ADVERTISEMENT

ರೈಲ್ವೆ ಬಜೆಟ್: ರಾಜಧಾನಿಗೆ ಅತಿ ವೇಗದ ರೈಲ್ವೆಯ ಘೋಷಣೆ ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2012, 19:30 IST
Last Updated 11 ಮಾರ್ಚ್ 2012, 19:30 IST

ನವದೆಹಲಿ (ಪಿಟಿಐ): ರಾಷ್ಟ್ರದ ರಾಜಧಾನಿಯೊಂದಿಗೆ ಜೋಧಪುರ ಮತ್ತು ಮುಂಬೈಗಳಿಗೆ ಸಂಪರ್ಕ ಕಲ್ಪಿಸುವ ಅತಿ ವೇಗದ ರೈಲುಗಳು ಈ ವಾರ ಮಂಡನೆಯಾಗಲಿರುವ ರೈಲ್ವೆ ಬಜೆಟ್‌ನ ಗಮನಾರ್ಹ ಸಂಗತಿಗಳಾಗುವ ಸಾಧ್ಯತೆ ಇದೆ.

591 ಕಿ.ಮೀ. ಉದ್ದದ ದೆಹಲಿ- ಜೈಪುರ- ಅಜ್ಮೇರ್- ಜೋಧಪುರ ಮಾರ್ಗದಲ್ಲಿ ಗಂಟೆಗೆ 350 ಕಿ.ಮೀ. ವೇಗದಲ್ಲಿ ಸಂಚರಿಸುವ ಬುಲೆಟ್ ರೈಲುಗಳನ್ನು ಓಡಿಸುವ ಸಂಬಂಧ ಪೂರ್ವ ಪರಿಶೀಲನೆ ಅಧ್ಯಯನ ಕೈಗೊಳ್ಳುವ ಕುರಿತು ರೈಲ್ವೆ ಸಚಿವ ದಿನೇಶ್ ತ್ರಿವೇದಿ ಮಾರ್ಚ್ 14ರಂದು ಪ್ರಕಟಿಸುವ ನಿರೀಕ್ಷೆ ಇದೆ.

ಇದಕ್ಕಾಗಿ ಹೂಡಬೇಕಾದ ಬಂಡವಾಳದ ಶೇ 50ರಷ್ಟನ್ನು ತಾನು ನೀಡಲು ರಾಜಸ್ತಾನ ಸರ್ಕಾರ ಸಿದ್ಧವಿದೆ ಎಂದೂ ಮೂಲಗಳು ತಿಳಿಸಿವೆ. ಇದೇ ವೇಳೆ ದೆಹಲಿ- ಮುಂಬೈ ನಡುವೆ ಗಂಟೆಗೆ 200 ಕಿ.ಮೀ. ವೇಗದಲ್ಲಿ ಸಂಚರಿಸುವ ರೈಲುಗಳನ್ನು ಓಡಿಸುವ ಸಂಬಂಧವೂ ಸಚಿವರಿಂದ ಪ್ರಕಟಣೆ ಹೊರಬೀಳುವ ಸಾಧ್ಯತೆ ಇದೆ.
ಅಧಿಕ ಸಾಮರ್ಥ್ಯದ ಒಂದು ಎಲೆಕ್ಟ್ರಾನಿಕ್ ಎಂಜಿನ್ ಕೋಚ್ ಜತೆಗೆ 10 ಅತ್ಯಾಧುನಿಕ ಬೋಗಿಗಳನ್ನು ಒಳಗೊಂಡ ಈ ರೈಲಿನ ಬೆಲೆ 200 ಕೋಟಿ ರೂಪಾಯಿ ಎನ್ನಲಾಗಿದೆ.

ಅಧಿಕ ವೇಗದ ಮಾರ್ಗಗಳಲ್ಲಿ ಸಂಕೇತ ದೀಪಗಳನ್ನು ಹಾಗೂ ದೂರಸಂಪರ್ಕ ವ್ಯವಸ್ಥೆಯನ್ನು ಅತ್ಯುನ್ನತ ದರ್ಜೆಗೆ ಏರಿಸುವ ಬಗ್ಗೆಯೂ ಸಚಿವರು ಬಜೆಟ್‌ನಲ್ಲಿ ಕಾರ್ಯಕ್ರಮಗಳನ್ನು ಘೋಷಿಸುವ ನಿರೀಕ್ಷೆ ಇದೆ.

ರೈಲುಗಳಲ್ಲಿ ಪರಿಸರ ಸ್ನೇಹಿ ಶೌಚಾಲಯಗಳನ್ನು ಅಳವಡಿಸುವ ಬಗ್ಗೆಯೂ ತ್ರಿವೇದಿ ಅವರು ಕಾರ್ಯಕ್ರಮ ಪ್ರಕಟಿಸುವ ನಿರೀಕ್ಷೆ ಇದ್ದು, ಕನಿಷ್ಠ 2500 ಪರಿಸರ ಸ್ನೇಹಿ ಶೌಚಾಲಯಗಳ ನಿರ್ಮಾಣಕ್ಕೆ ಬಜೆಟ್‌ನಲ್ಲಿ ಅನುದಾನ ಮೀಸಲಿರಿಸುವ ಸಾಧ್ಯತೆ ಇದೆ.

ಬುಲೆಟ್ ರೈಲುಗಳ ಸಂಚಾರದ ಬಗ್ಗೆ ಸ್ವತಃ ಸಚಿವರು ಉತ್ಸುಕರಾಗಿದ್ದು, ಈ ಹಿನ್ನೆಲೆಯಲ್ಲಿ ರೈಲ್ವೆ ಸಚಿವಾಲಯವು ಪ್ರತ್ಯೇಕ `ಅಧಿಕ ವೇಗದ ರೈಲು ಪ್ರಾಧಿಕಾರ~ ರಚಿಸಲು ಮುಂದಾಗಿದೆ. ಈ ಸಂಬಂಧದ ಮಸೂದೆಯು ಸಂಸತ್ತಿನಲ್ಲಿ ಶೀಘ್ರವೇ ಮಂಡನೆಯಾಗುವ ನಿರೀಕ್ಷೆ ಇದೆ.

ರೈಲ್ವೆ ಇಲಾಖೆಯ ಆರ್ಥಿಕ ಬಿಕ್ಕಟ್ಟಿನ ನಡುವೆಯೂ ಸಚಿವ ತ್ರಿವೇದಿ ಅವರು ಕಸರತ್ತು ಮಾಡಿ ರೈಲ್ವೆಗೆ ಆಧುನಿಕ ಸ್ಪರ್ಶ ನೀಡಲು ಕ್ರಮ ಕೈಗೊಳ್ಳಲಿದ್ದಾರೆಂಬ ಮಾತುಗಳು ಸಹ ಕೇಳಿಬರುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.