ADVERTISEMENT

‘ಲೈಂಗಿಕ ದೌರ್ಜನ್ಯ: ಸಂತ್ರಸ್ತ ಬಾಲಕರಿಗೂ ಪರಿಹಾರ ನೀಡಿ’

​ಪ್ರಜಾವಾಣಿ ವಾರ್ತೆ
Published 30 ಮೇ 2018, 19:30 IST
Last Updated 30 ಮೇ 2018, 19:30 IST
ಮೇನಕಾ ಗಾಂಧಿ
ಮೇನಕಾ ಗಾಂಧಿ   

ನವದೆಹಲಿ: ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಬಾಲಕಿಯರಿಗೆ ನೀಡುವಂತೆ ಬಾಲಕರಿಗೂ ಪರಿಹಾರ ನೀಡಬೇಕು ಎಂದು ಕೇಂದ್ರ ಸರ್ಕಾರವು ಎಲ್ಲ ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ.

ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮೇನಕಾ ಗಾಂಧಿ ಈ ಕುರಿತು ಪತ್ರ ಬರೆದಿದ್ದಾರೆ.

ಮಕ್ಕಳ ವಿರುದ್ಧದ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ ಅಡಿ (ಪೋಕ್ಸೊ) ಸ್ಥಾಪಿಸಲಾಗಿರುವ ಪರಿಹಾರ ನಿಧಿ ಮತ್ತು ಯೋಜನೆಯ ಲಾಭ ಎಲ್ಲ ಸಂತ್ರಸ್ತ ಬಾಲಕ
ರಿಗೂ ತಲುಪುವಂತೆ ನೋಡಿಕೊಳ್ಳಿ ಎಂದು ಅವರು ಸಲಹೆ ಮಾಡಿದ್ದಾರೆ.

ADVERTISEMENT

ಬಾಲಕರ ಮೇಲಿನ ಲೈಂಗಿಕ ದೌರ್ಜನ್ಯವನ್ನು ಯಾರೂ ಗಂಭಿರವಾಗಿ ಪರಿಗಣಿಸುವುದಿಲ್ಲ. ಪರಿಹಾರ ನೀಡುವ ಯೋಚನೆಯನ್ನೂ ಮಾಡುವುದಿಲ್ಲ ಎಂದು ಸಚಿವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಲೈಂಗಿಕ ದೌರ್ಜನ್ಯ ಸಂತ್ರಸ್ತರ ಪರಿಹಾರ ನಿಧಿ ಮತ್ತು ಯೋಜನೆ ವ್ಯಾಪ್ತಿ ಅಡಿ ಸಂತ್ರಸ್ತ ಬಾಲಕರನ್ನೂ ಪರಿಗಣಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿ ಎಂದು ಮೇನಕಾ ಸಲಹೆ ಮಾಡಿದ್ದಾರೆ.

ಲೈಂಗಿಕ ಕಿರುಕುಳ, ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತ ಬಾಲಕರ ತುರ್ತು ವೈದ್ಯಕೀಯ ಚಿಕಿತ್ಸೆ ಮತ್ತು ಪುನರ್ವಸತಿಗೆ ಅಗತ್ಯವಿರುವ ಹಣವನ್ನು ಮಧ್ಯಂತರ ಪರಿಹಾರ ರೂಪದಲ್ಲಿ ನೀಡುವಂತೆಯೂ ಅವರು ಸೂಚಿಸಿದ್ದಾರೆ.

ಪೋಕ್ಸೊ ಕಾಯ್ದೆಯಲ್ಲಿ ಲಿಂಗಭೇದ ಇಲ್ಲ. ಬಾಲಕಿಯರನ್ನು ಲೈಂಗಿಕ ದೌರ್ಜನ್ಯದಿಂದ ರಕ್ಷಣೆ ಮಾಡುವುದು ಮಾತ್ರ ಇದರ ಉದ್ದೇಶ ಅಲ್ಲ. ಬಾಲಕರಿಗೂ ಸಮಾನ ರಕ್ಷಣೆ ನೀಡುತ್ತದೆ ಎಂದು ಅವರು ಹೇಳಿದ್ದಾರೆ.

ಪೋಕ್ಸೊ ನಿಯಮಾವಳಿ 2012ರ ಅಡಿ 31 ರಾಜ್ಯಗಳು ಲೈಂಗಿಕ ದೌರ್ಜನ್ಯ ಸಂತ್ರಸ್ತರ ಪರಿಹಾರ ನಿಧಿ ಸ್ಥಾಪಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.