ADVERTISEMENT

ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಪುತ್ರನ ಚಿಂತಕರ ಚಾವಡಿಗೆ ವಿದೇಶಿ ದೇಣಿಗೆ; ಆರ್ಥಿಕ ಮೂಲದ ಬಗ್ಗೆ ಮಾಹಿತಿಯೂ ಇಲ್ಲ!

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2017, 13:02 IST
Last Updated 4 ನವೆಂಬರ್ 2017, 13:02 IST
ಕೃಪೆ: ಇಂಡಿಯನ್ ಫೌಂಡೇಶನ್
ಕೃಪೆ: ಇಂಡಿಯನ್ ಫೌಂಡೇಶನ್   

ನವದೆಹಲಿ: ಬಿಜೆಪಿ ಅಧ್ಯಕ್ಷ ಅಮಿತ್ ಷಾ ಪುತ್ರ ಜಯ್ ಅಮಿತ್ ಷಾ ಅವರ ಕಂಪೆನಿ ಅಕ್ರಮ ವ್ಯವಹಾರ ನಡೆಸಿದೆ ಎಂದು ಸುದ್ದಿ ಪ್ರಕಟಿಸಿದ್ದ ದಿ ವೈರ್ ಇದೀಗ ಅಜಿತ್ ದೋವಲ್ ಪುತ್ರ ಅವರು ನಿರ್ದೇಶಕರಾಗಿರುವ ಸಂಸ್ಥೆಗೆ ವಿದೇಶ ಮೂಲಗಳಿಂದ ಆರ್ಥಿಕ ಸಹಾಯ ಲಭಿಸುತ್ತಿದೆ ಎಂಬ ಸುದ್ದಿಯೊಂದನ್ನು ಪ್ರಕಟಿಸಿದೆ.

ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿರುವ ಅಜಿತ್ ದೋವಲ್ ಅವರ ಪುತ್ರ ಶೌರ್ಯ ದೋವಲ್ ಕಾರ್ಯ ನಿರ್ವಾಹಕ ನಿರ್ದೇಶಕರಾಗಿರುವ, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಮೊದಲಾದವರು ನಿರ್ದೇಶಕರಾಗಿರುವ ಇಂಡಿಯಾ ಫೌಂಡೇಶನ್ ಎಂಬ ಸಂಸ್ಥೆಗೆ ಭಾರತದ ಉದ್ಯಮಿಗಳಿಂದ ಮತ್ತು ವಿದೇಶ ಸಂಸ್ಥೆಗಳಿಂದ ಆರ್ಥಿಕ ಸಹಾಯ ಸಿಗುತ್ತಿದೆ ಎಂದು ದಿ ವೈರ್ ಆರೋಪಿಸಿದೆ.

ದೇಶದ ರಕ್ಷಣೆ ಮತ್ತು ಆರ್ಥಿಕ ಕ್ಷೇತ್ರದಲ್ಲಿನ ನೀತಿ ನಿರೂಪಣೆಗೆ ಸಂಬಂಧಪಟ್ಟ ಚರ್ಚೆ ಮತ್ತು ಸೆಮಿನಾರ್‍‍ಗಳನ್ನು ಆಯೋಜಿಸುವ ಚಿಂತಕರ ಚಾವಡಿಯಾಗಿದೆ ಇಂಡಿಯಾ ಫೌಂಡೇಷನ್.

ADVERTISEMENT

ಶೌರ್ಯ ದೋವಲ್ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಂ ಮಾಧವ್ ಜತೆಯಾಗಿ ನಿರ್ವಹಿಸುತ್ತಿರುವ ಈ ಫೌಂಡೇಷನ್‍ನ ನಿರ್ದೇಶಕರಲ್ಲಿ ನಿರ್ಮಲಾ ಸೀತಾರಾಮ್ ಮಾತ್ರವಲ್ಲದೆ ಕೇಂದ್ರ ಸಚಿವರಾದ ಸುರೇಶ್ ಪ್ರಭು, ಜಯಂತ್ ಸಿನ್ಹಾ, ಎಂ.ಜೆ ಅಕ್ಬರ್ ಮೊದಲಾದವರಿದ್ದಾರೆ. ಬಿಜೆಪಿ ಅಧಿಕಾರಕ್ಕೇರಿದ ನಂತರ ದೇಶದ ಅತೀ ಬಲಿಷ್ಠ ಚಿಂತಕರ ಚಾವಡಿ ಎಂದೆನಿಸಿಕೊಂಡಿದೆ ಇಂಡಿಯಾ ಫೌಂಡೇಶನ್.

ದಿ ವೈರ್  ಮಾಡಿರುವ ಆರೋಪಗಳೇನು?
ವಿದೇಶದಿಂದ ಆರ್ಥಿಕ ಸಹಾಯ ಪಡೆಯುತ್ತಿರುವ ಒಂದು ಸಂಸ್ಥೆಯಲ್ಲಿ ಕೇಂದ್ರದಲ್ಲಿ ಅಧಿಕಾರ ಹೊಂದಿರುವ  ರಕ್ಷಣಾ ಸಚಿವೆ ಅಂಗವಾಗಿರುವುದು ಹಿತಾಸಕ್ತಿ ಸಂಘರ್ಷ ಸೃಷ್ಟಿಸುತ್ತದೆ. ರಾಷ್ಟ್ರದ ಭದ್ರತಾ ಸಲಹೆಗಾರರ ಪುತ್ರ ಈ ಸಂಸ್ಥೆಯ ಉನ್ನತ ಹುದ್ದೆಯಲ್ಲಿರುವುದರಿಂದ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕಿದೆ.

ಈ ಫೌಂಡೇಶನ್ ಆಯೋಜಿಸಿದ ಸೆಮಿನಾರ್‍‍ಗಳಿಗೆ ಪ್ರಾಯೋಜಕತ್ವ ನೀಡಿದ ಕಂಪೆನಿಗಳಲ್ಲಿ ಬೋಯಿಂಗ್ ಕಂಪೆನಿ ಕೂಡಾ ಇದೆ. ಬೋಯಿಂಗ್‍ನಿಂದ 111 ವಿಮಾನಗಳನ್ನು ಖರೀದಿಸಲಿರುವ ₹70,000 ಕೋಟಿಯ ವ್ಯವಹಾರಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ನಡೆಯುತ್ತಿದೆ. ಬೋಯಿಂಗ್‍ನಿಂದ ಸಹಾಯಪಡೆದ ಇಂಡಿಯಾ ಫೌಂಡೇಷನ್‍ ನಿರ್ದೇಶಕರಲ್ಲಿ ವಿಮಾನಯಾನ ಸಚಿವಾಲಯದ ರಾಜ್ಯ ಖಾತೆ ಸಚಿವ ಜಯಂತ್ ಸಿನ್ಹಾ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ರಾಜ್ಯ ಖಾತೆ ಸಚಿವ ಎಂ.ಜೆ ಅಕ್ಬರ್  ಕೂಡಾ ಇದ್ದಾರೆ.

ಶಸ್ತ್ರಾಸ್ತ್ರ ಮತ್ತು ವಿಮಾನಯಾನ ಕಂಪನಿಗಳಿಗೆ ಹೊರತಾಗಿ ವಿದೇಶ ಬ್ಯಾಂಕುಗಳೂ ಆರ್ಥಿಕ ಸಹಾಯ ನೀಡಿವೆ. ಆದರೆ ಎಷ್ಟು ಮೊತ್ತವನ್ನು ನೀಡಿದೆ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ.

ನೀತಿ ನಿರ್ಧಾರಗಳ ಬಗ್ಗೆ ಬಿಜೆಪಿ ಮತ್ತು ಕೇಂದ್ರ ಸರ್ಕಾರದೊಂದಿಗೆ ಸಹಕರಿಸುವುದಾಗಿ ಶೌರ್ಯ ದೋವಲ್ ಈ ಹಿಂದೆ ಸಂದರ್ಶನವೊಂದರಲ್ಲಿ ಹೇಳಿದ್ದರು. ವಿದೇಶಿ ದೇಣಿಗೆ ಸ್ವೀಕರಿಸುವ ಈ ಸಂಸ್ಥೆಯ ನಿಲುವು ದೇಶದ ರಕ್ಷಣೆಯ ಮೇಲೆ ಪರಿಣಾಮ ಬೀರುತ್ತದೆ.

ಆದಾಯ ಮೂಲಗಳ ಬಗ್ಗೆ ಈ ಫೌಂಡೇಶನ್ ಸ್ಪಷ್ಟವಾಗಿ ಹೇಳಿಲ್ಲ. ಕಾನ್ಫರೆನ್ಸ್, ಜಾಹೀರಾತು, ಜರ್ನಲ್ ಇವೇ ಆದಾಯದ ಮೂಲ ಎಂದು ಶೌರ್ಯ ದೋವಲ್ ಹೇಳುತ್ತಿದ್ದಾರೆ. ಆದರೆ ನವದೆಹಲಿಯ ಪ್ರತಿಷ್ಠಿತ ಪ್ರದೇಶದಲ್ಲಿರುವ ಕಚೇರಿಯ ಬಾಡಿಗೆ, ಅಲ್ಲಿನ ನೌಕರರಿಗೆ ಸಂಬಳ ಹೇಗೆ ನೀಡಲಾಗುತ್ತದೆ ಎಂಬುದರ ಬಗ್ಗೆ ಮಾಹಿತಿ ಇಲ್ಲ. ಆದಾಗ್ಯೂ ಜರ್ನಲ್‍‌ನಲ್ಲಿ ಅಷ್ಟೊಂದು ಜಾಹೀರಾತುಗಳೂ ಇಲ್ಲ.

ಷೇರು ಮಾರುಕಟ್ಟೆ ಕ್ಷೇತ್ರದಲ್ಲಿದ್ದ ಝಿಯಸ್ ಕ್ಯಾಪಿಟಲ್ ಎಂಬ ಖಾಸಗಿ ಕಂಪೆನಿಯ ಮಾಲೀಕರಾಗಿದ್ದ ಶೌರ್ಯ ಕಳೆದ ವರ್ಷ ತನ್ನ ಕಂಪೆನಿಯನ್ನು ಜೆಮಿನಿ ಫಿನಾನ್ಶಿಯಲ್ ಸರ್ವೀಸ್ ಜತೆ ವಿಲೀನ ಮಾಡಿದ್ದರು. ಸೌದಿ ರಾಜ ಮನೆತನದ ಸದಸ್ಯರೊಬ್ಬರು ಜೆಮಿನಿ ಸರ್ವೀಸ್‍ನ ಅಧ್ಯಕ್ಷರಾಗಿದ್ದಾರೆ. ಏಷ್ಯಾದಲ್ಲಿನ ಅಭಿವೃದ್ಧಿಶೀಲ ರಾಷ್ಟ್ರಗಳೊಂದಿಗೂ, ಅಭಿವೃದ್ಧಿಹೊಂದಿದ ಶ್ರೀಮಂತ ರಾಷ್ಟ್ರಗಳ ಹೂಡಿಕೆ ಬಗ್ಗೆ ಕಾರ್ಯ ನಿರ್ವಹಿಸುತ್ತಿರುವ ಕಂಪೆನಿಯಾಗಿದೆ ಜೆಮಿನಿ.

ಯಾವ ಮೂಲದಿಂದ ಬರುತ್ತಿದೆ ವಿದೇಶಿ ದೇಣಿಗೆ?
ಇಂಡಿಯಾ ಫೌಂಡೇಶನ್‍ನ ವೆಬ್‍ಸೈಟ್‍ನಲ್ಲಿರುವ ಮಾಹಿತಿ ಪ್ರಕಾರ  ದೇಶದ ಸಾರ್ವಭೌಮತೆಯನ್ನು ಅಭಿವ್ಯಕ್ತಿ ಪಡಿಸುವ ಈ ಸಂಸ್ಥೆ ನಮ್ಮ ಸಮಾಜದಲ್ಲಿ ಭಾರತೀಯ ನಾಗರೀಕತೆಯ ಪ್ರಭಾವದ ಬಗ್ಗೆ ಅರಿಯಲು ಇರುವ ಚಿಂತಕರ ಚಾವಡಿ ಆಗಿದೆ.

ಈ ಸಂಸ್ಥೆಗೆ ವಿದೇಶಿ ದೇಣಿಗೆ ಲಭಿಸುತ್ತಿರುವ ವಿಷಯ ಬಗ್ಗೆ ದಿ ವೈರ್ ಇಲ್ಲಿನ ನಿರ್ದೇಶಕರಲ್ಲಿ ಪ್ರಶ್ನಿಸಿದರೂ ಯಾರೊಬ್ಬರೂ  ಇದಕ್ಕೆ ಉತ್ತರ ನೀಡಲಿಲ್ಲ, ಏತನ್ಮಧ್ಯೆ, ಇಂಡಿಯಾ ಫೌಂಡೇಶನ್‍ಗೆ 2022ರ ವರೆಗೆ ಕಾಲಾವಧಿ ಇರುವ ಎಫ್‌ಸಿಆರ್‍ಎ ಸರ್ಟಿಫಿಕೇಟ್ ಇದ್ದು, ಜೂನ್ 6, 2017ಕ್ಕೆ ಇದನ್ನು ನವೀಕರಿಸಲಾಗಿದೆ ಎಂದು  ಗೃಹ ಸಚಿವಾಲಯದ  fcraonline.nic.in  ವೆಬ್‍ಸೈಟ್  ದೃಢೀಕರಿಸಿದೆ.

ಇಂಡಿಯಾ ಫೌಂಡೇಶನ್‍ಗೆ ಯಾವಾಗ ಎಫ್‍ಸಿಆರ್‍ಎ ಸರ್ಟಿಫಿಕೇಟ್ ನೀಡಲಾಯಿತು ಎಂಬುದು ಎಫ್‍ಸಿಆರ್‍ಎ ವೆಬ್‌‍ಸೈಟ್‍ನಲ್ಲಿ ಎಲ್ಲಿಯೂ ಉಲ್ಲೇಖವಿಲ್ಲ,
ನವೀಕರಿಸಲಿರುವ ಕೊನೆಯ ದಿನಾಂಕವನ್ನು ಗಮನಿಸಿದರೆ ಇಂಡಿಯಾ ಫೌಂಡೇಶನ್ ಎಫ್‍ಸಿಆರ್‍ಎ ಪರವಾನಗಿ ಇದ್ದರೂ ಅಲ್ಲಿ ಫಾರಿನ್ ಕರೆನ್ಸಿ ರಿಟರ್ಸ್ ಎಂದು ನಮೂದಿಸಬೇಕಾದ ಜಾಗದಲ್ಲಿ ದೋವಲ್ ಅವರ ಇಂಡಿಯಾ ಫೌಂಡೇಶನ್ ಖಾಲಿ ಜಾಗವನ್ನು ಬಿಟ್ಟಿದೆ. ಅದೇ ವೇಳೆ ಇಂಡಿಯಾ  ಫೌಂಡೇಶನ್ ಎಂದು ಹುಡುಕಿದರೆ ಅದು  ಸೂರ್ಯಕಾಂತಿ ತ್ರಿಪಾಠಿ ಎಂಬವರು ನಡೆಸುವ ಟ್ರಸ್ಟ್ ಎಂದು ತೋರಿಸುತ್ತಿದೆ. 2004ರಲ್ಲಿ ನೋಂದಣಿಯಾದ ಟ್ರಸ್ಟ್ ಬೀದಿ ಮಕ್ಕಳಿಗೆ ಆಹಾರ, ವಸತಿ ಮತ್ತು ಬಡವರ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತದೆ.

ಎನ್‍ಜಿಒಗಳು ವಿದೇಶಿ ದೇಣಿಗೆಯನ್ನು ಬಳಸಬೇಕಾದರೆ ಪೂರ್ವಾನುಮತಿ ಪಡೆಯಬೇಕಿದೆ. ಆದರೆ ಎಫ್‍ಸಿಆರ್‍ಎ ವೆಬ್‌ಸೈಟ್ ಮಾಹಿತಿ ಪ್ರಕಾರ ದೆಹಲಿ ಪ್ರದೇಶದಲ್ಲಿರುವ ಎನ್‍ಜಿಒಗಳಿಗೆ ಅನುಮತಿ ನೀಡಿರುವ ಬಗ್ಗೆ ಮಾಹಿತಿ ಇರುವ ಭಾಗ ಖಾಲಿ ಬಿಡಲಾಗಿದೆ. ಇಲ್ಲಿ 2015ರ ವರೆಗಿನ ಯಾವುದೇ ಮಾಹಿತಿ ಇಲ್ಲಿಲ್ಲ. ಕಳೆದ ವರ್ಷದ ಮಾಹಿತಿ ಮಾತ್ರ ಇಲ್ಲಿ ಲಭ್ಯವಿದೆ.

ಎಫ್‍‌ಸಿಆರ್‍ಎ ಅರ್ಜಿ ಮತ್ತು ಪೂರ್ವಾನುಮತಿ ಪಡೆದು ತಾವು ವಿದೇಶ ದೇಣಿಗೆ ಪಡೆದಿದ್ದೀರಾ? ಎಂದು ದಿ ವೈರ್ ಶೌರ್ಯ ದೋವಲ್ ಅವರನ್ನು ಪ್ರಶ್ನಿಸಿದ್ದು, ಅಲ್ಲಿಂದ ಯಾವುದೇ ಪ್ರತಿಕ್ರಿಯೆ ಲಭಿಸಿಲ್ಲ.
ಕೆಲವೊಂದು ಬಾರಿ  ಎನ್‍‌ಜಿಒಗಳು ಕಮರ್ಷಿಯಲ್ ಸರ್ವೀಸ್ ಕಾಂಟ್ರಾಕ್ಟ್  ಮೂಲಕ ವಿದೇಶಿ ದೇಣಿಗೆಯವನ್ನು ಪಡೆಯುತ್ತವೆ. ಆದರೆ ತಮ್ಮ ಸಂಸ್ಥೆ ಯಾವುದೇ ರೀತಿಯ ವಾಣಿಜ್ಯ ವ್ಯವಹಾರಗಳನ್ನು ಮಾಡುವುದಿಲ್ಲ ಎಂದು ದೋವಲ್ ಹೇಳಿದ್ದರು.

ಎಫ್‍ಸಿಆರ್‍ಎ ಉಲ್ಲಂಘನೆ ಮಾಡಿದರೆ ಆ ಎನ್‍ಜಿಒಗಳ ಬ್ಯಾಂಕ್ ಖಾತೆಯನ್ನು ಸ್ಥಗಿತಗೊಳಿಸುವುದಾಗಿ ಮೋದಿ ಸರ್ಕಾರ ಎಚ್ಚರಿಸಿತ್ತು.ಆದರೆ ಬಿಜೆಪಿಯ ಹಿರಿಯ ನಾಯಕರೇ ಸದಸ್ಯರಾಗಿರುವ ಚಿಂತಕರ ಚಾವಡಿಗೆ ವಿದೇಶ ದೇಣಿಗೆ ಬರುತ್ತಿದ್ದರೂ ಈ ಬಗ್ಗೆ ಸರ್ಕಾರ ಜಾಣ ಮೌನ ವಹಿಸಿದೆ.

ಪ್ರಧಾನಿ ಕಚೇರಿಯಿಂದ ಉತ್ತರವಿಲ್ಲ
ಶೌರ್ಯ ದೋವಲ್ ಅವರ ಕಂಪೆನಿ ಬಗ್ಗೆ  ಹಾಗೂ ಕೇಂದ್ರ ಸಚಿವರು ಈ ಫೌಂಡೇಶನ್‍ನಲ್ಲಿ ನಿರ್ದೇಶಕರಾಗಿರುವ ಕಾರಣ ಅಲ್ಲಿ ಸಂಭವಿಸಬಹುದಾದ ಹಿತಾಸಕ್ತಿ ಸಂಘರ್ಷದ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರ ಕಚೇರಿಯ ಪ್ರಧಾನ ಕಾರ್ಯದರ್ಶಿ ನೃಪೇಂದ್ರ ಮಿಶ್ರಾ ಅವರಲ್ಲಿ ದಿ ವೈರ್ ಪ್ರಶ್ನೆ ಕೇಳಿದ್ದರೂ ಅಲ್ಲಿಂದ ಯಾವುದೇ ರೀತಿಯ ಉತ್ತರ ಲಭಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.