ADVERTISEMENT

ರಾಷ್ಟ್ರೀಯ : ಸುದ್ದಿ ಹಿನ್ನೆಲೆ : ಗರ್ಭಪಾತ ನಿಷೇಧಿಸುವ ಕರಾಳ ಕಾನೂನು...

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2012, 19:30 IST
Last Updated 18 ನವೆಂಬರ್ 2012, 19:30 IST

ದಂತ ವೈದ್ಯೆ ಸವಿತಾ ಹಾಲಪ್ಪನವರ (31) ಅವರು, ಜೀವ ವಿರೋಧಿಯಾದ ಗರ್ಭಪಾತ ನಿಷೇಧ ಕರಾಳ ಕಾನೂನಿನ ಕಾರಣಕ್ಕೆ ಐರ‌್ಲೆಂಡ್‌ನಲ್ಲಿ ಸಾವನ್ನಪ್ಪಿದ ದುರಂತ ಘಟನೆಯು ವಿಶ್ವದಾದ್ಯಂತ ವ್ಯಾಪಕ ಪ್ರತಿಭಟನೆಗೆ ಕಾರಣವಾಗಿದೆ. ಧಾರ್ಮಿಕ ಮೌಲ್ಯಗಳು ಮತ್ತು ಗರ್ಭಪಾತ ನಿಷೇಧಿಸುವ ಕಾನೂನುಗಳ ಮಧ್ಯೆ ಇರುವ ಸಂಕೀರ್ಣ ಸಂಬಂಧವು ಈಗ  ಮತ್ತೆ ಚರ್ಚೆಗೆ ಬರುವಂತಾಗಿದೆ.

ಕ್ಯಾಥೋಲಿಕ್ ಸಂಪ್ರದಾಯಶೀಲ ದೇಶವಾದ ಐರ‌್ಲೆಂಡ್‌ನಲ್ಲಿ, ಸಾಂಸ್ಕೃತಿಕ ಮತ್ತು ಧಾರ್ಮಿಕವಾಗಿ ಶಕ್ತಿಶಾಲಿಯಾದ ಗುಂಪು ದಶಕಗಳಿಂದಲೂ ಅಲ್ಲಿ ವೈದ್ಯ ವೃತ್ತಿ ಮೇಲೆ ನಿಯಂತ್ರಣ ಹೊಂದಿದೆ. ಐರ‌್ಲೆಂಡ್‌ನಲ್ಲಿ ಇರುವಂತಹ ಸಾಮಾಜಿಕ ಮತ್ತು ರಾಜಕೀಯ ಪರಿಸ್ಥಿತಿ ಇರುವ ಇತರ ಕೆಲ ದೇಶಗಳೂ ನೈತಿಕ, ಧಾರ್ಮಿಕ ಮತ್ತು ರಾಜಕೀಯ ಕಾರಣಗಳಿಗಾಗಿ ಗರ್ಭಪಾತ ನಿಷೇಧಿಸಿವೆ.

`ಭವಿಷ್ಯದ ತಾಯಿ~ಯ ಜೀವ ಉಳಿಸಲು ಕಾನೂನುಬದ್ಧ ಗರ್ಭಪಾತವನ್ನು 1951ರಲ್ಲಿಯೇ 16ನೇ ಪೋಪ್ ಪಿಯಸ್ ಅವರು ಬೆಂಬಲಿಸಿದ್ದರೂ, `ವ್ಯಾಟಿಕನ್ ಸಿಟಿ~ ಕೂಡ ಗರ್ಭಪಾತ  ನಿಷೇಧಿಸಿದೆ.

ನಿಷೇಧ ಜಾರಿಯಲ್ಲಿ ಇರುವ ದೇಶಗಳು
ಗರ್ಭಪಾತ ನಿಷೇಧ ವಿಷಯದಲ್ಲಿ ಐರ‌್ಲೆಂಡ್ ದೇಶವೊಂದೇ `ಖಳನಾಯಕ~ನ ಸ್ಥಾನದಲ್ಲಿ ಇಲ್ಲ.  ಡೊಮಿನಿಯನ್ ಗಣರಾಜ್ಯ, ಎಲ್‌ಸಾಲ್ವಡಾರ್, ನಿಕರಗುವಾ, ಪೋಲಂಡ್, ಚಿಲಿ ಮತ್ತು ಯೂರೋಪ್‌ನ ಮಾಲ್ಟಾದಲ್ಲಿ ಧಾರ್ಮಿಕ ಕಾರಣಗಳಿಗೆ ಗರ್ಭಪಾತ ನಿಷೇಧಿಸಲಾಗಿದೆ.

ಮಹಿಳೆಯ ಜೀವ ಅಪಾಯದಲ್ಲಿದ್ದರೂ ಗರ್ಭಪಾತ ಮಾಡಿಸಬಾರದು ಎನ್ನುವ ಅಮಾನವೀಯ ಕರಾಳ ಕಾನೂನು ಈ ದೇಶಗಳಲ್ಲಿ ಜಾರಿಯಲ್ಲಿ ಇದೆ.ಐರ‌್ಲೆಂಡ್‌ನಲ್ಲಿಯೂ ಸಂವಿಧಾನವು ಅಧಿಕೃತವಾಗಿಯೇ ಗರ್ಭಪಾತ ನಿಷೇಧಿಸಿದೆ. ಮಹಿಳೆಯ ಜೀವ ಅಪಾಯದಲ್ಲಿ ಇದ್ದಾಗ ಗರ್ಭಪಾತಕ್ಕೆ ಅವಕಾಶ ಮಾಡಿಕೊಡುವ ಕುರಿತು ಅಲ್ಲಿನ ಸುಪ್ರೀಂ ಕೋರ್ಟ್ 1992ರಲ್ಲಿ ತೀರ್ಪು ನೀಡಿದೆ. ಕೋರ್ಟ್‌ನ ಈ ನಿರ್ದೇಶನಕ್ಕೆ ಸಂಬಂಧಿಸಿದಂತೆ ಸೂಕ್ತ ವರದಿ ನೀಡಲು ಐರ‌್ಲೆಂಡ್ ಸರ್ಕಾರ ಸಮಿತಿಯೊಂದನ್ನು ಇತ್ತೀಚೆಗೆ ರಚಿಸಿದೆ.

ದಕ್ಷಿಣ ಆಫ್ರಿಕಾ ಹೊರತುಪಡಿಸಿ ಆಫ್ರಿಕಾ ಖಂಡದ ಬಹುತೇಕ ದೇಶಗಳಲ್ಲಿಯೂ ಗರ್ಭಿಣಿಯ ಜೀವ, ಆರೋಗ್ಯ ಮತ್ತು ಮಾನಸಿಕ ಆರೋಗ್ಯಕ್ಕೆ ಧಕ್ಕೆ ಒದಗುವ ಸಂದರ್ಭ ಹೊರತುಪಡಿಸಿದ ಗರ್ಭಪಾತವು ಕಾನೂನುಬಾಹಿರ ಕೃತ್ಯವಾಗಿದೆ.

ಭಾರತದಲ್ಲಿ...
ನಮ್ಮಲ್ಲಿಯೂ 1971ರಲ್ಲಿಯೇ ಗರ್ಭಪಾತ ಕಾನೂನುಬದ್ಧಗೊಳಿಸಲಾಗಿದೆ. ಆದರೆ, ಭ್ರೂಣವು 20 ವಾರಗಳಿಗಿಂತ ಹೆಚ್ಚಿನ ಅವಧಿಯದ್ದು ಆಗಿದ್ದರೆ  ಗರ್ಭಪಾತಕ್ಕೆ ಕಾನೂನಿನಲ್ಲಿಯೂ ಅವಕಾಶ ಇಲ್ಲ.ಗರ್ಭದಲ್ಲಿನ ಶಿಶುವಿನ ಹೃದಯದಲ್ಲಿ ದೋಷ ಇರುವುದು ಪತ್ತೆಯಾದ ಹಿನ್ನೆಲೆಯಲ್ಲಿ, ಗರ್ಭಪಾತಕ್ಕೆ ಅವಕಾಶ ಮಾಡಿಕೊಡಬೇಕು ಎನ್ನುವ ದಂಪತಿಯ ಮನವಿಯನ್ನು ಬಾಂಬೆ ಹೈಕೋರ್ಟ್ 2008ರಲ್ಲಿ  ತಳ್ಳಿ ಹಾಕಿತ್ತು. ಇದು ಕೂಡ ಸಾಕಷ್ಟು ಚರ್ಚೆಗೆ ಎಡೆಮಾಡಿಕೊಟ್ಟಿತ್ತು.

ನಮ್ಮಲ್ಲಿ ಗರ್ಭಪಾತವು ಕಾನೂನುಬದ್ಧವಾಗಿದ್ದರೂ, ಅರ್ಧದಷ್ಟು ಗರ್ಭಪಾತಗಳು ಸಮಾಜಕ್ಕೆ ಹೆದರಿ ಅನಧಿಕೃತ ಆಸ್ಪತ್ರೆಗಳಲ್ಲಿಯೇ ನಡೆಯುತ್ತವೆ. ವಿವಾಹಪೂರ್ವ ಲೈಂಗಿಕತೆ, ಒಲ್ಲದ ತಾಯ್ತನ, ಸಿಗದ ಗಂಡನ ಒಪ್ಪಿಗೆ ಮತ್ತಿತರ ಕಾರಣಗಳಿಗೆ ಬಹುತೇಕ ಗರ್ಭಪಾತಗಳು ಅಕ್ರಮವಾಗಿಯೇ ನಡೆಯುತ್ತವೆ.

ಜಾಗತಿಕ ದೃಷ್ಟಿಕೋನ
ವಿಶ್ವಸಂಸ್ಥೆ ನಡೆಸಿದ `ವಿಶ್ವ ಗರ್ಭಪಾತ ನೀತಿ-2011~ರ ಅಧ್ಯಯನದ ಪ್ರಕಾರ, ಬಹುತೇಕ ದೇಶಗಳು ಮಹಿಳೆಯ ದೈಹಿಕ ಆರೋಗ್ಯ ರಕ್ಷಿಸಲು ಗರ್ಭಪಾತಕ್ಕೆ ಸಮ್ಮತಿ ವ್ಯಕ್ತಪಡಿಸಿವೆ. ಅತ್ಯಾಚಾರ ಮತ್ತು ರಕ್ತ ಸಂಬಂಧಿಗಳ ಜತೆಗಿನ ಲೈಂಗಿಕ ಸಂಬಂಧ ಪ್ರಕರಣಗಳಲ್ಲಿಯೂ ಗರ್ಭಪಾತ  ಕಾನೂನುಬದ್ಧಗೊಳಿಸಲಾಗಿದೆ.

ಅಮೆರಿಕದಲ್ಲಿ ಇತ್ತೀಚೆಗೆ ನಡೆದ ಅಧ್ಯಕ್ಷ ಚುನಾವಣೆಯಲ್ಲಿಯೂ `ಗರ್ಭಪಾತ~ವು ಪ್ರಮುಖ ವಿಷಯವಾಗಿತ್ತು.
ಕೆಲ ಸಂಪ್ರದಾಯವಾದಿ ಗುಂಪುಗಳು `ಗರ್ಭಪಾತ ವಿರುದ್ಧ~ದ ಪ್ರಚಾರಕ್ಕೆ ಭಾರಿ ಮೊತ್ತವನ್ನೇ ಖರ್ಚು ಮಾಡಿದ್ದವು.

ಗರ್ಭಪಾತದ ಕಾರಣಗಳು
ವಿಶ್ವದಾದ್ಯಂತ ಬೇರೆ, ಬೇರೆ ಕಾರಣಗಳಿಗೆ ಅಸಂಖ್ಯ ಗರ್ಭಪಾತಗಳು ನಡೆಯುತ್ತಲೇ ಇರುತ್ತವೆ.  ಯುವತಿ / ಮಹಿಳೆಯರ ಅಪ್ರಬುದ್ಧತೆ, ಗರ್ಭಿಣಿಯ ಸೂಕ್ಷ್ಮ ಆರೋಗ್ಯ, ಅತ್ಯಾಚಾರ, ಶಿಕ್ಷಣ ಮತ್ತು ವೃತ್ತಿಗೆ ಅಡಚಣೆ, ಮಾನಸಿಕ - ದೈಹಿಕ ಆರೋಗ್ಯ, ಮಗುವಿನ ಪಾಲನೆಗೆ ಸೂಕ್ತ ಹಣಕಾಸು ಸೌಲಭ್ಯ ಇಲ್ಲದಿರುವುದು, ಮಾನವ ಸಂಬಂಧಗಳು ಮುಂತಾದವುಗಳನ್ನು ಗುರುತಿಸಲಾಗಿದೆ.

ನಿಷೇಧ ಪ್ರತಿಪಾದನೆ
ಅನಪೇಕ್ಷಿತ ಗರ್ಭ ತೆಗೆಯುವುದನ್ನು ನಿಷೇಧಿಸಲು ಹಲವಾರು ಕಾರಣಗಳನ್ನು ನೀಡಲಾಗುತ್ತದೆ. ಜೀವ ಪವಿತ್ರವಾದದ್ದು. ಮಗು- ದೇವರ ಬಹು ಅಮೂಲ್ಯವಾದ ಆಶೀರ್ವಾದ. ಅದನ್ನು ಕೊಲ್ಲುವ ಹಕ್ಕು ಯಾರಿಗೂ ಇಲ್ಲ ಎನ್ನುವುದು ಗರ್ಭಪಾತ ವಿರೋಧಿಗಳ ವಾದ. ಗರ್ಭಪಾತವು ಪಾಪ ಕೃತ್ಯ ಎಂದು ಬೈಬಲ್‌ನಲ್ಲಿ ಪ್ರತಿಪಾದಿಸಲಾಗಿದೆ.

ಬೆಂಬಲಿಗರ ವಾದ
ಅನಿರೀಕ್ಷಿತವಾದ ಗರ್ಭ ತೆಗೆಸುವುದು ಮಹಿಳೆಯ ಹಕ್ಕು. ಇದು ಜೀವ ರಕ್ಷಿಸುವುದಕ್ಕಿಂತಲೂ ಹೆಚ್ಚು ಮಹತ್ವದ್ದು ಎಂದೂ ಕೆಲವರು ವಾದಿಸುತ್ತಾರೆ. ಗರ್ಭಾಂಕುರದ ಹಂತದಲ್ಲಿಯೇ `ಜೀವ~ ಅಥವಾ ಬದುಕು ಆರಂಭಗೊಳ್ಳುವುದರಿಂದ, ವ್ಯಕ್ತಿಯ  ಬದುಕುವ ಹಕ್ಕಿನಂತೆಯೇ ಗರ್ಭಕ್ಕೂ (ಶಿಶುವಿಗೂ) ಅದರದ್ದೇ ಆದ ಬದುಕುವ ಹಕ್ಕು ಇದೆ. ಬದುಕಿನ / ಜೀವದ ಪಾವಿತ್ರ್ಯವನ್ನು ಗರ್ಭದಿಂದಲೇ ಗೌರವಿಸಬೇಕು ಎಂದೂ ಅನೇಕರು ವಾದಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.