ADVERTISEMENT

ರಾಹುಲ್‌ ಗಾಂಧಿ–ಚೀನಾ ರಾಯಭಾರಿ ಭೇಟಿ ನಿಜವೆಂದ ಕಾಂಗ್ರೆಸ್‌

ಏಜೆನ್ಸೀಸ್
Published 10 ಜುಲೈ 2017, 11:16 IST
Last Updated 10 ಜುಲೈ 2017, 11:16 IST
ರಾಹುಲ್ ಗಾಂಧಿ (ಸಂಗ್ರಹ ಚಿತ್ರ)
ರಾಹುಲ್ ಗಾಂಧಿ (ಸಂಗ್ರಹ ಚಿತ್ರ)   

ನವದೆಹಲಿ: ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಎರಡು ದಿನಗಳ ಹಿಂದೆ ಚೀನಾ ರಾಯಭಾರಿಯನ್ನು ಭೇಟಿಯಾಗಿ ಗಡಿಯಲ್ಲಿನ ಉದ್ವಿಗ್ನ ಪರಿಸ್ಥಿತಿ ಬಗ್ಗೆ ಮಾತುಕತೆ ನಡೆಸಿದ್ದನ್ನು ಸ್ಪಷ್ಟಪಡಿಸಲು ಹಿಂದೇಟು ಹಾಕಿದ್ದ ಕಾಂಗ್ರೆಸ್‌ ಕೊನೆಗೂ ಆ ಬಗ್ಗೆ ಸ್ಪಷ್ಟನೆ ನೀಡಿದೆ. ರಾಹುಲ್‌ ಗಾಂಧಿ ಅವರು ಚೀನಾ ರಾಯಭಾರಿಯನ್ನು ಭೇಟಿಯಾಗಿರುವುದಕ್ಕೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು.

ರಾಹುಲ್ ಅವರು ಚೀನಾ ರಾಯಭಾರಿ ಲುವೊ ಝವೊಹುಯಿ ಅವರನ್ನು ಮಾತ್ರವಲ್ಲದೆ, ಭೂತಾನ್‌ನ ರಾಯಭಾರಿ ಮತ್ತು ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಶಿವಶಂಕರ್ ಮೆನನ್ ಅವರನ್ನೂ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸರ್ಜೆವಾಲ ತಿಳಿಸಿದ್ದಾರೆ.

ವಿವಿಧ ದೇಶಗಳ ರಾಯಭಾರಿಗಳು ಸೌಜನ್ಯದ ಮೇರೆಗೆ ಆಗಾಗ ಕಾಂಗ್ರೆಸ್‌ ಅಧ್ಯಕ್ಷೆ ಮತ್ತು ಉಪಾಧ್ಯಕ್ಷರನ್ನು ಭೇಟಿಯಾಗಿ ಮಾತುಕತೆ ನಡೆಸುತ್ತಾರೆ ಎಂದೂ ಸರ್ಜೆವಾಲ ಹೇಳಿದ್ದಾರೆ.

ADVERTISEMENT

ರಾಹುಲ್ ಅವರು ಚೀನಾ ರಾಯಭಾರಿಯನ್ನು ಭೇಟಿಯಾಗಿ ಸಿಕ್ಕಿಂ ಗಡಿಯಲ್ಲಿನ ಉದ್ವಿಗ್ನ ಪರಿಸ್ಥಿತಿ ಬಗ್ಗೆ ಮಾತುಕತೆ ನಡೆಸಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಇದನ್ನು ಕಾಂಗ್ರೆಸ್‌ ನಿರಾಕರಿಸಿತ್ತು. ಭೇಟಿ ಬಗ್ಗೆ ಚೀನಾ ರಾಯಭಾರ ಕಚೇರಿಯ ವೆಬ್‌ಸೈಟ್‌ನಲ್ಲೂ ಮಾಹಿತಿ ಪ್ರಕಟಿಸಲಾಗಿತ್ತಾದರೂ ಇದೀಗ ಅಳಿಸಿಹಾಕಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.