ADVERTISEMENT

ರೈಲು ಪ್ರಯಾಣ: ಇನ್ನು ಮುಂದೆ ಗುರುತಿನ ಚೀಟಿ ಕಡ್ಡಾಯ

​ಪ್ರಜಾವಾಣಿ ವಾರ್ತೆ
Published 18 ಜನವರಿ 2012, 19:30 IST
Last Updated 18 ಜನವರಿ 2012, 19:30 IST

ನವದೆಹಲಿ (ಪಿಟಿಐ): ರೈಲು ಟಿಕೆಟ್‌ಗಳ ದುರುಪಯೋಗ ತಡೆಯಲು ಮುಂದಾಗಿರುವ ರೈಲ್ವೆ ಇಲಾಖೆಯು ಇನ್ನು ಮುಂದೆ ಎಲ್ಲ ಹವಾ ನಿಯಂತ್ರಿತ ಬೋಗಿಗಳಲ್ಲಿ ಪ್ರಯಾಣಿಕರಿಗೆ ಗುರುತಿನ ಚೀಟಿ ಕೊಂಡೊಯ್ಯುವುದನ್ನು ಕಡ್ಡಾಯಗೊಳಿಸಿದೆ.

 ಈವರೆಗೆ ಇ-ಟಿಕೆಟ್ ಮತ್ತು ತತ್ಕಾಲ್ ಟಿಕೆಟ್ ಪಡೆದವರು ಮಾತ್ರ ತಮ್ಮಂದಿಗೆ ಗುರುತಿನ ಚೀಟಿ ಕೊಂಡೊಯ್ಯುವುದು ಕಡ್ಡಾಯವಾಗಿತ್ತು. ಆದರೆ ಇನ್ನು ಮುಂದೆ ಎಲ್ಲಾ ರೀತಿಯ ಟಿಕೆಟ್ ಪಡೆದವರೂ ಸಹ ಗುರುತಿನ ಚೀಟಿ ಕೊಂಡೊಯ್ಯುವುದು ಕಡ್ಡಾಯವಾಗಿದೆ. ದೇಶದಾದ್ಯಂತ ಎಲ್ಲ ರೈಲುಗಳಲ್ಲಿ ಈ ನಿಯಮ ಫೆಬ್ರುವರಿ 15ರಿಂದ ಜಾರಿಯಾಗಲಿದೆ ಎಂದು ರೈಲ್ವೆ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

 ಗುರುತಿನ ಚೀಟಿಗಳಲ್ಲಿ ಮತದಾರರ ಗುರುತಿನ ಚೀಟಿ, ಪ್ಯಾನ್‌ಕಾರ್ಡ್, ಚಾಲನಾ ಪರವಾನಗಿ, ರಾಷ್ಟ್ರೀಕೃತ ಬ್ಯಾಂಕ್‌ಗಳ ಪಾಸ್‌ಬುಕ್, ಕ್ರೆಡಿಟ್ ಕಾರ್ಡ್, ವಿದ್ಯಾರ್ಥಿಗಳ ಗುರುತಿನ ಚೀಟಿ, ಆಧಾರ್ ಗುರುತಿನ ಚೀಟಿಗಳು ಸೇರಿವೆ. ಹವಾನಿಯಂತ್ರಿತ ಬೋಗಿಗಳಲ್ಲಿ ಪ್ರಯಾಣ ಬೆಳೆಸುವ ಪ್ರಯಾಣಿಕರು ತಮ್ಮ ಟಿಕೆಟ್‌ಗಳನ್ನು ಇನ್ನೊಬ್ಬರಿಗೆ ನೀಡುವುದು ಹಾಗೂ ದುರುಪಯೋಗ ತಡೆಯಲು ಈ ನಿಯಮವನ್ನು ಜಾರಿಗೊಳಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

2008-09ರಲ್ಲಿ ಟಿಕೆಟ್ ವರ್ಗಾವಣೆ ಮಾಡಿದ 20,240 ಪ್ರಕರಣಗಳನ್ನು ಪತ್ತೆ ಮಾಡಲಾಗಿದ್ದು, 2,521 ಮಂದಿಯನ್ನು ಬಂಧಿಸಲಾಗಿತ್ತು. 2010-11 ಟಿಕೆಟ್ ವರ್ಗಾವಣೆಯಾದ ಸಂಖ್ಯೆ 63,854 ಆಗಿದ್ದು, 2480 ಜನರನ್ನು ಬಂಧಿಸಲಾಗಿತ್ತು ಎಂದು ಅವರು ತಿಳಿಸಿದ್ದಾರೆ.

 ಪ್ರಯಾಣಿಕರು ತಮ್ಮಂದಿಗೆ ಗುರುತಿನ ಚೀಟಿ ಕೊಂಡೊಯ್ಯುವುದನ್ನು ಕಡ್ಡಾಯ ಮಾಡಿರುವುದರಿಂದ ಟಿಕೆಟ್ ವರ್ಗಾವಣೆ ಸಂಖ್ಯೆಯಲ್ಲಿ ಇಳಿಮುಖವಾಗಲಿದೆ ಎನ್ನುವ ವಿಶ್ವಾಸವನ್ನು ಅಧಿಕಾರಿಗಳು ಸೂಚಿಸಿದ್ದಾರೆ.

ಸ್ವದೇಶಕ್ಕೆ ಭಾರತೀಯರು

 ದುರಂತಕ್ಕೀಡಾದ ಇಟಲಿಯ `ಕೋಸ್ಟಾ ಕಾನ್ ಕಾರ್ಡಿಯಾ~ ಹಡಗಿನಿಂದ ರಕ್ಷಿಸಿದ 200 ಭಾರತೀಯರು ಗುರುವಾರ ಸ್ವದೇಶಕ್ಕೆ ಹಿಂತಿರುಗಲಿದ್ದಾರೆ. ಹಗಡಿನಲ್ಲಿ 203 ಭಾರತೀಯರಿದ್ದು, ಒಬ್ಬರು ಪ್ರಯಾಣಿಕರು ಇನ್ನುಳಿದವರು ಸಿಬ್ಬಂದಿಯಾಗಿದ್ದರು. ಆ ಪೈಕಿ ಒಬ್ಬ ಸಿಬ್ಬಂದಿ ನಾಪತ್ತೆಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.