ADVERTISEMENT

ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ ರದ್ದು

​ಪ್ರಜಾವಾಣಿ ವಾರ್ತೆ
Published 21 ಜುಲೈ 2013, 19:59 IST
Last Updated 21 ಜುಲೈ 2013, 19:59 IST

ವೈದ್ಯಕೀಯ ಕಾಲೇಜುಗಳ ಪ್ರವೇಶಕ್ಕೆ ರಾಷ್ಟ್ರೀಯ ಅರ್ಹತಾ   ಮತ್ತು ಪ್ರವೇಶ ಪರೀಕ್ಷೆಯನ್ನು (National     Eligibility-cum-Entrance Test&NEET ) ಸುಪ್ರೀಂಕೋರ್ಟ್‌ನ ನ್ಯಾಯಪೀಠವು ರದ್ದುಪಡಿಸಿರುವುದು ವಿದ್ಯಾರ್ಥಿಗಳಿಗೆ ತೀವ್ರ ನಿರಾಶೆ ಮೂಡಿಸಿದೆ. ತೀರ್ಪಿನಿಂದ  ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದ್ದರೆ, ಅನುದಾನರಹಿತ ಶಿಕ್ಷಣ ಸಂಸ್ಥೆ, ಕೋಚಿಂಗ್ ಕೇಂದ್ರಗಳು, ಹಿಂದುಳಿದ ವರ್ಗಗಳಲ್ಲಿಯೇ ಆರ್ಥಿಕವಾಗಿ ಮುಂದುವರೆದವರು ಸೇರಿದಂತೆ ಅನೇಕರ ಪಾಲಿಗೆ   ಅನುಕೂಲಕರವಾಗಿ ಪರಿಣಮಿಸಿದೆ.

ಖಾಸಗಿ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಂದ ವಂತಿಗೆ ಹೆಸರಿನಲ್ಲಿ ವಸೂಲಿ ಮಾಡುತ್ತಿರುವ ಸುಲಿಗೆಗೂ ಈ ತೀರ್ಪು ನೆರವಾಗಲಿದೆ. ರಾಜ್ಯಗಳ ಪ್ರವೇಶ ಪರೀಕ್ಷೆಯ ದುರುಪಯೋಗ ಮಾಡಿಕೊಳ್ಳುವ ಕೋಚಿಂಗ್ ತರಗತಿಗಳು, ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ಪಾಲಿಗೂ ಕರ್ಣಾನಂದಕರವಾಗಿದೆ.

`ಎಂಸಿಐ' ಉದ್ದೇಶ
ವೈದ್ಯಕೀಯ ಶಿಕ್ಷಣ ಸಂಸ್ಥೆಯ ನಿಯಂತ್ರಣ ಸಂಸ್ಥೆಯಾಗಿರುವ `ಭಾರತೀಯ ವೈದ್ಯಕೀಯ ಮಂಡಳಿಯು  (ಛಿಜ್ಚಿಚ್ಝ ಇಟ್ಠ್ಞ್ಚಜ್ಝಿ ಟ್ಛ ಐ್ಞಜಿ  ಇಐ), ವೈದ್ಯಕೀಯ ಶಿಕ್ಷಣದ ಪ್ರವೇಶ ಪರೀಕ್ಷೆ ಸರಳಗೊಳಿಸಲು, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸುಲಭವಾಗಿ ಸೀಟು ದೊರೆಯುವಂತಾಗಲು, ರಾಜ್ಯ ಸರ್ಕಾರ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳ ನಡುವಣ ಹೊಂದಾಣಿಕೆ ಮಟ್ಟ ಹಾಕಲು ದೇಶದಾದ್ಯಂತ ಏಕರೂಪದ ಪ್ರವೇಶ ಪರೀಕ್ಷೆ ನಡೆಸಲು ಉದ್ದೇಶಿಸಿತ್ತು.

ವಿದ್ಯಾರ್ಥಿಗಳು  ಬೇರೆ ಬೇರೆ ಪ್ರವೇಶ ಪರೀಕ್ಷೆಗಳಿಗಾಗಿ ಕಾಲೇಜ್‌ಗಳಿಂದ ಕಾಲೇಜ್‌ಗಳಿಗೆ ಅಲೆಯುವುದನ್ನು ತಪ್ಪಿಸಲು,  ಪ್ರವೇಶ ಖಾತ್ರಿ ಪಡೆಸಲು, ಆಯ್ಕೆ ಅವಕಾಶ ಸಾಧ್ಯತೆ ಹೆಚ್ಚಿಸುವುದೇ ಈ ಪ್ರವೇಶ ಪರೀಕ್ಷೆಯ ಮುಖ್ಯ ಉದ್ದೇಶವಾಗಿತ್ತು.

ಉನ್ನತ ಶಿಕ್ಷಣ ನಿಯಂತ್ರಿಸುವ ಉದ್ದೇಶದಿಂದಲೇ 2010ರಲ್ಲಿ ಈ ಸಂಬಂಧ ಆದೇಶ  ಹೊರಡಿಸಲಾಗಿತ್ತು. ವೈದ್ಯಕೀಯ ಸೀಟುಗಳನ್ನು ಮುಕ್ತ ಮಾರುಕಟ್ಟೆಯ ಬೆಲೆಗೆ ಮಾರಾಟ ಮಾಡಲಾಗುತ್ತಿದ್ದರಿಂದ ದೇಶದಾದ್ಯಂತ ಪ್ರವೇಶವು ದುಬಾರಿಯಾಗಿ ಪರಿಣಮಿಸಿರುವುದನ್ನು     ತಡೆಯುವುದೇ ಇದರ ಉದ್ದೇಶವಾಗಿತ್ತು.

ಪೀಠದ ವಾದ
ತ್ರೀಸದಸ್ಯ ಪೀಠದಲ್ಲಿ ಇಬ್ಬರು ನ್ಯಾಯಮೂರ್ತಿಗಳು `ಎಂಸಿಐ' ಅಧಿಸೂಚನೆಯು ಸಂವಿಧಾನ ವಿರೋಧಿ ಎಂದರೆ, ಮತ್ತೊಬ್ಬರು ಅದಕ್ಕೆ ಭಿನ್ನಮತದ ತೀರ್ಪು ನೀಡಿದ್ದಾರೆ. ಶಿಕ್ಷಣವು ಕೇಂದ್ರ ಮತ್ತು ರಾಜ್ಯಗಳ ಸಹವರ್ತಿ ಪಟ್ಟಿಯಲ್ಲಿ ಇರುವುದು ಮತ್ತು  ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ಸಂವಿಧಾನದತ್ತ ಹಕ್ಕುಗಳಿಗೆ `ಎಂಸಿಐ' ಆದೇಶವು ವಿರುದ್ಧವಾಗಿದೆ ಎಂದು ಇಬ್ಬರು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟಿದ್ದಾರೆ. ವೈದ್ಯಕೀಯ ಶಿಕ್ಷಣದ ಗುಣಮಟ್ಟ ನಿಗದಿಪಡಿಸಲಷ್ಟೇ `ಎಂಸಿಐ'ಗೆ ಮತ್ತು ಭಾರತೀಯ ದಂತವೈದ್ಯಕೀಯ ಮಂಡಳಿಗಳಿಗೆ (ಡಿಸಿಐ) ಅಧಿಕಾರ ಇದೆ ಎಂದು  2-1 ತೀರ್ಪಿನಲ್ಲಿ ತಿಳಿಸಲಾಗಿದೆ. ವೈದ್ಯಕೀಯ ಸೀಟುಗಳ ಹಂಚಿಕೆಯಲ್ಲಿ ನಡೆಯುತ್ತಿರುವ  ಭ್ರಷ್ಟಾಚಾರ ನಿಯಂತ್ರಿಸಲು 2010ರಲ್ಲಿ ಸುಪ್ರೀಂಕೋರ್ಟ್‌ನ ದ್ವಿಸದಸ್ಯ ಪೀಠವೇ ಆದೇಶ ನೀಡಿತ್ತು.

ಖಾಸಗಿ ಸಂಸ್ಥೆಗಳ ವಿರೋಧ
`ಎನ್‌ಇಇಟಿ'ಗೆ ಖಾಸಗಿ ಮತ್ತು ಅಲ್ಪಸಂಖ್ಯಾತ ಶಿಕ್ಷಣಗಳು ತೀವ್ರ ವಿರೋಧ ದಾಖಲಿಸಿದ್ದವು. ದೇಶದಲ್ಲಿ ಸದ್ಯಕ್ಕೆ 271 ವೈದ್ಯಕೀಯ ಕಾಲೇಜುಗಳಿವೆ. ಇದರಲ್ಲಿ 138 ಸರ್ಕಾರಿ ಕಾಲೇಜುಗಳಿದ್ದರೆ 133 ಖಾಸಗಿ ಶಿಕ್ಷಣ ಸಂಸ್ಥೆಗಳ ಒಡೆತನದಲ್ಲಿ ಇವೆ. 31 ಸಾವಿರದಷ್ಟು ಎಂಬಿಬಿಎಸ್, ಬಿಡಿಎಸ್ ಸೀಟುಗಳಿದ್ದರೆ, 11 ಸಾವಿರ ಎಂಡಿ ಸೀಟುಗಳಿವೆ.

ವಿದ್ಯಾರ್ಥಿಗಳಿಗೆ ಅನಾನುಕೂಲ
ದೇಶದ ಬೇರೆ, ಬೇರೆ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆಯಲು ಬಯಸುವ ವಿದ್ಯಾರ್ಥಿಗಳಿಗೆ ಈ ತೀರ್ಪಿನಿಂದ ಹಿನ್ನಡೆಯಾಗಲಿದೆ. ವಿದ್ಯಾರ್ಥಿಗಳ ಸಮಯ ಮತ್ತು ಹಣ ಮತ್ತೆ ಪೋಲಾಗಲಿದೆ. ಅವರಿಗೆ ಸರ್ಕಾರಿ ಸೀಟುಗಳೂ ಸುಲಭವಾಗಿ ದೊರೆಯಲಾರವು.

ಪುನರ್ ಪರಿಶೀಲನೆಗೆ ಅರ್ಜಿ
ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ಕೇಂದ್ರ ಆರೋಗ್ಯ ಸಚಿವಾಲಯ, ಪುನರ್ ಪರಿಶೀಲನಾ ಅರ್ಜಿ ಹಾಕಲು ಉದ್ದೇಶಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.