ADVERTISEMENT

ಲೋಕಪಾಲ ಮಸೂದೆ: ಆಡಳಿತ, ಪ್ರತಿಪಕ್ಷಗಳ ನಡುವೆ ಮತ್ತೆ ಸಂಘರ್ಷ?

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2012, 19:30 IST
Last Updated 12 ಮಾರ್ಚ್ 2012, 19:30 IST

ನವದೆಹಲಿ: ಕೇಂದ್ರ ಸರ್ಕಾರಕ್ಕೆ ಬಿಸಿ ತುಪ್ಪವಾಗಿರುವ ವಿವಾದಿತ ಲೋಕಪಾಲ ಮಸೂದೆ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಮತ್ತೆ ಸಂಘರ್ಷ ಹುಟ್ಟುಹಾಕುವ ಸಾಧ್ಯತೆಗಳು ನಿಚ್ಚಳವಾಗಿದೆ. ಈ ಮಹತ್ವದ ಮಸೂದೆಯನ್ನು ಮಂಗಳವಾರವೇ ಚರ್ಚೆಗೆ ಎತ್ತಿಕೊಳ್ಳಬೇಕೆಂದು ಬಿಜೆಪಿ ಆಗ್ರಹಿಸಿದೆ. ಆದರೆ, ಏಪ್ರಿಲ್ 24ರಿಂದ ಆರಂಭವಾಗುವ ಅಧಿವೇಶನದ ಎರಡನೇ ಅವಧಿಯಲ್ಲಿ ಮಸೂದೆ ಚರ್ಚೆಗೆ ತೆಗೆದುಕೊಳ್ಳಲಾಗುವುದು ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಯುಪಿಎ ಸರ್ಕಾರದ ತಕ್ಷಣದ ಆದ್ಯತೆ ಏಪ್ರಿಲ್ 30ರೊಳಗೆ `ಲೇಖಾನುದಾನ~ಕ್ಕೆ ಒಪ್ಪಿಗೆ ಪಡೆಯುವುದು. ಏಪ್ರಿಲ್ 24ರ ಬಳಿಕ 2ನೇ ಭಾಗದಲ್ಲಿ ಲೋಕಪಾಲ ಮಸೂದೆಯನ್ನು ಚರ್ಚೆಗೆ  ಎತ್ತಿಕೊಳ್ಳಲಾಗುವುದು ಎಂದು ಸಂಸದೀಯ ವ್ಯವಹಾರಗಳ ಸಚಿವ ಪವನ್ ಕುಮಾರ್ ಬನ್ಸಲ್ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಸಂಸತ್ತಿನ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಿದ ರಾಷ್ಟ್ರಪತಿಗಳಿಗೆ ವಂದನೆ ಸಲ್ಲಿಸುವ ನಿರ್ಣಯದ ಮೇಲೆ ಮಂಗಳವಾರದಿಂದ ಚರ್ಚೆ ಆರಂಭವಾಗಲಿದೆ. ಬುಧವಾರ ರೈಲ್ವೆ ಮುಂಗಡ ಪತ್ರ, ಗುರುವಾರ ಆರ್ಥಿಕ ಸಮೀಕ್ಷೆ. ಶುಕ್ರವಾರ ಸಾಮಾನ್ಯ ಬಜೆಟ್ ಮಂಡನೆ ಆಗಲಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವರು ವಿವರಿಸಿದರು.

ADVERTISEMENT

ಅಧಿವೇಶನದ ಮೊದಲ ಭಾಗದಲ್ಲಿ ಸಮಯ ತೀರಾ ಕಡಿಮೆ ಇದೆ. ಲೋಕಸಭೆಯಲ್ಲಿ ಅಂಗೀಕಾರ ಪಡೆದಿರುವ ಲೋಕಪಾಲ ಮತ್ತು ಲೋಕಾಯುಕ್ತ ಮಸೂದೆ ಸೇರಿ 39 ಮಸೂದೆಗಳು ಸಂಸತ್ತಿನ ಒಪ್ಪಿಗೆ ಪಡೆಯಬೇಕಿದೆ. ಹಿಂದಿನ ಅಧಿವೇಶನದಲ್ಲಿ ಮೇಲ್ಮನೆಯಲ್ಲಿ ಸಲ್ಲಿಕೆಯಾಗಿದ್ದ ಸುಮಾರು 200 ತಿದ್ದುಪಡಿ ಮಸೂದೆಗಳು ಅವಧಿ ಮೀರಿರುವುದರಿಂದ ವ್ಯರ್ಥವಾಗಿವೆ. ಸದಸ್ಯರು ಹೊಸ ತಿದ್ದುಪಡಿಗಳನ್ನು ಸಲ್ಲಿಸುತ್ತಿದ್ದಾರೆ. ಸರ್ಕಾರವೂ ಕೆಲ ತಿದ್ದುಪಡಿಗಳನ್ನು ಮಂಡಿಸಲಿದೆ. ಇವುಗಳನ್ನು ಪರಿಶೀಲಿಸಿ ಬಳಿಕ ಚರ್ಚೆಗೆ ಎತ್ತಿಕೊಳ್ಳಬೇಕಿದೆ ಎಂದು ಅವರು ನುಡಿದರು.

ಆದರೆ, ಬಿಜೆಪಿ ಮಂಗಳವಾರವೇ ಪ್ರಶ್ನೋತ್ತರ ವೇಳೆ ರದ್ದುಪಡಿಸಿ ಲೋಕಪಾಲ ಮಸೂದೆಯನ್ನು ಎತ್ತಿಕೊಳ್ಳಬೇಕು ಎಂದು ಆಗ್ರಹಿಸಿದೆ. ಪ್ರಶ್ನೋತ್ತರ ವೇಳೆ ರದ್ದು ಮಾಡಿ ಲೋಕಪಾಲ ಮಸೂದೆ ಚರ್ಚೆಗೆ ಎತ್ತಿಕೊಳ್ಳುವಂತೆ ನೋಟಿಸ್ ನೀಡಲಾಗುವುದು ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಅರುಣ್ ಜೇಟ್ಲಿ ಹೇಳಿರುವ ಬೆನ್ನಲ್ಲೇ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ತಮ್ಮ ಹಿರಿಯ ಸಹೋದ್ಯೋಗಿಗಳ ಜತೆ ಸಮಾಲೋಚಿಸಿದರು.

ಹಣಕಾಸು ಸಚಿವ ಪ್ರಣವ್ ಮುಖರ್ಜಿ, ಪವನ್ ಕುಮಾರ್ ಬನ್ಸಲ್, ಗ್ರಾಮೀಣಾಭಿವೃದ್ಧಿ ಸಚಿವ ಜೈರಾಂ ರಮೇಶ್ ಹಾಗೂ ಸೋನಿಯಾ ಅವರ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್ ಸಭೆಯಲ್ಲಿದ್ದರು. ಹಣಕಾಸು ಸಚಿವರು ಬಿಜೆಪಿ ಮುಖಂಡರ ಜತೆಗೂ ಸಮಾಲೋಚನೆ ನಡೆಸಿದರು.

ಉತ್ತರ ಪ್ರದೇಶ ಒಳಗೊಂಡಂತೆ ಐದು ರಾಜ್ಯಗಳ ಚುನಾವಣೆ ಬಳಿಕ ಯುಪಿಎ ಮೈತ್ರಿಕೂಟದಲ್ಲಿ ಬಿಕ್ಕಟ್ಟು ತಲೆದೋರಿದೆ ಎಂಬುದನ್ನು ಬನ್ಸಲ್ ತಳ್ಳಿಹಾಕಿದರು. `ನಮಗೆ ಅಗತ್ಯಕ್ಕಿಂತ ಹೆಚ್ಚು ಸಂಖ್ಯಾ ಬಲವಿದೆ~ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.