ADVERTISEMENT

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಪ್ರಕಟ: ಕನ್ನಡಕ್ಕೆ ಬಂಪರ್ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 19 ಮೇ 2011, 10:35 IST
Last Updated 19 ಮೇ 2011, 10:35 IST

ನವದೆಹಲಿ (ಪಿಟಿಐ): 58ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟವಾಗಿದ್ದು, ಮಲಯಾಳಂ ಚಲನಚಿತ್ರ ~ಆದಮಂಡೆ ಮಗನ್ ಅಬು~ ಚಿತ್ರಕ್ಕೆ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಲಭಿಸಿದೆ. 

ಕನ್ನಡದ ~ಪುಟ್ಟಕ್ಕನ ಹೈವೇ~ (ನಿದೇರ್ಶನ: ಬಿ.ಸುರೇಶ್) ಅತ್ಯುತ್ತಮ ಪ್ರಾದೇಶಿಕ ಚಿತ್ರ ಪ್ರಶಸ್ತಿಗೆ ಆಯ್ಕೆಯಾಗಿದೆ. ತಮಿಳು ನಟ ಧನುಶ್ (ಆದುಕಲಂ) ಹಾಗೂ ಮಲಯಾಳಂ ನಟ ಸಲೀಂ ಕುಮಾರ್ (ಆದಮಂಡೆ ಮಗನ್ ಅಬು) ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ತಮಿಳಿನ ಶರಣ್ಯಾ ಪುಣುವಣ್ಣನ್ ಹಾಗೂ ಮರಾಠಿ ಚಿತ್ರರಂಗದ ಮೈತಲಿ ಜಗಪತ್ ವಾರದ್ಕರ್ ಶ್ರೇಷ್ಠ ನಟಿ ಪ್ರಶಸ್ತಿ ಗಳಿಸಿದ್ದಾರೆ. ಈ ಬಾರಿ ಶ್ರೇಷ್ಠ ನಟ ಹಾಗೂ ನಟಿ ಪ್ರಶಸ್ತಿ ಇಬ್ಬಿಬ್ಬರಿಗೆ ನೀಡಿರುವುದು ವಿಶೇಷ.

ADVERTISEMENT

ಸಲ್ಮಾನ್ ಖಾನ್ ನಟಿಸಿದ ಹಿಂದಿ ಚಲನಚಿತ್ರ ~ದಬಾಂಗ್~ ಚಿತ್ರಕ್ಕೆ ವರ್ಷದ ಮನರಂಜನಾ ಚಿತ್ರ ಪ್ರಶಸ್ತಿ ದೊರೆತಿದೆ.

ಈ ಬಾರಿ ಪ್ರಶಸ್ತಿಗಾಗಿ 161 ಚಿತ್ರಗಳು ಪೈಪೋಟಿ ನಡೆಸಿದ್ದವು. ಇದುವರೆಗಿನ ಅತಿ ಹೆಚ್ಚು ಚಿತ್ರಗಳು ಸ್ಪರ್ಧೆಯಲ್ಲಿದ್ದದು ಇದೇ ಮೊದಲು. 

ನರ್ಗಿಸ್ ದತ್ತ ಪ್ರಶಸ್ತಿ ಬೆಂಗಾಳಿ ಚಲನಚಿತ್ರ ~ಮೊನೆರ್ ಮನುಷು~ಗೆ ಲಭಿಸಿದೆ. ಮೊದಲ ಪ್ರಯತ್ನಕ್ಕೆ ನೀಡಲಾಗುವ ಇಂದಿರಾಗಾಂಧಿ ಪ್ರಶಸ್ತಿ ಮರಾಠಿ ಚಲನಚಿತ್ರ ~ಬಾಬೂ ಬ್ಯಾಂಡ್ ಬಾಜಾ~ ನಿರ್ದೇಶಕರಿಗೆ ದೊರೆತಿದೆ.

ಇನ್ನು ಮಕ್ಕಳ ವಿಭಾಗದಲ್ಲಿ ಕನ್ನಡದ ರಾಮದಾಸ ನಾಯ್ಡು ನಿರ್ದೇಶನದ ~ಹೆಜ್ಜೆಗಳು~ ಚಿತ್ರಕ್ಕೆ ಶ್ರೇಷ್ಠ ಮಕ್ಕಳ ಚಿತ್ರ ಪ್ರಶಸ್ತಿ ದೊರೆತಿದೆ. ಹಾಗೂ ಇದೇ ಚಿತ್ರದಲ್ಲಿನ ನಟನೆಗಾಗಿಯೂ ಪ್ರಶಸ್ತಿ ಲಭಿಸಿದೆ. ನಟನೆ ಪ್ರಶಸ್ತಿಯು ಸಹ ನಾಲ್ವರು ಮಕ್ಕಳೊಂದಿಗೆ ಹಂಚಿಕೊಳ್ಳಬೇಕಾಗಿದೆ. 

ಪರಿಸರ ಕಾಳಜಿ ಚಿತ್ರದಲ್ಲಿ ಕನ್ನಡದ ಪಿ.ಶೇಷಾದ್ರಿ ನಿರ್ದೇಶನದ ~ಬೆಟ್ಟದ ಜೀವ~ ಚಿತ್ರಕ್ಕೆ ಪ್ರಶಸ್ತಿ ದೊರೆತಿದೆ. ಮನು ಚಕ್ರವರ್ತಿ ಅವರಿಗೆ ಉತ್ತಮ ವಿಮರ್ಶೆಗಾಗಿ ಪ್ರಶಸ್ತಿ ಲಭಿಸಿದೆ.

ಸುರೇಶ್ ವಾಡ್ಕರ್ ಹಾಗೂ ರೇಖಾ ಭಾರದ್ವಾಜ್ ಅವರಿಗೆ ಶ್ರೇಷ್ಠ ಗಾಯಕ ಹಾಗೂ ಗಾಯಕಿ ಪ್ರಶಸ್ತಿ ದೊರೆತಿದೆ. ರಿಷಿ ಕಪೂರ್ ನಟನೆಯ ~ದೊ ದೂನಿ ಚಾರ್~ ಚಿತ್ರಕ್ಕೆ ಅತ್ಯುತ್ತಮ ಹಿಂದಿ ಭಾಷೆ ಚಿತ್ರ ಪ್ರಶಸ್ತಿ ಲಭಿಸಿದೆ. 

ಪ್ರಶಸ್ತಿ ಘೋಷಿಸಿದ ತೀರ್ಪುಗಾರರು ಒಬ್ಬರಿಗಿಂಥ ಹೆಚ್ಚು ಮಂದಿ ಒಂದೇ  ಪ್ರಶಸ್ತಿಗಳನ್ನು  ಹಂಚಿಕೊಂಡವರನ್ನು ಪ್ರತ್ಯೇಕ ಪ್ರಶಸ್ತಿಗಳು ಎಂದೇ ಪರಿಗಣಿಸಬೇಕು ಎಂದು ಮಾಹಿತಿ ಹಾಗೂ ಪ್ರಸಾರ ಖಾತೆ ಸಚಿವೆ ಅಂಬಿಕಾ ಸೋನಿ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.