ADVERTISEMENT

ಲೋಕಪಾಲ: ಬಜೆಟ್‌ಗೂ ಮುನ್ನ ಚರ್ಚೆಇಲ್ಲ

​ಪ್ರಜಾವಾಣಿ ವಾರ್ತೆ
Published 6 ಜನವರಿ 2012, 19:30 IST
Last Updated 6 ಜನವರಿ 2012, 19:30 IST

ನವದೆಹಲಿ: ಲೋಕಪಾಲ ಮಸೂದೆಯನ್ನು ಮತಕ್ಕೆ ಹಾಕಲು ಬಿಜೆಪಿ ಮತ್ತೆ ಸಂಸತ್ ಅಧಿವೇಶನಕ್ಕೆ ಆಗ್ರಹ ಮಾಡಿದ್ದರೂ, ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಕನಿಷ್ಠ ಏಪ್ರಿಲ್ ಮಧ್ಯಾವಧಿವರೆಗೆ ಈ ಬೇಡಿಕೆಯನ್ನು ಒಪ್ಪಿಕೊಳ್ಳುವ ಮನಃಸ್ಥಿತಿಯಲ್ಲಿ ಇದ್ದಂತಿಲ್ಲ.

ಉದ್ದೇಶಿತ ಮಸೂದೆಯು ಬಜೆಟ್ ಅಧಿವೇಶನದ ಮೊದಲ ಭಾಗದಲ್ಲಿ ಚರ್ಚೆಗೆ ಬರುವ ಸಾಧ್ಯತೆ ಇಲ್ಲ ಎಂದು ಸರ್ಕಾರದ ಉನ್ನತ ಮೂಲಗಳು `ಪ್ರಜಾವಾಣಿ~ಗೆ ತಿಳಿಸಿವೆ.

ಮಾರ್ಚ್ ಮೊದಲ ವಾರ ಆರಂಭಗೊಳ್ಳಲಿರುವ ಬಜೆಟ್ ಅಧಿವೇಶನ 20ರವರೆಗೆ ನಡೆಯಬಹುದು. ವಿವಿಧ ಬಜೆಟ್ ಮಂಜೂರಾತಿ ಕುರಿತಂತೆ ಸಂಸದೀಯ ಸ್ಥಾಯಿ ಸಮಿತಿ ಸಭೆಯಲ್ಲಿ ಸಂಸದರು ಭಾಗವಹಿಸಲು ಅನುಕೂಲವಾಗುವಂತೆ ಅಧಿವೇಶನಕ್ಕೆ ಮಧ್ಯಂತರ ವಿರಾಮ ಇರುತ್ತದೆ. 

ಬಜೆಟ್ ಅಧಿವೇಶನದ ಎರಡನೇ ಭಾಗವು ಏಪ್ರಿಲ್ 15ರ ಹೊತ್ತಿಗೆ ಆರಂಭಗೊಳ್ಳುವ ನಿರೀಕ್ಷೆ ಇದ್ದು, ಮೇ 15ರವರೆಗೆ ನಡೆಯಲಿದೆ. ಈ ಅವಧಿಯಲ್ಲಿ ಲೋಕಪಾಲ ಕುರಿತು ಚರ್ಚೆ ನಡೆಯುವ ಸಾಧ್ಯತೆ ಇದೆ.

`ಬಜೆಟ್ ಅಧಿವೇಶನದ ಮೊದಲ ಭಾಗದಲ್ಲಿ ನಾವು ಲೋಕಪಾಲ ಕುರಿತು ಚರ್ಚೆ ನಡೆಸುವುದಿಲ್ಲ. ಈ ಅವಧಿಯಲ್ಲಿ ಇತರ ಅನೇಕ ಪ್ರಮುಖ ಮಸೂದೆಗಳಿಗೆ ಅನುಮೋದನೆ ನೀಡಬೇಕಾಗಿದೆ~ ಎಂದು ಹಿರಿಯ ಸಚಿವರೊಬ್ಬರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.