ADVERTISEMENT

ಲೋಕಪಾಲ: ನಿಲುವು ಸಡಿಲಿಸಿದ ಅಣ್ಣಾ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2013, 19:30 IST
Last Updated 14 ಡಿಸೆಂಬರ್ 2013, 19:30 IST

ರಾಳೆಗಣಸಿದ್ದಿ (ಪಿಟಿಐ): ಲೋಕಪಾಲ ಮಸೂದೆ ಜಾರಿಗಾಗಿ ಐದು ದಿನಗಳಿಂದ ಅನಿರ್ದಿಷ್ಟ ನಿರಶನ ನಡೆಸುತ್ತಿರುವ ಅಣ್ಣಾ ಹಜಾರೆ ಅವರು ಮಸೂದೆ ಬಗೆಗಿನ ನಿಲುವನ್ನು ಸಡಿಲಿಸಿದ್ದಾರೆ.

ಮೊದಲಿಗೆ, ಈಗ ತಿದ್ದುಪಡಿ ಮಾಡಲಾಗಿರುವ ಮಸೂದೆಯನ್ನೇ  ರಾಜ್ಯಸಭೆಯಲ್ಲಿ ಮಂಡಿಸಲಿ; ನಂತರ ಪುನಃ ತಿದ್ದುಪಡಿ ಮಾಡಿ  ಸುಧಾರಣೆಗಳನ್ನು ಅಳವಡಿಸಬಹುದು ಎಂದು ಶುಕ್ರವಾರ ಹೇಳಿದ್ದಾರೆ.

ಈಗ ತಿದ್ದುಪಡಿ ಮಾಡಲಾಗಿರುವ ಮಸೂದೆಯಲ್ಲಿ ರಾಜ್ಯಗಳಲ್ಲಿ ಲೋಕಾಯುಕ್ತ ಸ್ಥಾಪನೆಯ ವಿಷಯವನ್ನು ಕೈಬಿಡಲಾಗಿದೆ; ಅಲ್ಲದೇ ಸರ್ಕಾರಿ ನೌಕರನನ್ನು ವಿಚಾರಣೆಗೆ ಒಳಪಡಿಸಲು ಒಪ್ಪಿಗೆ ನೀಡುವ ಅಧಿಕಾರವನ್ನು ಓಂಬುಡ್ಸ್‌ಮನ್‌ಗೆ ವರ್ಗಾಯಿಸಲಾಗಿದೆ.

ರಾಜ್ಯಸಭೆ ಆಯ್ಕೆ ಸಮಿತಿಯ 16 ಶಿಫಾರಸುಗಳ ಪೈಕಿ 14 ಶಿಫಾರಸುಗಳನ್ನು ಒಪ್ಪಿಕೊಂಡ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಸಂಪುಟವು ಕರಡು ಲೋಕಪಾಲ ಮಸೂದೆಗೆ ತಿದ್ದುಪಡಿಗಳನ್ನು ಸೇರಿಸಿತ್ತು.

ಸೇನಾ ಮಾಜಿ ಮುಖ್ಯಸ್ಥ ವಿ.ಕೆ.ಸಿಂಗ್‌ ಅವರು ಶನಿವಾರ ಮಾತನಾಡಿ, ‘ಪೂರ್ತಿ ನಗ್ನನಾದ ವ್ಯಕ್ತಿ ಮೊದಲು ಒಳಉಡುಪ­ನ್ನಾದರೂ ಧರಿಸಬೇಕು’ ಎನ್ನುವ ಮೂಲಕ ಅಣ್ಣಾ ತಂಡ ನಿಲುವು ಸಡಿಲಿಸಿರುವ ಸುಳಿವು ನೀಡಿದ್ದರು.

ಈ ಮಧ್ಯೆ ನಿರಶನವು ಹಜಾರೆ ಅವರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲು ಆರಂಭಿಸಿದೆ. ಐದು ದಿನಗಳಲ್ಲಿ 3.68 ಕೆ.ಜಿ ತೂಕ ಕಳೆದುಕೊಂಡಿರುವ ಅವರ ರಕ್ತದೊತ್ತಡವು ಅಧಿಕವೇ ಇದೆ ಎಂದು ಅವರನ್ನು ಪರೀಕ್ಷಿಸಿದ ವೈದ್ಯರು ತಿಳಿಸಿದ್ದಾರೆ.

ಮಸೂದೆ ಜಾರಿ: ರಾಹುಲ್‌ ತರಾತುರಿ
ನವದೆಹಲಿ (ಪಿಟಿಐ)
: ಭ್ರಷ್ಟಾಚಾರದ ವಿರುದ್ಧದ ಸಮರದಲ್ಲಿ ಉದ್ದೇಶಿತ ಲೋಕಪಾಲ ಮಸೂದೆಯು ಅತ್ಯಂತ ಪ್ರಬಲ ಅಸ್ತ್ರವಾಗಲಿದೆ ಎಂದಿರುವ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ, ಸಂಸತ್‌ನಲ್ಲಿ ಇದನ್ನು  ಅನುಮೋದಿಸುವ ನಿಟ್ಟಿನಲ್ಲಿ ಎಲ್ಲಾ ಪಕ್ಷಗಳೂ ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ಪಕ್ಷದ ಕೇಂದ್ರ ಕಚೇರಿಯಲ್ಲಿ ವಿಶೇಷ ಸುದ್ದಿಗೋಷ್ಠಿ ಕರೆದು ಅವರು ಹೀಗೆ ಹೇಳಿದರು.ದೆಹಲಿ ವಿಧಾನಸಭಾ ಚುನಾಚಣೆಯಲ್ಲಿ ಆಮ್‌ ಆದ್ಮಿ ಪಕ್ಷದಿಂದ ಸೋಲುಂಡಿರುವುದರಿಂದ ಹಾಗೂ ಅಣ್ಣಾ ಹಜಾರೆ ಅವರ ನಿರಶನಕ್ಕೆ ಬೆದರಿ  ಸರ್ಕಾರ ಲೋಕಪಾಲ ಮಸೂದೆ ಜಾರಿಗೊಳಿಸುವ ಮನಸ್ಸು ಮಾಡಿದೆ ಎಂಬ ವಿಶ್ಲೇಷಣೆಗಳನ್ನು ಅವರು ನಿರಾಕರಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.