ADVERTISEMENT

`ರೈಸಿನಾ ಹಿಲ್ಸ್' ರಣರಂಗ

ಸಿಡಿದೆದ್ದ ಯುವ ಸಮೂಹ, ಅಶ್ರುವಾಯು, ಲಾಠಿ ಪ್ರಹಾರ, ಜಲಫಿರಂಗಿ ಬಳಕೆ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2012, 9:37 IST
Last Updated 23 ಡಿಸೆಂಬರ್ 2012, 9:37 IST

ನವದೆಹಲಿ: ದೇಶದ ಅಧಿಕಾರದ ಕೇಂದ್ರಬಿಂದು ಎನಿಸಿರುವ ಇಲ್ಲಿಯ `ರೈಸಿನಾ ಹಿಲ್ಸ್' ಪ್ರದೇಶ ಶನಿವಾರ ವಿದ್ಯಾರ್ಥಿ ಯುವಜನರ ಆಕ್ರೋಶದಿಂದಾಗಿ ರಣರಂಗವಾಗಿ ಮಾರ್ಪಟ್ಟಿತ್ತು. ಪ್ಯಾರಾಮೆಡಿಕಲ್ ವಿದ್ಯಾರ್ಥಿನಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದಿಂದ ಆಕ್ರೋಶಗೊಂಡಿರುವ ಯುವಸಮೂಹ ಶನಿವಾರವೂ ರಾಷ್ಟ್ರಪತಿ ಭವನದತ್ತ ನುಗ್ಗಲು ಯತ್ನಿಸಿದ್ದರಿಂದ ಪ್ರತಿಭಟನೆಯ ಕಾವು ಮತ್ತಷ್ಟು ಹೆಚ್ಚಿತ್ತು. ಪ್ರವಾಹೋಪಾದಿಯಲ್ಲಿ ಹರಿದುಬಂದ ಆಕ್ರೋಶಭರಿತರನ್ನು ಚದುರಿಸಲು ಪೊಲೀಸರು ಜಲಫಿರಂಗಿ, ಅಶ್ರುವಾಯು ಪ್ರಯೋಗಿಸಿ ನಂತರ ಏಳು ಬಾರಿ ಲಾಠಿ ಪ್ರಹಾರ ನಡೆಸಿದರು.

ಸರ್ಕಾರ ಹಾಗೂ ಪೊಲೀಸರ ನಿಷ್ಕ್ರಿಯತೆ ವಿರುದ್ಧ ಸಿಡಿದೆದ್ದ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಇಂಡಿಯಾ ಗೇಟ್ ಬಳಿ ಬೆಳಿಗ್ಗೆಯಿಂದಲೇ ಭಾರಿ ಸಂಖ್ಯೆಯಲ್ಲಿ ಜಮಾಯಿಸಿ ನಂತರ ಅಲ್ಲಿಂದ ರಾಜ್‌ಪಥ್ ಮೂಲಕ ರಾಷ್ಟ್ರಪತಿ ಭವನ, ಪ್ರಧಾನಿ ಕಚೇರಿ ಇರುವ ರೈಸಿನಾ ಹಿಲ್ಸ್‌ನತ್ತ ಧಾವಿಸಿದರು.

ರೈಸಿನಾ ಹಿಲ್ಸ್ ಮಾರ್ಗದ ಅಲ್ಲಲ್ಲಿ ಹಾಕಲಾಗಿದ್ದ ಅಡೆತಡೆಗಳನ್ನು ಭೇದಿಸಿ ರಾಷ್ಟ್ರಪತಿ ಭವನದತ್ತ ನುಗ್ಗಲು ಪ್ರತಿಭಟನಾಕಾರರು ಯತ್ನಿಸಿದಾಗ ಅಶ್ರುವಾಯು ಸಿಡಿಸಲಾಯಿತು. ಅದಕ್ಕೂ ಜಗ್ಗದ ವಿದ್ಯಾರ್ಥಿಗಳು ಪ್ರತಿಭಟನೆ ತೀವ್ರಗೊಳಿಸಿದಾಗ ಪೊಲೀಸರು ಜಲಫಿರಂಗಿ ಬಳಸಿದರು. ಇದರಿಂದ ಸಹನೆ ಕಳೆದುಕೊಂಡ ಕೆಲವರು ಕಲ್ಲು ತೂರಾಟ ನಡೆಸಿದರು. ಆಗ ಲಾಠಿ ಪ್ರಹಾರ ನಡೆಸಿ ಉದ್ರಿಕ್ತ ಗುಂಪನ್ನು ಚದುರಿಸಲಾಯಿತು. ಈ ಸಂದರ್ಭ ಹಲವು ಪೊಲೀಸರು ಹಾಗೂ ವಿದ್ಯಾರ್ಥಿಗಳು ಗಾಯಗೊಂಡರು. ಪರಿಸ್ಥಿತಿ ಕೈಮೀರಿ ಹೋಗುತ್ತಿರುವ ಅಪಾಯ ಅರಿತ ಪೊಲೀಸರು ಮತ್ತೆ ಮತ್ತೆ ಲಾಠಿ ಪ್ರಹಾರ ನಡೆಸಿ ಕೆಲವರನ್ನು ವಶಕ್ಕೆ ತೆಗೆದುಕೊಂಡರು.

ಪೊಲೀಸರ ಹರಸಾಹಸ: ಘರ್ಷಣೆಯಲ್ಲಿ ಕೆಲ ಪೊಲೀಸ್ ವಾಹನಗಳು, ಬಸ್‌ಗಳು ಜಖಂಗೊಂಡಿದ್ದು, ಸ್ಥಳದಲ್ಲಿ ಕಲ್ಲು, ಪಾದರಕ್ಷೆಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಭಾವಾವೇಶಕ್ಕೆ ಒಳಗಾಗಿ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಿದ್ದವರನ್ನು ಸ್ಥಳದಿಂದ ಕದಲಿಸಲು ಪೊಲೀಸರು ಹರ ಸಾಹಸ ಪಡಬೇಕಾಯಿತು.

ಪೊಲೀಸರ ಕ್ರಮಕ್ಕೆ ಬಗ್ಗದ ಪ್ರತಿಭಟನಾಕಾರರು ರಸ್ತೆಯಲ್ಲೇ ಕುಳಿತು ಅತ್ಯಾಚಾರ ಘಟನೆ ಖಂಡಿಸಿದರು. ಸ್ಥಳಕ್ಕೆ ಧಾವಿಸಿದ ಕ್ಷಿಪ್ರ ಕಾರ್ಯಾಚರಣೆ ಪಡೆ ಸಿಬ್ಬಂದಿ ರಾಷ್ಟ್ರಪತಿ ಭವನವನ್ನು ಸುತ್ತುವರೆದರು. ಈ ಸಂದರ್ಭ ಬಸ್ ಒಂದರ ಕಿಟಕಿ ಗಾಜನ್ನು ವಿದ್ಯಾರ್ಥಿನಿಯೊಬ್ಬಳು ಕೈಯಿಂದಲೇ ಒಡೆದುಹಾಕಿ ಆಕ್ರೋಶ ವ್ಯಕ್ತಪಡಿಸಿದಳು.

ಪೊಲೀಸರು ತಮ್ಮ ಮೇಲೆ ವಿನಾಕಾರಣ ಲಾಠಿ ಪ್ರಹಾರ ನಡೆಸಿದ್ದು ಸ್ಥಳದಿಂದ ಕದಲುವುದಿಲ್ಲ ಎಂದು ವಿದ್ಯಾರ್ಥಿನಿಯರು ಪಟ್ಟು ಹಿಡಿದರು. ಈ ಸಂದರ್ಭ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಸೇನೆಯ ನಿವೃತ್ತ ಮುಖ್ಯಸ್ಥ ಜನರಲ್ ವಿ.ಕೆ.ಸಿಂಗ್, ಸಾಮೂಹಿಕ ಅತ್ಯಾಚಾರದಂತಹ ಘಟನೆಗಳು ನಾಚಿಕೆಗೇಡು ಎಂದರು. ನಮ್ಮ ರಾಜಕೀಯ ವ್ಯಕ್ತಿಗಳಿಗೆ ಹಾಗೂ ಅಧಿಕಾರಿಗಳಿಗೆ ಇಚ್ಛಾಶಕ್ತಿ ಇಲ್ಲದ ಪರಿಣಾಮ ಮತ್ತೆ ಮತ್ತೆ ಇಂತಹ ಘಟನೆಗಳು ನಡೆಯುತ್ತಿವೆ ಎಂದು ಕಿಡಿಕಾರಿದರು.

ಎರಡು ದಶಕಗಳಲ್ಲಿಯೇ ದೊಡ್ಡ ಪ್ರತಿಭಟನೆ: ಕಳೆದ ಎರಡು ದಶಕಗಳಲ್ಲೇ ಇಂತಹ ಬೃಹತ್ ಪ್ರತಿಭಟನೆ ರಾಜಧಾನಿಯಲ್ಲಿ ನಡೆದಿರಲಿಲ್ಲ ಎನ್ನಲಾಗಿದೆ. ಈ ಹಿಂದೆ ಕೆಲವು ಭಾರಿ ಪ್ರತಿಭಟನೆ ನಡೆದಿದ್ದರೂ ಪ್ರತಿಭಟನಾಕಾರರನ್ನು ರೈಸಿನಾ ಹಿಲ್ಸ್ ಸಮೀಪ ಬಿಟ್ಟಿರಲಿಲ್ಲ. ಸಾಮಾನ್ಯವಾಗಿ ಬೃಹತ್ ರ‌್ಯಾಲಿಗಳನ್ನು ಇಂಡಿಯಾ ಗೇಟ್, ರಾಮಲೀಲಾ ಮೈದಾನ ಇಲ್ಲವೆ ಜಂತರ್‌ಮಂತರ್‌ನಲ್ಲಿ ನಡೆಸಲಾಗುತ್ತದೆ.

ನ್ಯಾಯಾಂಗ ಆಯೋಗ ರಚನೆ: ಈ ನಡುವೆ ಘಟನೆಯ ಕುರಿತಂತೆ ಸಮಗ್ರ ತನಿಖೆ ಕೈಗೊಳ್ಳುವುದಲ್ಲದೆ ಮಹಿಳೆಯರ ಸುರಕ್ಷತೆಗಾಗಿ ನ್ಯಾಯಾಂಗ ಆಯೋಗವೊಂದನ್ನು ರಚಿಸುವುದಾಗಿ ಗೃಹ ಸಚಿವ ಸುಶೀಲಕುಮಾರ್ ಶಿಂಧೆ ಶನಿವಾರ ಪ್ರಕಟಿಸಿದ್ದಾರೆ.

ಘಟನೆ ಖಂಡಿಸಿ ರಾಜಧಾನಿಯಲ್ಲಿ ನಡೆಯುತ್ತಿರುವ ಬೃಹತ್ ಪ್ರತಿಭಟನೆ ಹಿನ್ನೆಲೆಯಲ್ಲಿ ಸರ್ಕಾರದ ಪರವಾಗಿ ಅಧಿಕೃತ ಹೇಳಿಕೆ ನೀಡಿರುವ ಅವರು, ಘಟನೆಗೆ ಸಂಬಂಧಿಸಿದಂತೆ ಐವರು ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದ್ದು, ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತಾಗಲು ಸಾಧ್ಯವಿರುವ ಎಲ್ಲ ಯತ್ನ ನಡೆಸಲಾಗುವುದು ಎಂದರು.

ಅತ್ಯಾಚಾರದ ಅಪರೂಪದ ಪ್ರಕರಣಗಳಲ್ಲಿ ಆರೋಪಿಗಳಿಗೆ ಮರಣದಂಡನೆ ವಿಧಿಸುವಂತಾಗಲು ಈಗಿರುವ ಕಾನೂನಿಗೆ ತಿದ್ದುಪಡಿ ತರುವ ಕುರಿತು ಸಹ ಸರ್ಕಾರ ಗಂಭೀರವಾಗಿ ಪರಿಶೀಲನೆ ನಡೆಸುತ್ತಿದೆ ಎಂದು ತಿಳಿಸಿದರು.

ಪ್ರಕರಣದ ಕುರಿತು ಸಮಗ್ರವಾಗಿ ಚರ್ಚಿಸಲು ಸಂಸತ್ತಿನ ವಿಶೇಷ ಅಧಿವೇಶನ ಕರೆಯುವಂತೆ ಲೋಕಸಭೆ ಪ್ರತಿಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಒತ್ತಾಯಿಸಿರುವ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ ಎನ್ನಲಾಗಿದೆ.

ಸೋನಿಯಾ ಮಾತುಕತೆ: ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಸೇರಿದಂತೆ ಘಟನೆಯ ಹಿನ್ನೆಲೆಯಲ್ಲಿ ಉಂಟಾಗಿರುವ ಪರಿಸ್ಥಿತಿಯ ಕುರಿತು ಖುದ್ದು ನಿಗಾವಹಿಸುವಂತೆ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರಿಗೆ ಸೂಚನೆ ನೀಡಿದರು.

ಶಿಂಧೆಗೆ ಪ್ರಧಾನಿ ತಾಕೀತು: ರಾಜಧಾನಿಯಲ್ಲಿ ಕಾನೂನು ಸುವ್ಯವಸ್ಥೆ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿರುವ ಪ್ರಧಾನಿ ಡಾ. ಮನಮೋಹನ್ ಸಿಂಗ್, ಗೃಹ ಸಚಿವ ಸುಶೀಲಕುಮಾರ್ ಶಿಂಧೆ ಜತೆ ಸಮಾಲೋಚನೆ ನಡೆಸಿದರು. ಅತ್ಯಾಚಾರದಂತಹ ಘಟನೆ ಮರುಕಳಿದಂತೆ ಸದಾ ಎಚ್ಚರವಹಿಸಬೇಕಿದ್ದು, ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಹೊಣೆ ನಿಮ್ಮದೆ ಎಂದು ತಾಕೀತು ಮಾಡಿದರು ಎಂದು ಮೂಲಗಳು ತಿಳಿಸಿವೆ.

ಅತ್ಯಾಚಾರಿಗಳಿಗೆ ಘೋರ ಶಿಕ್ಷೆ ವಿಧಿಸಲು ಕ್ರಮ ಕೈಗೊಳ್ಳಲಾಗುತ್ತಿದ್ದು, ವಿದ್ಯಾರ್ಥಿಗಳು ಸಹನೆ ಕಳೆದುಕೊಳ್ಳಬಾರದು ಎಂದು ಗೃಹ ಖಾತೆ ರಾಜ್ಯ ಸಚಿವ ಆರ್‌ಪಿಎನ್ ಸಿಂಗ್ ಮನವಿ ಮಾಡಿದ್ದಾರೆ. ಯುವತಿ ಹೇಳಿಕೆ ದಾಖಲು: ಈ ನಡುವೆ ಅತ್ಯಾಚಾರಕ್ಕೆ ಒಳಗಾದ ಯುವತಿ ಕಳೆದ ಭಾನುವಾರ ರಾತ್ರಿ ನಡೆದ ಘಟನೆಯ ಕುರಿತು ನೀಡಿದ ಹೇಳಿಕೆಯನ್ನು ಉಪ ವಿಭಾಗೀಯ ಮಾಜಿಸ್ಟ್ರೇಟ್ ಸಮ್ಮುಖ ಶನಿವಾರ ಧ್ವನಿಮುದ್ರಿಸಿಕೊಳ್ಳಲಾಯಿತು.

ಚೇತರಿಸಿಕೊಳ್ಳುತ್ತಿರುವ ಯುವತಿ
ಸಫ್ದರ್‌ಜಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯುವತಿ ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾಳೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

ADVERTISEMENT

`ಶುಕ್ರವಾರಕ್ಕೆ ಹೋಲಿಸಿದರೆ ಆಕೆಯ ಸ್ಥಿತಿ ಶನಿವಾರ ಉತ್ತಮವಾಗಿದ್ದು ಪ್ರಜ್ಞಾ ಸ್ಥಿತಿಯಲ್ಲಿದ್ದಾಳೆ. ಮಾನಸಿಕವಾಗಿ ಆಕೆ ಧೈರ್ಯಶಾಲಿಯಾಗಿದ್ದು, ತನ್ನ ಭವಿಷ್ಯದ ಬಗ್ಗೆ ಆಶಾವಾದಿಯಾಗಿದ್ದಾಳೆ. ಶನಿವಾರ ಬೆಳಿಗ್ಗೆಯಿಂದ ನೀರು ಹಾಗೂ ಸೇಬಿನ ರಸ  ಯುವತಿಗೆ ನೀಡುತ್ತಿದ್ದು, ಆಕೆಗೆ ಅಗತ್ಯವಾದ ಪ್ಲೇಟ್‌ಲೆಟ್ ಒಳಗೊಂಡ ರಕ್ತ ನೀಡಲಾಗಿದೆ.

ಸಣ್ಣ ರಕ್ತದ ಕಣಗಳಾಗಿರುವ ಪ್ಲೇಟ್‌ಲೆಟ್‌ಗಳು ರಕ್ತಸ್ರಾವವನ್ನು ತಡೆಯಲು ಸಹಕರಿಸುತ್ತವೆ. ಇವುಗಳ ಪ್ರಮಾಣ ಯುವತಿಯಲ್ಲಿ ಕಡಿಮೆ ಇರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ. ಪ್ಲೇಟ್‌ಲೆಟ್‌ಗಳ ಸಂಖ್ಯೆ ರಕ್ತದಲ್ಲಿ ಕಡಿಮೆ ಇದ್ದಲ್ಲಿ ನಂಜೇರುವ ಅಪಾಯವೂ ಇರುತ್ತದೆ ಎಂದು ವೈದ್ಯರು ಆತಂಕ ವ್ಯಕ್ತಪಡಿಸಿದ್ದಾರೆ.

`ಪ್ರಧಾನಿ ದೇಶಕ್ಕೆ ಉತ್ತರಿಸಲಿ'
ನವದೆಹಲಿ (ಪಿಟಿಐ):
ಪ್ರತಿಭಟನೆ ನಡೆಸಿದ ವಿದ್ಯಾರ್ಥಿ, ಯುವಜನರ ಮೇಲೆ ಅಶ್ರುವಾಯು, ಲಾಠಿ ಪ್ರಹಾರ ನಡೆಸಿರುವುದನ್ನು ತೀವ್ರವಾಗಿ ಖಂಡಿಸಿರುವ ಬಿಜೆಪಿ, ಎಡ ಪಕ್ಷಗಳು ಈ ಸಂಬಂಧ ಪ್ರಧಾನಿ ದೇಶದ ಜನಕ್ಕೆ ಉತ್ತರ ನೀಡಲಿ ಎಂದು ಒತ್ತಾಯಿಸಿವೆ.

ಗೃಹ ಸಚಿವ ಸುಶೀಲಕುಮಾರ್ ಶಿಂಧೆ ಅವರನ್ನು ಭೇಟಿ ಮಾಡಿದ ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ, ವಿದ್ಯಾರ್ಥಿಗಳ ಮೇಲೆ ಪೊಲಿಸರು ಲಾಠಿ ಪ್ರಹಾರ ನಡೆಸಿದ್ದು ಸರಿಯಲ್ಲ, ಅವರ ಪ್ರತಿಭಟನೆ ನ್ಯಾಯ ಸಮ್ಮತವಾದದ್ದೇ ಎಂದರು. ಪೊಲೀಸ್ ಕ್ರಮವನ್ನು ಬಲವಾಗಿ ಖಂಡಿಸಿರುವ ಸಿಪಿಎಂ ನಾಯಕಿ ಬೃಂದಾ ಕಾರಟ್ ಹಾಗೂ ಸಿಪಿಐ ನಾಯಕ ಡಿ.ರಾಜಾ, ಪ್ರಧಾನಿ ಈ ಸಂಬಂಧ ಕೂಡಲೇ ಮಧ್ಯಪ್ರವೇಶಿಸಿ ದೇಶಕ್ಕೆ ಉತ್ತರ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.