ADVERTISEMENT

ರೊದ್ದಂ ನರಸಿಂಹ ರಾಜೀನಾಮೆ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2012, 19:30 IST
Last Updated 24 ಫೆಬ್ರುವರಿ 2012, 19:30 IST

ನವದೆಹಲಿ: `ಅಂತರಿಕ್ಷ್-ದೇವಾಸ್ ತರಂಗಾಂತರ ಒಪ್ಪಂದ~ಕ್ಕೆ ಸಂಬಂಧಿಸಿದಂತೆ ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಮಾಜಿ ಅಧ್ಯಕ್ಷ ಜಿ. ಮಾಧವನ್ ನಾಯರ್ ಹಾಗೂ ಇತರ ಮೂವರು ವಿಜ್ಞಾನಿಗಳ ವಿರುದ್ಧ ಸರ್ಕಾರ ಕೈಗೊಂಡಿರುವ ಕ್ರಮವನ್ನು ಪ್ರತಿಭಟಿಸಿ ಖ್ಯಾತ ವಿಜ್ಞಾನಿ ಹಾಗೂ ಬಾಹ್ಯಾಕಾಶ ಆಯೋಗದ ಹಿರಿಯ ಸದಸ್ಯ ರೊದ್ದಂ ನರಸಿಂಹ ರಾಜೀನಾಮೆ ನೀಡಿದ್ದಾರೆ.

`ನರಸಿಂಹ ನೇರವಾಗಿ ಪ್ರಧಾನಿ ಕಚೇರಿಗೆ ರಾಜೀನಾಮೆ ಪತ್ರ ಕಳುಹಿಸಿದ್ದಾರೆ. ಏಕೆ ರಾಜೀನಾಮೆ ನೀಡಿದ್ದಾರೆಂದು ನಮ್ಮಲ್ಲಿ ವಿವರಗಳಿಲ್ಲ. ಆದರೆ, ನಾಯರ್ ಸೇರಿದಂತೆ ನಾಲ್ಕು ವಿಜ್ಞಾನಿಗಳ ವಿರುದ್ಧ ಸರ್ಕಾರ ಈಚೆಗೆ ಕೈಗೊಂಡ ಕ್ರಮದಿಂದ ಬೇಸತ್ತು ರಾಜೀನಾಮೆ ನೀಡಿದ್ದಾರೆ~ ಎಂದು ಹೆಸರು ಬಹಿರಂಗಪಡಿಸಲು ಬಯಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

 ಎರಡು ದಶಕಗಳಿಂದ ಬಾಹ್ಯಾಕಾಶ ಆಯೋಗದ ಜತೆ ಕೆಲಸ ಮಾಡಿರುವ 78 ವರ್ಷದ ನರಸಿಂಹ ದೀರ್ಘ ಕಾಲ ಸೇವೆ ಸಲ್ಲಿಸಿದ ಹೆಗ್ಗಳಿಕೆ ಪಡೆದಿದ್ದಾರೆ.

ತರಂಗಾಂತರ ಗುತ್ತಿಗೆ ವಿಧಿವಿಧಾನಗಳ ಪ್ರಕ್ರಿಯೆ ಪಾಲನೆಯಲ್ಲಿ ಲೋಪವೆಸಗಿರುವ ನಾಯರ್ ಮತ್ತು ಇತರ ಮೂವರ ವಿರುದ್ಧ ಉನ್ನತ ಮಟ್ಟದ ಸಮಿತಿ ದೋಷಾರೋಪ ಹೊರಿಸಿ ಸೂಕ್ತ ಕ್ರಮಕ್ಕೆ ಶಿಫಾರಸು ಮಾಡಿದ ಬಳಿಕ ಸರ್ಕಾರದ ಹುದ್ದೆಗಳಲ್ಲಿಮುಂದುವರಿಯದಂತೆ ನಿಷೇಧ ಹೇರಲಾಗಿದೆ. ಮಾಜಿ ವೈಜ್ಞಾನಿಕ ಕಾರ್ಯದರ್ಶಿ ಎ.ಭಾಸ್ಕರ್ ನಾರಾಯಣ, ಇಸ್ರೊ ಉಪಗ್ರಹ ಕೇಂದ್ರದ ಮಾಜಿ ನಿರ್ದೇಶಕ ಕೆ.ಎನ್.ಶಂಕರ, ಅಂತರಿಕ್ಷ್ ನಿಗಮದ ಮಾಜಿ ಕಾರ್ಯನಿರ್ವಾಹಕ ನಿರ್ದೇಶಕ ಕೆ.ಆರ್. ಶ್ರೀಧರಮೂರ್ತಿ ನಿಷೇಧಕ್ಕೆ ಒಳಗಾಗಿರುವ ಇತರ ವಿಜ್ಞಾನಿಗಳು.

ಅಂತರಿಕ್ಷ್ - ದೇವಾಸ್ ಗುತ್ತಿಗೆ ವ್ಯವಹಾರ ಕುರಿತು ವಿಚಾರಣೆ ನಡೆಸಿದ ಉನ್ನತ ಮಟ್ಟದ ಸಮಿತಿಯ ಇಬ್ಬರು ಸದಸ್ಯರಲ್ಲಿ ಒಬ್ಬರಾದ ನರಸಿಂಹನ್ ಅವರು ಮಾಧವನ್ ನಾಯರ್ ಮತ್ತು ಇತರ ಮೂವರು ವಿಜ್ಞಾನಿಗಳ ಪಾತ್ರ ಗಮನಿಸಿದರೆ ಅವರನ್ನು ಗಂಭೀರ ಶಿಕ್ಷೆಗೆ ಒಳಪಡಿಸಬೇಕಾದ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಸಂಪುಟ ಕಾರ್ಯದರ್ಶಿ ಬಿ.ಕೆ. ಚತುರ್ವೇದಿ ಸಮಿತಿಯ ಮತ್ತೊಬ್ಬ ಸದಸ್ಯರು. ಆದರೆ, ಪ್ರತ್ಯುಷ್ ಸಿನ್ಹಾ ನೇತೃತ್ವದ ಐವರು ಸದಸ್ಯರ ಮತ್ತೊಂದು ಉನ್ನತ ಸಮಿತಿ ನಾಲ್ವರು ವಿಜ್ಞಾನಿಗಳ ಮೇಲೆ ದೋಷಾರೋಪ ಮಾಡಿದೆ.

ಇಸ್ರೊ ಅಧ್ಯಕ್ಷ ಕೆ. ರಾಧಾಕೃಷ್ಣನ್ ಅಧ್ಯಕ್ಷರಾಗಿರುವ ಬಾಹ್ಯಾಕಾಶ ಆಯೋಗಕ್ಕೆ ಇಸ್ರೊ ಉಪಗ್ರಹ ಕೇಂದ್ರದ ಅಧ್ಯಕ್ಷ ಟಿ.ಕೆ. ಅಲೆಕ್ಸ್, ಅಣುಶಕ್ತಿ ಆಯೋಗದ ಮಾಜಿ ಅಧ್ಯಕ್ಷ ಆರ್. ಚಿದಂಬರಂ, ಭಾರತೀಯ ವಿಜ್ಞಾನ ಸಂಸ್ಥೆ ನಿರ್ದೇಶಕ ಗೋವರ್ಧನ್ ಮೆಹ್ತಾ ಸದಸ್ಯರಾಗಿದ್ದಾರೆ. ಸರ್ಕಾರದ ಕಡೆಯಿಂದ ಪ್ರಧಾನಿಯವರ ಪ್ರಧಾನ ಕಾರ್ಯದರ್ಶಿ, ಸಂಪುಟ ಕಾರ್ಯದರ್ಶಿ ಹಾಗೂ ಹಣಕಾಸು ಇಲಾಖೆ ಕಾರ್ಯದರ್ಶಿ ಸದಸ್ಯರಾಗಿದ್ದಾರೆ.

ಇಸ್ರೊ ವಾಣಿಜ್ಯ ವಿಭಾಗ `ಅಂತರಿಕ್ಷ್ ನಿಗಮ~ ಹಾಗೂ ಬೆಂಗಳೂರು ಮೂಲದ `ದೇವಾಸ್ ಮಲ್ಟಿ ಮೀಡಿಯ ನಿ.~ ನಡುವಿನ ಮೂರು ಸಾವಿರ ಕೋಟಿ ಡಾಲರ್ ಮೌಲ್ಯದ ತರಂಗಾಂತರ ಗುತ್ತಿಗೆ ವ್ಯವಹಾರದ ವಿಚಾರಣೆಗೆ ಪ್ರಧಾನಿ ಮನಮೋಹನ್‌ಸಿಂಗ್ 2011ರ ಫೆಬ್ರುವರಿಯಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಿದ್ದರು. ವಿವಾದದ ಹಿನ್ನೆಲೆಯಲ್ಲಿ ಸರ್ಕಾರ ತನ್ನ ಅಧಿಕಾರ ಬಳಸಿ ಗುತ್ತಿಗೆ ರದ್ದು ಮಾಡಿದೆ.

`ನರಸಿಂಹ ಅತ್ಯಂತ ಹಿರಿಯ ವಿಜ್ಞಾನಿ. ಅವರ ಬಗೆಗೆ ನಮಗೆ ಅಪಾರ ಗೌರವವಿದೆ. ರಾಜೀನಾಮೆ ತೀರ್ಮಾನ ಪುನರ್ ಪರಿಶೀಲಿಸಬೇಕು. ಈ ನಿಟ್ಟಿನಲ್ಲಿ ಆಲೋಚಿಸುವಂತೆ ಅವರಿಗೆ ಮನವಿ ಮಾಡುತ್ತೇನೆ~ ಎಂದು ಪ್ರಧಾನಿಯಕಚೇರಿಯ ರಾಜ್ಯ ಸಚಿವ ವಿ. ನಾರಾಯಣಸ್ವಾಮಿ ಹೇಳಿದಾರೆ.

 ಬಾಹ್ಯಾಕಾಶ ಆಯೋಗದ ಅಧ್ಯಕ್ಷ ಕೆ. ರಾಧಾಕೃಷ್ಣನ್ ಬೆಳವಣಿಗೆ ಕುರಿತು ಪ್ರತಿಕ್ರಿಯಿಸಲು ಬಯಸಲಿಲ್ಲ. ರಾಜೀನಾಮೆ ಕುರಿತು ಪ್ರತಿಕ್ರಿಯಿಸಲು ನರಸಿಂಹ ಸಿಗಲಿಲ್ಲ.

ಮಾಧವನ್ ನಾಯರ್ ಕಳವಳ
ಬೆಂಗಳೂರು (ಪಿಟಿಐ): ಹಿರಿಯ ಬಾಹ್ಯಾಕಾಶ ವಿಜ್ಞಾನಿ ರೊದ್ದಂ ನರಸಿಂಹ ಅವರು ಬಾಹ್ಯಾಕಾಶ ಆಯೋಗದ ಸದಸ್ಯತ್ವ ಸ್ಥಾನ ತ್ಯಜಿಸಿರುವುದು ಕಳವಳಕಾರಿ ಸಂಗತಿ ಎಂದು ಇಸ್ರೊ ಮಾಜಿ ಅಧ್ಯಕ್ಷ ಜಿ. ಮಾಧವನ್ ನಾಯರ್  ಪ್ರತಿಕ್ರಿಯಿಸಿದ್ದಾರೆ.

`ನರಸಿಂಹ ಅವರು ದೇಶದ ಅತ್ಯಂತ ಹಿರಿಯ ಬಾಹ್ಯಾಕಾಶ ವಿಜ್ಞಾನಿ. ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಅವರು ಎಸ್‌ಎಲ್‌ವಿ-3 ಬಾಹ್ಯಾಕಾಶ ನೌಕೆ ಯೋಜನೆ ಕೈಗೆತ್ತಿಕೊಂಡ ದಿನದಿಂದಲೂ ಅವರೊಂದಿಗೆ ಕೆಲಸ ಮಾಡಿದ್ದರು. ಇತ್ತೀಚೆಗಷ್ಟೇ ಉಡಾವಣೆ ಮಾಡಲಾದ ಜಿಎಸ್‌ಎಲ್‌ವಿವರೆಗೂ ಅವರು ಕಾರ್ಯನಿರ್ವಹಿಸಿದ್ದರು. ಅವರು ಆಯೋಗದಿಂದ ದೂರ ಸರಿಯುತ್ತಿರುವುದು ನೋವಿನ ಸಂಗತಿ~ ಎಂದು ಸುದ್ದಿಸಂಸ್ಥೆಗೆ ನೀಡಿರುವ ಪ್ರತಿಕ್ರಿಯೆಯಲ್ಲಿ ತಿಳಿಸಿದ್ದಾರೆ.

`ಬಾಹ್ಯಾಕಾಶ ಆಯೋಗದಲ್ಲಿರುವವರ ಪೈಕಿ ರೊದ್ದಂ ನರಸಿಂಹ ಅವರೊಬ್ಬರೇ ಅರ್ಹ ವ್ಯಕ್ತಿಯಾಗಿದ್ದರು. ಅವರೇ ಈಗ ಆಯೋಗದಿಂದ ಹೊರ ಬಂದಿರುವುದು ದುರದೃಷ್ಟಕರ ಸಂಗತಿ. ಬಾಹ್ಯಾಕಾಶ ಇಲಾಖೆ ಸೂಕ್ತವಾಗಿ ಸ್ಪಂದಿಸದಿರುವುದೇ ಈ ಬೆಳವಣಿಗೆಗೆ ಕಾರಣ~ ಎಂದು ದೂರಿದರು.

ರೊದ್ದಂ ರಾಜೀನಾಮೆಗೆ ಕಾರಣವಾದ ಸಂಗತಿ ಕುರಿತು ಪ್ರಶ್ನಿಸಿದಾಗ, `ಅಂತರಿಕ್ಷ್-ದೇವಾಸ್ ನಡುವಣ ವಿವಾದಿತ ಒಪ್ಪಂದಕ್ಕೆ ಸಂಬಂಧಿಸಿದಂತೆ ನಾಲ್ವರು ಬಾಹ್ಯಾಕಾಶ ವಿಜ್ಞಾನಿಗಳ ವಿರುದ್ಧ ಸರ್ಕಾರ ಕೈಗೊಂಡ ಕ್ರಮದಿಂದ ಅವರು ವಿಚಲಿತರಾಗಿದ್ದರು~ ಎಂದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.