ನವದೆಹಲಿ (ಪಿಟಿಐ): ಅಶಾಂತಿ ಪೀಡಿತ ಲಿಬಿಯಾದಿಂದ ಮತ್ತೆ 557 ಭಾರತೀಯರು ಎರಡು ಏರ್ ಇಂಡಿಯಾ ವಿಶೇಷ ವಿಮಾನಗಳಲ್ಲಿ ಮಂಗಳವಾರ ಮುಂಜಾನೆ ಸ್ವದೇಶಕ್ಕೆ ಮರಳಿದ್ದಾರೆ. ಲಿಬಿಯಾದಿಂದ ಮರಳಿದ ಭಾರತೀಯರ ಒಟ್ಟು ಸಂಖ್ಯೆ 1,083ಕ್ಕೆ ಏರಿದೆ.
331 ಭಾರತೀಯರಿದ್ದ ಏರ್ ಇಂಡಿಯಾದ ನಾಲ್ಕನೇ ವಿಮಾನ ಮಂಗಳವಾರ ಮುಂಜಾನೆ 4.30ಕ್ಕೆ ನವದೆಹಲಿಯ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿಯಿತು.
‘ಏರ್ ಇಂಡಿಯಾದ ಮೂರನೇ ವಿಮಾನ ಸೋಮವಾರ ತಡರಾತ್ರಿ ಆಗಮಿಸಿತ್ತು. ಅದರಲ್ಲಿ 226 ಭಾರತೀಯರಿದ್ದರು’ ಎಂದು ನಾಗರಿಕ ವಿಮಾನಯಾನ ಸಚಿವ ವಯಲಾರ್ ರವಿ ಹೇಳಿದ್ದಾರೆ.
ಭಾರತೀಯರನ್ನು ಸ್ವದೇಶಕ್ಕೆ ಕರೆತರುವುದಕ್ಕಾಗಿ ಸೋಮವಾರ ಮತ್ತೆ 3 ವಿಮಾನಗಳು ಟ್ರಿಪೊಲಿಗೆ ತೆರಳಿವೆ.
‘ಲಿಬಿಯಾದಲ್ಲಿರುವ ಒಟ್ಟು 18,000 ಭಾರತೀಯರಲ್ಲಿ 10,000 ಜನರು ಇನ್ನೂ ಅಲ್ಲೇ ಇದ್ದಾರೆ’ ಎಂದು ರವಿ ಹೇಳಿದ್ದಾರೆ. ಮೊದಲ ಎರಡು ಏರ್ ಇಂಡಿಯಾ ವಿಮಾನಗಳು 526 ಭಾರತೀಯರನ್ನು ಕರೆ ತಂದಿದ್ದವು.
‘ಸ್ಥಳಾಂತರ ಕಾರ್ಯ ಸರಾಗ’
ನವದೆಹಲಿ (ಪಿಟಿಐ): ಹಿಂಸಾಚಾರ ಪೀಡಿತ ಲಿಬಿಯಾದಿಂದ ಭಾರತೀಯರನ್ನು ಸ್ವದೇಶಕ್ಕೆ ಕರೆತರುವ ಕಾರ್ಯ ಸರಾಗವಾಗಿ ನಡೆಯುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಎಂ.ಕೃಷ್ಣ ಮಂಗಳವಾರ ಹೇಳಿದ್ದಾರೆ.
‘ಲಿಬಿಯಾದಲ್ಲಿರುವ ಭಾರತೀಯರ ಸ್ಥಳಾಂತರ ಕಾರ್ಯ ಯಾವುದೇ ಅಡ್ಡಿಗಳಿಲ್ಲದೆ ನಡೆಯುತ್ತಿದ್ದು, ಬುಧವಾರದ ವೇಳೆಗೆ ಸುಮಾರು 3,500 ಭಾರತೀಯರು ಲಿಬಿಯಾದಿಂದ ಸ್ವದೇಶಕ್ಕೆ ಮರಳಲಿದ್ದಾರೆ’ ಎಂದು ಎಸ್.ಎಂ.ಕೃಷ್ಣ ಅವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.