ADVERTISEMENT

ರೈಲು ಹಳಿ ಮೇಲಿನ ಚಳವಳಿ ವಾಪಸ್

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2011, 19:30 IST
Last Updated 19 ಮಾರ್ಚ್ 2011, 19:30 IST

ಲಖನೌ: ಕಳೆದ 15 ದಿನಗಳಿಂದ ಮೊರಾದಾಬಾದ್- ದೆಹಲಿ ರೈಲು ಮಾರ್ಗದ ಹಳಿಯ ಮೇಲೆ ಕುಳಿತು ಚಳವಳಿ ನಡೆಸುತ್ತಿದ್ದ ಜಾಟ್ ಸಮುದಾಯದ ಕಾರ್ಯಕರ್ತರನ್ನು ತೆರವುಗೊಳಿಸಬೇಕೆಂಬ ಅಲಹಾಬಾದ್ ಹೈಕೋರ್ಟ್ ಆದೇಶವನ್ನು ಅಧಿಕಾರಿಗಳು ಜಾರಿ ಮಾಡುವ ಮೊದಲೇ ಚಳವಳಿ ನಿರತರು ಶನಿವಾರ ಖುದ್ದಾಗಿ ಹಳಿಯನ್ನು ತೆರವುಗೊಳಿಸಿದ್ದಾರೆ.


ಹಳಿಗಳನ್ನು ಸಂಪೂರ್ಣ ಪರಿಶೀಲನೆಗೆ ಒಳಪಡಿಸಿದ ಬಳಿಕ ರೈಲು ಸಂಚಾರ ಪುನರಾರಂಭಗೊಳ್ಳಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಕಫರಪುರ ರೈಲು ನಿಲ್ದಾಣಕ್ಕೆ ಸಮೀಪದ ಶಾಲಾ ಆವರಣದಲ್ಲಿ ಚಳವಳಿ ಮುಂದುವರಿದಿದೆ. ಈ ಮಧ್ಯೆ, ಉತ್ತರ ಪ್ರದೇಶದ ಮುಖ್ಯಮಂತ್ರಿ ಮಾಯಾವತಿ ಅವರು ಹೇಳಿಕೆ ನೀಡಿ, ಈವರೆಗೆ ರೈಲು ಪ್ರಯಾಣಿಕರಿಗೆ ಆದ ತೊಂದರೆಗೆ ವಿಷಾದ ವ್ಯಕ್ತಪಡಿಸಿದ್ದಾರೆ.

ಅಲ್ಲದೆ ಈ ಚಳವಳಿಗೆ ಕೇಂದ್ರ ಸರ್ಕಾರವೇ ಹೊಣೆ ಎಂದು ಟೀಕಿಸಿದ್ದಾರೆ. ಕೇಂದ್ರ ಸರ್ಕಾರಿ ನೌಕರಿಗಳಲ್ಲಿ ಸಮುದಾಯಕ್ಕೆ ಮೀಸಲಾತಿ ನೀಡಬೇಕೆಂಬ ನಮ್ಮ ಬೇಡಿಕೆ ಈಡೇರದಿದ್ದರೆ ನಮ್ಮ ಚಳವಳಿ ಮತ್ತೆ ಹಳಿಗಳಿಗೇ ಮರಳುತ್ತದೆ ಎಂದು ಸಮುದಾಯ ಎಚ್ಚರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT