ADVERTISEMENT

ರಿಸೋರ್ಸ್‌ ಸ್ಯಾಟ್‌–2 ಎ ಉಡಾವಣೆ ಯಶಸ್ವಿ

ಪಿಎಸ್‌ಎಲ್‌ವಿ ಉಡ್ಡಯನ ವಾಹನದಿಂದ 38 ನೇ ಉಡಾವಣಾ ಹೆಗ್ಗಳಿಕೆ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2016, 19:30 IST
Last Updated 7 ಡಿಸೆಂಬರ್ 2016, 19:30 IST
ಆಕಾಶದತ್ತ ರಿಸೋರ್ಸ್‌ ಸ್ಯಾಟ್‌–2 ಎ ದೂರಸಂವೇದಿ ಉಪಗ್ರಹ
ಆಕಾಶದತ್ತ ರಿಸೋರ್ಸ್‌ ಸ್ಯಾಟ್‌–2 ಎ ದೂರಸಂವೇದಿ ಉಪಗ್ರಹ   

ಶ್ರೀಹರಿಕೋಟ: ಭಾರತೀಯ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಪ್ರಯೋಜನವಾಗಬಲ್ಲ ದೂರ ಸಂವೇದಿ ಉಪಗ್ರಹ ‘ರಿಸೋರ್ಸ್‌ಸ್ಯಾಟ್‌–2 ಎ’ ಉಡಾವಣೆ ಬುಧವಾರ ಬೆಳಿಗ್ಗೆ ಇಲ್ಲಿನ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಲ್ಲಿ ಯಶಸ್ವಿಯಾಗಿ ನಡೆಯಿತು.

1235 ಕೆ.ಜಿ ತೂಕದ ಮೂರು ಹಂತಗಳ ಕ್ಯಾಮೆರಾ ವ್ಯವಸ್ಥೆಯ ಪೇಲೋಡ್‌ಗಳನ್ನು ಹೊತ್ತ ಪಿಎಸ್‌ಎಲ್‌ವಿ– ಸಿ 36 ರಾಕೆಟ್‌ ನಿಗದಿತ ಸಮಯಕ್ಕೆ ಸರಿಯಾಗಿ ನಭಕ್ಕೆ ಜಿಗಿಯಿತು. ಇದರೊಂದಿಗೆ ಪಿಎಸ್‌ಎಲ್‌ವಿ ಉಡ್ಡಯನ ವಾಹನವು 38 ನೇ ಉಡಾವಣಾ ಹೆಗ್ಗಳಿಕೆಗೂ ಪಾತ್ರವಾಯಿತು.

ಪಿಎಸ್ಎಲ್‌ವಿ ಬೆಳಿಗ್ಗೆ 10.25 ಕ್ಕೆ ಉಡ್ಡಯನ ವೇದಿಕೆಯಿಂದ ಚಿಮ್ಮಿತು. ಭೂಮಿಯಿಂದ 824 ಕಿ.ಮೀ ಎತ್ತರದಲ್ಲಿರುವ ಧ್ರುವೀಯ ಸೂರ್ಯಸ್ಥಾಯಿ ಕಕ್ಷೆಯನ್ನು ತಲುಪುವವರೆಗಿನ ಎಲ್ಲ ಹಂತಗಳಲ್ಲಿಯೂ ದಹನ ಮತ್ತು ಬೇರ್ಪಡಿಕೆಯ ಪ್ರಕ್ರಿಯೆ ನಿಖರವಾಗಿ ನಡೆಯಿತು. 17 ನಿಮಿಷ 5 ಸೆಕೆಂಡುಗಳ ಯಾನ ನಡೆಸಿದ ನೌಕೆಯು ನಿಗದಿತ ಕಕ್ಷೆಯಲ್ಲಿ ಉಪಗ್ರಹವನ್ನು ನೆಲೆಗೊಳಿಸಿತು.

ಮಾತೃ ನೌಕೆಯಿಂದ ಬೇರ್ಪಟ್ಟ ಉಪಗ್ರಹದ ಸೌರ ಫಲಕಗಳು ಸ್ವಯಂಚಾಲಿತವಾಗಿ ತೆರೆದುಕೊಂಡವು. ಈ ಪ್ರಕ್ರಿಯೆ ಪೂರ್ಣಗೊಳ್ಳುತ್ತಿದ್ದಂತೆ ಬೆಂಗಳೂರಿನಲ್ಲಿರುವ  ಇಸ್ರೊದ ಟೆಲಿಮೆಟ್ರಿ, ಟ್ರ್ಯಾಕಿಂಗ್‌ ಮತ್ತು ಕಮಾಂಡ್‌ ನೆಟ್‌ವರ್ಕ್‌ ಉಪಗ್ರಹವನ್ನು ನಿಯಂತ್ರಣಕ್ಕೆ ಪಡೆದುಕೊಂಡಿತು. ಮುಂದಿನ ಕೆಲವೇ ದಿನಗಳಲ್ಲಿ ಉಪಗ್ರಹ ಕೆಲಸ ಆರಂಭಿಸಲಿದೆ. ಮೂರು ಹಂತಗಳ ಕ್ಯಾಮೆರಾ ವ್ಯವಸ್ಥೆಯ ಮೂಲಕ ಮಾಹಿತಿ ಮತ್ತು ಚಿತ್ರಗಳನ್ನು ರವಾನಿಸಲಿದೆ.

ದೇಶ– ವಿದೇಶಗಳಲ್ಲಿನ ನೈಸರ್ಗಿಕ ಸಂಪನ್ಮೂಲಗಳ ನಿರ್ವಹಣೆಯಲ್ಲಿ ಈ ಉಪಗ್ರಹದ ಮಾಹಿತಿ ಅತ್ಯಂತ ಉಪಯುಕ್ತ. ‘ಪಿಎಸ್‌ಎಲ್‌ವಿಯ ಪಥದರ್ಶಕ ಕಾರ್ಯಕ್ಕೆ  ಇದೇ ಮೊದಲ ಬಾರಿಗೆ ನಮ್ಮದೇ  ಆದ ‘ನಾವಿಕ್‌’ ವ್ಯವಸ್ಥೆಯನ್ನು ಬಳಸಿಕೊಂಡಿದ್ದೇವೆ. ‘ನಾವಿಕ್‌’ನ ಪ್ರೊಸೆಸರ್‌ ಮತ್ತು ರಿಸೀವರ್‌ ಪಿಎಸ್‌ಎಲ್‌ವಿಯ ಪಥದರ್ಶಕ ಕಾರ್ಯಕ್ಕೆ ನೆರವಾಯಿತು’ ಎಂದು ವಿಕ್ರಂ ಸಾರಾಭಾಯಿ ಬಾಹ್ಯಾಕಾಶ ಕೇಂದ್ರದ ನಿರ್ದೇಶಕ ಕೆ. ಸಿವನ್‌ ಅವರು ಬಳಿಕ ಸುದ್ದಿಗಾರರಿಗೆ ತಿಳಿಸಿದರು.

‘ಜಿಎಸ್‌ಎಲ್‌ವಿ ಎಂಕೆ 3’ 2017 ರ ಜನವರಿ 20ರಂದು ಉಡಾವಣೆಗೊಳ್ಳಲಿದೆ. 2016 ರಲ್ಲಿ ಒಟ್ಟು ಒಂಬತ್ತು ಉಡಾವಣೆಗಳಾಗಿವೆ ಎಂದು ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದ ನಿರ್ದೇಶಕ ಪಿ. ಕುಂಞಕೃಷ್ಣನ್‌ ತಿಳಿಸಿದರು.

ಪಿಎಸ್‌ಎಲ್‌ವಿ ಸಾಮರ್ಥ್ಯ ಸಾಬೀತು: ಪಿಎಸ್‌ಎಲ್‌ವಿ ರಾಕೆಟ್‌ ಪುನಃ ತನ್ನ ಶಕ್ತಿಯನ್ನು ಸಾಬೀತುಪಡಿಸಿದೆ. ಇಲ್ಲಿಯವರೆಗೆ 122 ಉಪಗ್ರಹಗಳನ್ನು ಉಡಾವಣೆ ಮಾಡಿದ್ದು, ಇದರಲ್ಲಿ ಭಾರತೀಯ ಉಪಗ್ರಹಗಳ ಸಂಖ್ಯೆ 43 ಮತ್ತು ವಿದೇಶಿ ಉಪಗ್ರಹಗಳ ಸಂಖ್ಯೆ 79.

ರೈತ ಸಹಾಯಕ ಉಪಗ್ರಹ
ರಿಸೋರ್ಸ್‌ ಸ್ಯಾಟ್‌ –2 ಎ ಕಳುಹಿಸುವ ಮಾಹಿತಿ ಮತ್ತು ಚಿತ್ರಗಳು ವಿಶೇಷವಾಗಿ ರೈತರಿಗೆ ಪ್ರಯೋಜನವಾಗಲಿದೆ ಎಂದು ಇಸ್ರೊ ವಿಜ್ಞಾನಿಗಳು ತಿಳಿಸಿದ್ದಾರೆ.  ವಿವಿಧ ಬೆಳೆಗಳ ಪ್ರದೇಶದ ವ್ಯಾಪ್ತಿ, ಕೃಷಿ ಉತ್ಪಾದನೆಯಲ್ಲಿ ಅಂದಾಜು, ಬರ ಪ್ರದೇಶದ ಮಾಹಿತಿ, ಸಾಯಿಲ್‌ ಮ್ಯಾಪಿಂಗ್‌, ಇಳುವರಿ ವ್ಯವಸ್ಥೆಯ ವಿಶ್ಲೇಷಣೆಗೆ ಮತ್ತು ತೋಟದ ಬೆಳೆಗಳಿಗೆ ಅಗತ್ಯ ಸಲಹೆ ಸೂಚನೆಗಳನ್ನು ನೀಡಲಿದೆ.

ಉಪಗ್ರಹ ವಿಶೇಷತೆ
ರಿಸೋರ್ಸ್‌ ಸ್ಯಾಟ್‌ 1 ಮತ್ತು 2 ರಲ್ಲಿ ಇದ್ದಂತೆ ಈಗ ರವಾನೆಗೊಂಡಿರುವ ಉಪಗ್ರಹದಲ್ಲೂ ಮೂರು ಹಂತಗಳ  ಕ್ಯಾಮೆರಾ ವ್ಯವಸ್ಥೆ ಇದೆ. ಅವುಗಳೆಂದರೆ,  ಅಡ್ವಾನ್ಸ್‌ಡ್‌ ವೈಡ್‌ ಫೀಲ್ಡ್‌  ಸೆನ್ಸರ್‌, ಲೀನಿಯರ್‌ ಇಮೇಜಿಂಗ್‌ ಸೆಲ್ಫ್‌ ಸ್ಕ್ಯಾನರ್‌–3 ಕ್ಯಾಮೆರಾಗಳು ಮತ್ತು ಲೀನಿಯೆರ್‌ ಇಮೇಜಿಂಗ್‌ ಸೆಲ್ಫ್‌ ಸ್ಕ್ಯಾನರ್‌–4 ಕ್ಯಾಮೆರಾ ಅತ್ಯಂತ ಶಕ್ತಿಶಾಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.