ADVERTISEMENT

ರೈಲ್ವೆ ಯೋಜನೆಗೆ ಕಾಲಮಿತಿ ನಿಗದಿ: ಸಿ.ಎಂ ಮನವಿ

​ಪ್ರಜಾವಾಣಿ ವಾರ್ತೆ
Published 25 ಜೂನ್ 2013, 19:59 IST
Last Updated 25 ಜೂನ್ 2013, 19:59 IST

ನವದೆಹಲಿ: ಮಂಗಳೂರು ತಾಲೂಕು ನಿಡೋದಿ ಬಳಿ ಸ್ಥಾಪಿಸಲು ಉದ್ದೇಶಿಸಿರುವ `ಬೃಹತ್ ವಿದ್ಯುತ್ ಯೋಜನೆ' ಕಾಮಗಾರಿಯನ್ನು ಚುರುಕುಗೊಳಿಸಬೇಕೆಂದು ರಾಜ್ಯ ಸರ್ಕಾರ ಕೇಂದ್ರಕ್ಕೆ ಮನವಿ ಮಾಡಿದೆ.

ಯೋಜನಾ ಸ್ಥಳಕ್ಕೆ ಭೇಟಿ ನೀಡಿದ್ದ `ಕೇಂದ್ರ ವಿದ್ಯುತ್ ಪ್ರಾಧಿಕಾರ'ದ ಅಧಿಕಾರಿಗಳ ತಂಡ ತಾಂತ್ರಿಕ- ಆರ್ಥಿಕ ವರದಿಯನ್ನು ಅಂತಿಮಗೊಳಿಸುವ ಹಂತದಲ್ಲಿದೆ. ಈ ಯೋಜನೆ ಕೆಲಸವನ್ನು ಚುರುಕುಗೊಳಿಸುವ ಅಗತ್ಯವಿದ್ದು, ರಾಜ್ಯ ಸರ್ಕಾರ ಯೋಜನೆಗೆ ಸಂಪೂರ್ಣ ಬೆಂಬಲ ಕೊಡಲು ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.

ಎರಡು ದಿನಗಳ ಭೇಟಿಗಾಗಿ ದೆಹಲಿಗೆ ಬಂದಿರುವ ಮುಖ್ಯಮಂತ್ರಿ, ಕೇಂದ್ರ ಇಂಧನ ಖಾತೆ ಸಚಿವರನ್ನು ಭೇಟಿ ಮಾಡಿ ರಾಜ್ಯದ ವಿದ್ಯುತ್ ಯೋಜನೆಗಳನ್ನು ಕುರಿತು ಸಮಾಲೋಚಿಸಿದರು. ಇದೇ ಸಂದರ್ಭದಲ್ಲಿ ಕೆಪಿಸಿಎಲ್ ಯೋಜನೆಗಳಿಗೆ ಕಲ್ಲಿದ್ದಲು ಪೂರೈಕೆ ಮಾಡುವಂತೆ ಮನವಿ ಸಲ್ಲಿಸಿದರು.

ಕಾಲಮಿತಿ ನಿಗದಿಗೆ ಮನವಿ: ಕೇಂದ್ರ ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ ಸಿದ್ದರಾಮಯ್ಯ ಬೆಂಗಳೂರು- ಮೈಸೂರು ಜೋಡಿ ರೈಲು ಮಾರ್ಗ ಒಳಗೊಂಡಂತೆ ಎಲ್ಲ ರೈಲು ಯೋಜನೆಗಳನ್ನು ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸುವ ಮೂಲಕ ಅನಗತ್ಯವಾಗಿ ಹೆಚ್ಚುತ್ತಿರುವ ವೆಚ್ಚಗಳಿಗೆ ಕಡಿವಾಣ ಹಾಕುವಂತೆ ಮನವಿ ಮಾಡಿದರು.

ಮೈಸೂರು- ಬೆಂಗಳೂರು ಜೋಡಿ ಮಾರ್ಗವನ್ನು 2001ರಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಆರಂಭದಲ್ಲಿ ಇದು ರೂ.126 ಕೋಟಿ ಯೋಜನೆ. ಕೇಂದ್ರ ಮತ್ತು ರಾಜ್ಯಗಳ ವೆಚ್ಚ ಹಂಚಿಕೆ ಆಧಾರದಲ್ಲಿ ಯೋಜನೆ ಜಾರಿಯಲ್ಲಿದೆ. ಯೋಜನೆ ಪರಿಷ್ಕೃತ ವೆಚ್ಚವೀಗ ರೂ.526 ಕೋಟಿ ತಲುಪಿದೆ. ಇದರಲ್ಲಿ ್ಙ 145 ಕೋಟಿ ವಿದ್ಯುದೀಕರಣದ ವೆಚ್ಚ ಸೇರಿದೆ. ಶ್ರೀರಂಗಪಟ್ಟಣ ಸಮೀಪದ ಟಿಪ್ಪು ಸುಲ್ತಾನ್ ಶಸ್ತ್ರಾಗಾರವನ್ನು ತ್ವರಿತವಾಗಿ ಸ್ಥಳಾಂತರಿಸುವ ಮೂಲಕ ಯೋಜನೆಯನ್ನು ಕಾಲಮಿತಿಯೊಳಗೆ ಮುಗಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.