಿವರು ಮತದಾನದ ಹೊತ್ತಿನಲ್ಲಿ ಸದನದಿಂದ ಹೊರನಡೆಯಬಹುದೇ ಎಂದು ಪ್ರಶ್ನಿಸಿದವು.
ಬೀಳ್ಕೊಡುಗೆ ಭಾಷಣ: ಬಿಜೆಪಿ ಲೇವಡಿ (ನವದೆಹಲಿ ವರದಿ): ಭ್ರಷ್ಟಾಚಾರಕ್ಕೆ ಪ್ರಧಾನಿ ಮನಮೋಹನ್ ಸಿಂಗ್ ಅವರು ಭಾಗಿಯಾಗಿದ್ದಾರೆ ಎಂದು ಆರೋಪಿಸಿರುವ ಬಿಜೆಪಿ, ಸಂಸತ್‌ನ ಜಂಟಿ ಅಧಿವೇಶನ ಉದ್ದೇಶಿಸಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಮಾಡಿದ ಭಾಷಣವನ್ನು `ಬೀಳ್ಕೊಡುಗೆ~ ಭಾಷಣ ಎಂದು ಲೇವಡಿ ಮಾಡಿದೆ.
ಕಲ್ಲಿದ್ದಲು ಗಣಿ ಹಂಚಿಕೆ ವಿಷಯದಲ್ಲಿ ನಡೆದಿರುವ ಭ್ರಷ್ಟಾಚಾರದ ಸಂದರ್ಭದಲ್ಲಿ ಸಂಬಂಧಿಸಿದ ಖಾತೆಯನ್ನು ಸಿಂಗ್ ಅವರೇ ನಿರ್ವಹಿಸುತ್ತಿದ್ದ ಕಾರಣದಿಂದ ಭ್ರಷ್ಟಾಚಾರದಲ್ಲಿ ಅವರೂ ಪಾಲ್ಗೊಂಡಂತೆ ಎಂದು ಬಿಜೆಪಿ ಮುಖಂಡ ಪ್ರಕಾಶ್ ಜಾವಡೇಕರ್ ಆರೋಪಿಸಿದ್ದಾರೆ.
ಕಳೆದ ಒಂಬತ್ತು ವರ್ಷಗಳಿಂದ ಸರ್ಕಾರ ಇಡೀ ದೇಶವನ್ನೇ ಲೂಟಿ ಮಾಡಿದೆ ಎಂದು ಆರೋಪಿಸಿರುವ ಅವರು, 2006 ಮತ್ತು 2009ರ ಅವಧಿಯಲ್ಲಿ ಎರಡು ಹಗರಣಗಳು ನಡೆದಿವೆ. ಈ ಮೂರು ವರ್ಷಗಳಲ್ಲಿ ಕಲ್ಲಿದ್ದಲು ಗಣಿ ಹಂಚಿಕೆ ವಿಷಯದಲ್ಲಿ ಭಾರಿ ಭ್ರಷ್ಟಾಚಾರ ನಡೆದಿದೆ ಎಂದರು. ಕಲ್ಲಿದ್ದಲು ಗಣಿ ಭ್ರಷ್ಟಾಚಾರ, 2ಜಿ ಸ್ಪೆಕ್ಟ್ರಂ ಹಂಚಿಕೆಯ ಭ್ರಷ್ಟಾಚಾರಕ್ಕಿಂತ ದೊಡ್ಡದು ಎಂದು ಅವರು ಬಣ್ಣಿಸಿದರು.
ಮಮತಾ-ಸಿಂಗ್ ಭೇಟಿ (ನವದೆಹಲಿ ವರದಿ): ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸೋಮವಾರ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಭೇಟಿ ಮಾಡಿ ರಾಷ್ಟ್ರೀಯ ಭಯೋತ್ಪಾದನ ನಿಗ್ರಹ ಕೇಂದ್ರ ಸ್ಥಾಪನೆ ವಿಷಯ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ಕೇಂದ್ರ ಸಚಿವರಾದ ಸುದೀಪ್ ಬಂದೋಪಧ್ಯಾಯ ಮತ್ತು ಮುಕುಲ್ ರಾಯ್ ಸಹ ಇದ್ದರು.
ನಂತರ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಮಮತಾ ಅವರು ಈ ಭೇಟಿ ಸೌಹಾರ್ದಮಯವಾಗಿತ್ತು ಎಂದರಲ್ಲದೆ `ದಿನೇಶ್ ತ್ರಿವೇದಿ ರಾಜೀನಾಮೆಯಿಂದ ತೆರವಾಗಿರುವ ರೈಲ್ವೆ ಸಚಿವ ಸ್ಥಾನಕ್ಕೆ ಮುಕಲ್ ರಾಯ್ ನೇಮಕದ ಬಗ್ಗೆ ಚರ್ಚಿಸಲಾಯಿತು~ ಎಂದರು.
ತೃಣಮೂಲ ಕಾಂಗ್ರೆಸ್ ಪಕ್ಷದ ಸಂಸದೀಯ ಸಭೆ ನಡೆಯುವುದಕ್ಕಿಂತ ಮೊದಲು ಈ ಭೇಟಿ ನಡೆಯಿತು. ಮಂಗಳವಾರ ಮುಕುಲ್ ರಾಯ್ ಅವರು ರೈಲ್ವೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಸದನದಲ್ಲಿ ತ್ರಿವೇದಿ
ತಮ್ಮ ಪಕ್ಷದ ನಾಯಕಿ ಮಮತಾ ಒತ್ತಡಕ್ಕೆ ಮಣಿದು ರೈಲ್ವೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ದಿನೇಶ್ ತ್ರಿವೇದಿ ಪ್ರಧಾನಿ ಭಾಷಣದ ಸಮಯದಲ್ಲಿ ಸದನ ಪ್ರವೇಶಿಸಿದರು. ಆಗ ಹಿಂದಿನ ಸಾಲಿನಲ್ಲಿ ಕುಳಿತ ಅವರು ಕೆಲ ಸಮಯದ ನಂತರ ಮುಂದಿನ ಸಾಲಿನಲ್ಲಿ ಕಾಣಿಸಿಕೊಂಡರು. ಮತದಾನದ ಸಂದರ್ಭದಲ್ಲಿ ಮಧ್ಯದ ಸಾಲಿನಲ್ಲಿ ಇರುವ ತಮ್ಮ ಕುರ್ಚಿಗೆ ತೆರಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.