ADVERTISEMENT

ರಾಷ್ಟ್ರೀಯವಾದಿ ಪಡೆ ನಿರ್ಮಾಣದ ಗುರಿ: ಬಾಬಾ

​ಪ್ರಜಾವಾಣಿ ವಾರ್ತೆ
Published 9 ಜೂನ್ 2011, 19:30 IST
Last Updated 9 ಜೂನ್ 2011, 19:30 IST

ಹರಿದ್ವಾರ (ಪಿಟಿಐ): `ನಾನು ಯಾವುದೇ ತರಬೇತಿ ಪಡೆದ ಉಗ್ರರು ಅಥವಾ ಮಾವೊವಾದಿಗಳನ್ನು ತಯಾರು ಮಾಡುತ್ತೇನೆ ಎಂದು ಹೇಳಿಲ್ಲ. ಬದಲಿಗೆ ರಾಷ್ಟ್ರೀಯವಾದಿಗಳ ಪಡೆ ರಚಿಸಲಿದ್ದೇನೆ~ ಎಂದು ಬಾಬಾ ರಾಮ್‌ದೇವ್ ಹೇಳಿದ್ದಾರೆ.

ಸಶಸ್ತ್ರ ಯುವ ಪಡೆ ರಚನೆಯ ತಮ್ಮ ನಿರ್ಧಾರಕ್ಕೆ ವ್ಯಾಪಕ ಟೀಕೆಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಗುರುವಾರ ಅವರು ಈ ಸಮರ್ಥನೆ ನೀಡಿದ್ದಾರೆ. ಕಪ್ಪುಹಣದ ವಿರುದ್ಧ ಸಮರ ಸಾರಿ ಸತ್ಯಾಗ್ರಹ ನಡೆಸುತ್ತಿರುವ ರಾಮ್‌ದೇವ್ ಇಲ್ಲಿನ ಪತಂಜಲಿ ಯೋಗಪೀಠದಲ್ಲಿ ಅನುಯಾಯಿಗಳನ್ನು ಉದ್ದೇಶಿಸಿ ಮಾತನಾಡಿದರು.

`ನಾನೇನು ಹೇಳಿದ್ದೇನೆ ಎಂಬುದನ್ನು ಜನತೆ ಸರಿಯಾಗಿ ಅರ್ಥಮಾಡಿಕೊಳ್ಳಬೇಕು. ನಮ್ಮ ಬೇಡಿಕೆ ಈಡೇರುವತನಕ ಸತ್ಯಾಗ್ರಹದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ~ ಎಂದು ಅವರು ಸ್ಪಷ್ಟಪಡಿಸಿದರು.

ರಾಮಲೀಲಾ ಮೈದಾನದಲ್ಲಿ ನಡೆದ ಪೊಲೀಸರ ದೌರ್ಜನ್ಯದಿಂದ ಗಾಯಗೊಂಡಿರುವ ಸತ್ಯಾಗ್ರಹಿಗಳ ವೈದ್ಯಕೀಯ ಖರ್ಚನ್ನು ತಮ್ಮ ಪತಂಜಲಿ ಯೋಗಪೀಠವೇ ಭರಿಸುತ್ತದೆ ಎಂದು ಅವರು ತಿಳಿಸಿದರು.

ಕುಸಿಯುತ್ತಿರುವ ಆರೋಗ್ಯ: ರಾಮ್‌ದೇವ್ ಅವರ ಆರೋಗ್ಯ ಸ್ಥಿತಿ ಕ್ರಮೇಣ ಕುಸಿಯುತ್ತಿದೆ ಎಂದು ಅವರನ್ನು ನೋಡಿಕೊಳ್ಳುತ್ತಿರುವ ವೈದ್ಯರು ಆತಂಕ ವ್ಯಕ್ತಪಡಿಸಿದ್ದಾರೆ. `ನಿಂಬೆ ರಸ ಮತ್ತು ಜೇನು ಸೇವಿಸಲು ರಾಮ್‌ದೇವ್ ಒಪ್ಪಿಕೊಂಡಿದ್ದಾರೆ~ ಎಂದು ಹರಿದ್ವಾರದ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಹಿಂಸೆಗೆ ಬೆಂಬಲ ಇಲ್ಲ: ಅಣ್ಣಾ ಸ್ಪಷ್ಟನೆ

ಅಹಮದಾಬಾದ್ (ಪಿಟಿಐ): `ರಾಮ್‌ದೇವ್ ಅವರು ಅಹಿಂಸಾ ಮಾರ್ಗವನ್ನು ತೊರೆದರೆ ನಾವು ಅವರನ್ನು ತೊರೆಯುತ್ತೇವೆ~ ಎಂದು ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಸ್ಪಷ್ಟಪಡಿಸಿದ್ದಾರೆ.

`ನಮಗ್ಯಾರಿಗೂ ಹಿಂಸೆಯಲ್ಲಿ ನಂಬಿಕೆ ಇಲ್ಲ, ಭ್ರಷ್ಟಾಚಾರ ವಿರೋಧಿ ಆಂದೋಲನದಲ್ಲಿ ಹಿಂಸೆಗೆ ತಾವಿಲ್ಲ~ ಎಂದು ಅವರು ಸಶಸ್ತ್ರ ಪಡೆ ಕಟ್ಟುವ ರಾಮ್‌ದೇವ್ ಅವರ ಹೇಳಿಕೆಗೆ ಗುರುವಾರ ಪ್ರತಿಕ್ರಿಯಿಸಿದ್ದಾರೆ.

ರಾಮಲೀಲಾ ಮೈದಾನದಲ್ಲಿ ತಮ್ಮ ಅನುಯಾಯಿಗಳನ್ನು ಸರ್ಕಾರ ನಡೆಸಿಕೊಂಡ ರೀತಿಯಿಂದ ರಾಮ್‌ದೇವ್ ಹೀಗೆ ಹೇಳಿರಬಹುದು ಎಂದು ಸಹ ಅವರು ಇದೇ ಸಂದರ್ಭದಲ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.