ನವದೆಹಲಿ (ಪಿಟಿಐ): ದೂರವಾಣಿ ತರಂಗಾಂತರ ಹಂಚಿಕೆ ಹರಾಜಿನ ಮೂಲ ದರವನ್ನು ಕೇಂದ್ರ ಸಚಿವ ಸಂಪುಟವು ಶುಕ್ರವಾರ 14 ಸಾವಿರ ಕೋಟಿ ರೂಪಾಯಿಗಳಿಗೆ ನಿಗದಿ ಮಾಡಿದೆ.
ಪಿ.ಚಿದಂಬರಂ ನೇತೃತ್ವದ ಹಿರಿಯ ಸಚಿವರ ಸಮಿತಿಯ ಶಿಫಾರಸಿನಂತೆ ತರಂಗಾಂತರ ಹಂಚಿಕೆಯ ಕನಿಷ್ಠ ದರವನ್ನು ರೂ 14 ಸಾವಿರ ಕೋಟಿಗಳಿಂದ ರೂ 15 ಸಾವಿರ ಕೋಟಿಗಳಿಗೆ ನಿಗದಿ ಮಾಡಲು ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಸಂಪುಟವು ನಿರ್ಧರಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
30 ಪೈಸೆ ಹೆಚ್ಚಳ? |
ನವದೆಹಲಿ (ಪಿಟಿಐ): ಸಂಪುಟದ ಈ ನಿರ್ಧಾರದಿಂದ ಉದ್ಯಮಕ್ಕೆ ಹೊಡೆತ ಬೀಳಲಿದೆ. ಅಲ್ಲದೇ ಅನಿವಾರ್ಯವಾಗಿ ದೂರವಾಣಿ ಕರೆ ದರವನ್ನು ಪ್ರತಿ ನಿಮಿಷಕ್ಕೆ ಸರಾಸರಿ 30 ಪೈಸೆಯಷ್ಟು ಹೆಚ್ಚಿಸಬೇಕಾಗುತ್ತದೆ ಎಂದು ಮೊಬೈಲ್ ಸೇವಾ ಸಂಸ್ಥೆಗಳ ಸಂಘ (ಸಿಒಎಐ) ಹೇಳಿದೆ. |
ಈ ನಿರ್ಧಾರದಿಂದ ಮೊಬೈಲ್ ಬಳಕೆದಾರರ ಮೇಲೆ ಹೆಚ್ಚಿನ ಹೊರೆ ಬೀಳುವ ಸಾಧ್ಯತೆಯಿದೆ. 5 ಮೆಗಾ ಹರ್ಟ್ಸ್ ತರಂಗಾಂತರಗಳಿಗೆ ಕನಿಷ್ಠ ದರವನ್ನು 14 ಸಾವಿರ ಕೋಟಿಯಿಂದ 15 ಸಾವಿರ ಕೋಟಿಗೆ ನಿಗದಿ ಮಾಡುವಂತೆ ಸಮಿತಿ ಶಿಫಾರಸು ಮಾಡಿದೆ.
ಆದರೆ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರವು (ಟ್ರಾಯ್) ಇದಕ್ಕೆ 18 ಸಾವಿರ ಕೋಟಿ ರೂಪಾಯಿ ಕನಿಷ್ಠ ದರ ನಿಗದಿ ಮಾಡಲು ಶಿಫಾರಸು ಮಾಡಿತ್ತು.
ಸಮಿತಿಯು ಶಿಫಾರಸು ಮಾಡಿದಂತೆ ವಿವಿಧ ಸ್ತರದ ವರಮಾನದ ಮೇಲೆ ಶೇ 3ರಿಂದ ಶೇ 8ರಷ್ಟು ವಾರ್ಷಿಕ ತರಂಗಾಂತರ ಹಂಚಿಕೆ ಶುಲ್ಕವನ್ನು ವಿಧಿಸಲು ಸಂಪುಟವು ಅನುಮೋದನೆ ನೀಡಿದೆ ಎಂದು ಮೂಲಗಳು ತಿಳಿಸಿವೆ.
2008ರಲ್ಲಿ ದೂರಸಂಪರ್ಕ ಸಚಿವರಾಗಿದ್ದ ಎ. ರಾಜಾ ಅವರು 2 ಜಿ ತರಂಗಾಂತರ ಹಂಚಿಕೆಗೆ ನೀಡಿದ್ದ 122 ಪರವಾನಗಿಯನ್ನು ಫೆಬ್ರುವರಿ ತಿಂಗಳಿನಲ್ಲಿ ಸುಪ್ರೀಂಕೋರ್ಟ್ ರದ್ದು ಮಾಡಿತ್ತು. ಅಲ್ಲದೇ ಆಗಸ್ಟ್ 31ರೊಳಗೆ ಹೊಸ ಹರಾಜು ನಡೆಸುವಂತೆ ಸೂಚನೆ ನೀಡಿತ್ತು. ಈ ಗಡುವಿನೊಳಗೆ ಹರಾಜು ಪ್ರಕ್ರಿಯೆ ಪೂರ್ಣಗೊಳ್ಳುವುದು ಅನುಮಾನ. ಹೀಗಾಗಿ ಸರ್ಕಾರವು ಗಡುವು ವಿಸ್ತರಿಸುವಂತೆ ಕೋರಿ ಸುಪ್ರೀಂಕೋರ್ಟ್ ಮೊರೆ ಹೋಗುವ ಸಾಧ್ಯತೆ ಇದೆ.
ಉದ್ದಿಮೆಗೆ ಅಪಥ್ಯ: ಸಂಪುಟ ನಿಗದಿ ಮಾಡಿರುವ ತರಂಗಾಂತರ ಹಂಚಿಕೆ ಮೂಲ ದರವು ದೂರಸಂಪರ್ಕ ಉದ್ದಿಮೆಗೆ ಅಪಥ್ಯವಾಗಬಹುದು. `ಟ್ರಾಯ್~ ನಿಗದಿ ಮಾಡಿದ್ದ ಮೂಲ ದರದಿಂದ ಕರೆ ದರಗಳು ಶೇ 100ರಷ್ಟು ಹೆಚ್ಚುವ ಸಾಧ್ಯತೆಗಳಿದ್ದವು. ಹೀಗಾಗಿ ಮೂಲದ ದರದಲ್ಲಿ ಶೇ 80ರಷ್ಟು ಕಡಿತ ಮಾಡುವಂತೆ ಉದ್ದಿಮೆಯು ಒತ್ತಾಯಿಸುತ್ತ ಬಂದಿದೆ.
ಸೆಪ್ಟೆಂಬರ್ 7ರವರೆಗೆ ಸೇವಾವಧಿ ಹೊಂದಿರುವ ಯುನಿನಾರ್, ಸಿಸ್ಟೆಮಾ ಶ್ಯಾಂ ಟೆಲಿ ಸರ್ವಿಸಸ್‌ನಂಥ ಕಂಪೆನಿಗಳಿಗೆ ತರಂಗಾಂತರ ಹಂಚಿಕೆ ಹರಾಜು ಮಹತ್ವದ್ದಾಗಿದೆ. ಒಂದು ವೇಳೆ ಸೆ. 7ರೊಳಗೆ ಪರವಾನಗಿ ಪಡೆಯಲು ವಿಫಲವಾದಲ್ಲಿ ಈ ಕಂಪೆನಿಗಳು ಅನಿವಾರ್ಯವಾಗಿ ತಮ್ಮ ಸೇವೆ ನಿಲ್ಲಿಸಬೇಕಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.