ADVERTISEMENT

ರೈಲು ಅಪಘಾತ: ದಾಖಲೆ ಇಳಿಕೆ

ಪಿಟಿಐ
Published 14 ಏಪ್ರಿಲ್ 2018, 19:30 IST
Last Updated 14 ಏಪ್ರಿಲ್ 2018, 19:30 IST
ರೈಲು ಅಪಘಾತ: ದಾಖಲೆ ಇಳಿಕೆ
ರೈಲು ಅಪಘಾತ: ದಾಖಲೆ ಇಳಿಕೆ   

ನವದೆಹಲಿ: ರೈಲ್ವೆ ಇಲಾಖೆ 2017–18ನೇ ಸಾಲಿನಲ್ಲಿ ಅತಿ ಹೆಚ್ಚು ಸುರಕ್ಷಿತ ಸಂಚಾರವನ್ನು ದಾಖಲಿಸಿದೆ.

ಅತಿ ಕಡಿಮೆ ಅಪಘಾತಗಳು ಈ ವರ್ಷ ಸಂಭವಿಸಿವೆ. ಕಳೆದ ಮಾರ್ಚ್‌ 30ರ ಅಂತ್ಯಕ್ಕೆ ದೇಶದಾದ್ಯಂತ ಇರುವ ರೈಲ್ವೆ ಮಾರ್ಗಗಳಲ್ಲಿ 73 ಅಪಘಾತಗಳು ಸಂಭವಿಸಿದ್ದು, ಇದು ಕಳೆದ 57 ವರ್ಷಗಳಲ್ಲೇ ಅತಿ ಕಡಿಮೆ ಎಂದು ರೈಲ್ವೆ ಸಚಿವಾಲಯ ತಿಳಿಸಿದೆ.

2016–17ರಲ್ಲಿ 104 ಅಪಘಾತಗಳು ಸಂಭವಿಸಿದ್ದವು. ‘ಅಪಘಾತಗಳ ಸಂಖ್ಯೆ ಕಡಿಮೆಯಾಗಿರುವುದಕ್ಕೆ ಮುಖ್ಯ ಕಾರಣ ಹಳಿಗಳ ನವೀಕರಣ ಮಾಡಿರುವುದು.

ADVERTISEMENT

ಈ ವರ್ಷ 4,405 ಕಿಲೋ ಮೀಟರ್‌ ಹಳಿ ನವೀಕರಣ ಮಾಡಲಾಗಿದೆ. 4,400 ಕಿಲೋ ಮೀಟರ್‌ ನವೀಕರಣಗೊಳಿಸುವ ಗುರಿ ಹೊಂದಲಾಗಿತ್ತು’ ಎಂದು ರೈಲ್ವೆ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

2004–05ರಲ್ಲಿ ₹17,000 ಕೋಟಿ ವೆಚ್ಚದಲ್ಲಿ 4,175 ಕಿಲೋ ಮೀಟರ್‌ ಉದ್ದದ ರೈಲು ಮಾರ್ಗ ನವೀಕರಣಗೊಳಿಸಿದ್ದು ಇದುವರೆಗಿನ ಅತ್ಯುತ್ತಮ ಸಾಧನೆಯಾಗಿತ್ತು.1960–61ರಲ್ಲಿ ರೈಲುಗಳು ಒಟ್ಟು 38.81 ಕೋಟಿ ಕಿ.ಮೀ ಸಂಚರಿಸಿದ್ದವು. 2017–18ರ ಅವಧಿಯಲ್ಲಿ 117.07 ಕೋಟಿ ಕಿ.ಮೀ ಸಂಚರಿಸಿವೆ. ಅಲ್ಲದೆ, ಇದು ಕಳೆದ ಐದು ವರ್ಷಗಳ ಅವಧಿಯಲ್ಲಿ ಸಂಚರಿಸಿದ ಸರಾಸರಿಗಿಂತ 74 ಲಕ್ಷ ಕಿಲೋ ಮೀಟರ್‌ ಹೆಚ್ಚು. ಆದರೂ, ಅಪಘಾತಗಳ ಸಂಖ್ಯೆ ಇಳಿದಿದೆ.

ಅಪಘಾತಗಳಿಂದ ಆಗುವ ಮರಣದ ಪ್ರಮಾಣವೂ ಕಡಿಮೆಯಾಗಿದೆ. 2016–17ರಲ್ಲಿ ಮೃತರ ಅಥವಾ ಗಾಯಗೊಂಡವರ ಸಂಖ್ಯೆ 607 ಆಗಿದ್ದರೆ, 2017–18ರಲ್ಲಿ 254ಕ್ಕೆ ಇಳಿಕೆ ಕಂಡಿದೆ.

ಹಳಿ ತಪ್ಪುವ ಪ್ರಕರಣಗಳೂ ಕಡಿಮೆಯಾಗಿವೆ. 2016–17ರಲ್ಲಿ 78 ರೈಲುಗಳು ಹಳಿ ತಪ್ಪಿದ್ದರೆ, 2017–18ರಲ್ಲಿ ಈ ಸಂಖ್ಯೆ 54ಕ್ಕೆ ಇಳಿದಿದೆ. ಇನ್ನು, ಲೆವೆಲ್‌ ಕ್ರಾಸಿಂಗ್‌ಗಳಲ್ಲಿ ಈ ವರ್ಷ 13 ಅಪಘಾತಗಳಾಗಿದ್ದರೆ, ಹಿಂದಿನ ವರ್ಷ 30 ಅಪಘಾತಗಳು ಆಗಿದ್ದವು.

ಅವಧಿ ಅಪಘಾತಗಳ ಸಂಖ್ಯೆ
1960–61 2,131
1970–71 840
1980–81 1,013
1990–91 532
2010–11 141

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.