ADVERTISEMENT

ಲಖನೌ: ಚುನಾವಣಾಧಿಕಾರಿಗೆ ಹೃದಯಾಘಾತ, ಸಾವು

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2012, 8:05 IST
Last Updated 19 ಫೆಬ್ರುವರಿ 2012, 8:05 IST

ಲಖನೌ (ಪಿಟಿಐ): ಉತ್ತರ ಪ್ರದೇಶದ ವಿಧಾನಸಭೆಗೆ ನಡೆಯುತ್ತಿರುವ ನಾಲ್ಕನೇ ಹಂತದ ಮತದಾನದ ಸಮಯದಲ್ಲಿ  ಭಾನುವಾರ ಸ್ಥಳೀಯ ಮತಗಟ್ಟೆಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಚುನಾವಣಾ ಅಧಿಕಾರಿಯು ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಈ ದುರ್ಘಟನೆಯು ಇಲ್ಲಿನ ಅಲಮ್ ಬಾಗ್ ಪ್ರದೇಶದ ಮತಗಟ್ಟೆ ಸಂಖ್ಯೆ 128ರಲ್ಲಿ ನಡೆದಿದ್ದು, ರಾಜನ್ ಲಾಲ್ ಎಂಬುವವರು ಈ ಮತಗಟ್ಟೆಯಲ್ಲಿ ಚುನಾವಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಮತ ಚಲಾವಣೆಯು ನಡೆಯುತ್ತಿರುವಾಗಲೇ ಈ ಅಧಿಕಾರಿಯು ಹೃದಯಾಘಾತಕ್ಕೆ ಒಳಗಾಗಿ ಹಠಾತ್ತನೆ ನೆಲಕ್ಕೆ ಕುಸಿದು ಬಿದ್ದು, ಸ್ಥಳದಲ್ಲಿಯೇ ಮೃತಪಟ್ಟರು. ಸಹಾಯ ಒದಗಿಸಲು ತಕ್ಷಣ ಸ್ಥಳಕ್ಕೆ ಪೊಲೀಸರು ಧಾವಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ.

ಚುನಾವಣಾ ಅಧಿಕಾರಿಯು ಮೃತಪಟ್ಟ ಹಿನ್ನೆಲೆಯಲ್ಲಿ ಆ ಮತಗಟ್ಟೆಯಲ್ಲಿ ಸ್ವಲ್ಪ ಕಾಲ ಮತದಾನವನ್ನು ನಿಲ್ಲಿಸಲಾಯಿತು. ಮೃತಪಟ್ಟ ಅಧಿಕಾರಿಯ ದೇಹವನ್ನು ಶವಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೋಲಿಸರು ತಿಳಿಸಿದ್ದಾರೆ. 

ರಾಜ್ಯಪಾಲ ಬಿ.ಎಲ್. ಜೋಷಿ, ಭಾರತೀಯ ಜನತಾ ಪಕ್ಷದ ಹಿರಿಯ ನಾಯಕ ಕಲ್ ರಾಜ್ ಮಿಶ್ರಾ ಮತ್ತು ರಾಜ್ಯ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ರೀಟಾ ಬಹುಗುಣ ಜೋಶಿ ಮುಂತಾದವರು ಭಾನುವಾರ ಮತದಾನ ಮಾಡಿದ ಗಣ್ಯ ವ್ಯಕ್ತಿಗಳಾಗಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.