ADVERTISEMENT

ರಾಷ್ಟ್ರೀಯ ಮಕ್ಕಳ ನ್ಯಾಯಮಂಡಳಿ ಸ್ಥಾಪನೆಗೆ ಸತ್ಯಾರ್ಥಿ ಆಗ್ರಹ

ಪಿಟಿಐ
Published 8 ಏಪ್ರಿಲ್ 2018, 19:30 IST
Last Updated 8 ಏಪ್ರಿಲ್ 2018, 19:30 IST
ರಾಷ್ಟ್ರೀಯ ಮಕ್ಕಳ ನ್ಯಾಯಮಂಡಳಿ  ಸ್ಥಾಪನೆಗೆ ಸತ್ಯಾರ್ಥಿ ಆಗ್ರಹ
ರಾಷ್ಟ್ರೀಯ ಮಕ್ಕಳ ನ್ಯಾಯಮಂಡಳಿ ಸ್ಥಾಪನೆಗೆ ಸತ್ಯಾರ್ಥಿ ಆಗ್ರಹ   

ನವದೆಹಲಿ: ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳ ತ್ವರಿತ ವಿಲೇವಾರಿಗೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಮಾದರಿಯಲ್ಲಿ ರಾಷ್ಟ್ರೀಯ ಮಕ್ಕಳ ನ್ಯಾಯಮಂಡಳಿ ಸ್ಥಾಪಿಸಬೇಕು ಎಂದು ನೊಬೆಲ್ ಪುರಸ್ಕೃತ ಮಕ್ಕಳ ಹಕ್ಕುಗಳ ಹೋರಾಟಗಾರ ಕೈಲಾಶ್‌ ಸತ್ಯಾರ್ಥಿ ಆಗ್ರಹಿಸಿದರು.

‘ಮಕ್ಕಳ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯ ಪ್ರಕರಣಗಳು ದೇಶಕ್ಕೆ ಕೆಟ್ಟ ಹೆಸರು ತರುತ್ತಿವೆ. ‌ಪೋಕ್ಸೊ ರೀತಿಯ ಬಲಿಷ್ಠ ಕಾನೂನುಗಳು ದೇಶದಲ್ಲಿ ಇವೆ. ಆದರೆ, ನ್ಯಾಯಾಲಯದಲ್ಲಿ ವಿಚಾರಣೆ ಪೂರ್ಣಗೊಂಡು ಆರೋಪಿಗೆ ಶಿಕ್ಷೆಯಾಗಲು ಹಲವು ವರ್ಷಗಳೇ ಬೇಕು. ಇದರಿಂದಾಗಿ ಕಾನೂನಿನ ಬಗ್ಗೆ ಜನರಲ್ಲಿ ಭಯ ಇಲ್ಲವಾಗಿದೆ’ ಎಂದು ಪಿಟಿಐಗೆ ನೀಡಿರುವ ಸಂದರ್ಶನದಲ್ಲಿ ಅವರು ಬೇಸರ ವ್ಯಕ್ತಪಡಿಸಿದರು.

‘ಎನ್‌ಜಿಟಿ ಶಕ್ತಿಶಾಲಿಯಾಗಿದ್ದು, ಅರಣ್ಯ ನಾಶಕ್ಕೆ ಮುಂದಾಗಲು ಜನ ಭಯಪಡುವ ವಾತಾವರಣವನ್ನು ಅದು ಸೃಷ್ಟಿ ಮಾಡಿದೆ. ಇತ್ತೀಚಿನ ದಿನಗಳಲ್ಲಿ ಪರಿಸರ ಸಂರಕ್ಷಣೆಯಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತಿದೆ’ ಎಂದರು.

ADVERTISEMENT

‘ಇದೇ ರೀತಿಯಲ್ಲಿ ಮಕ್ಕಳಿಗಾಗಿ ನ್ಯಾಯ ಮಂಡಳಿ ರಚನೆಯಾದರೆ ಪ್ರಕರಣಗಳ ತ್ವರಿತ ವಿಲೇವಾರಿ ಸಾಧ್ಯವಾಗಲಿದೆ. ಶಿಕ್ಷೆಗೆ ಹೆದರಿ ಮಕ್ಕಳ ಮೇಲಿನ ದೌರ್ಜನ್ಯಗಳು ಕಡಿಮೆಯಾಗಲಿವೆ’ ಎಂದು ಅವರು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.