ADVERTISEMENT

ಲೋಕಾಯುಕ್ತ ತನಿಖೆ; ಸಭಾಧ್ಯಕ್ಷರಿಗೆ ಮಾತ್ರ ವಿನಾಯಿತಿ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2014, 13:19 IST
Last Updated 25 ಫೆಬ್ರುವರಿ 2014, 13:19 IST
ಲೋಕಾಯುಕ್ತ ತನಿಖೆ; ಸಭಾಧ್ಯಕ್ಷರಿಗೆ ಮಾತ್ರ ವಿನಾಯಿತಿ
ಲೋಕಾಯುಕ್ತ ತನಿಖೆ; ಸಭಾಧ್ಯಕ್ಷರಿಗೆ ಮಾತ್ರ ವಿನಾಯಿತಿ   

ನವದೆಹಲಿ (ಐಎಎನ್‌ಎಸ್): ರಾಜ್ಯ ವಿಧಾನಸಭಾಧ್ಯಕ್ಷ ಮತ್ತು ಉಪ ಸಭಾಧ್ಯಕ್ಷರನ್ನು ಹೊರತು ಪಡಿಸಿ ಬೇರೆ ಯಾರಿಗೂ ಭ್ರಷ್ಟಾಚಾರ ಆರೋಪ ಕುರಿತ ಲೋಕಾಯುಕ್ತ ತನಿಖೆಯಿಂದ ವಿನಾಯಿತಿ ಇಲ್ಲ ಎಂದು ಮಂಗಳವಾರ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಮುಖ್ಯನ್ಯಾಯಮೂರ್ತಿ ಪಿ.ಸದಾಶಿವಂ ನೇತೃತ್ವದಲ್ಲಿ ನ್ಯಾಯಮೂರ್ತಿಗಳಾದ ರಂಜನ್ ಗೊಗೋಯ್, ಶಿವ ಕೀರ್ತಿ ಸಿಂಗ್ ಅವರನ್ನು ಒಳಗೊಂಡ ತ್ರಿಸದಸ್ಯ ನ್ಯಾಯಪೀಠವು ಈ ಮಹತ್ವದ ತೀರ್ಪನ್ನು ನೀಡಿದ್ದು, 'ಪ್ರತಿಯೊಬ್ಬರು ಒಂದೇ ವರ್ಗಕ್ಕೆ ಸೇರಿದ್ದಾರೆ. ಹಾಗಾಗಿ ಸಾಮಾನ್ಯ ವ್ಯಕ್ತಿಗೆ ವಿಶೇಷ ಹಕ್ಕು ದೊರೆಯಲಾರದು' ಎಂದು ಹೇಳಿತು.

2007ರಲ್ಲಿ ಮಧ್ಯಪ್ರದೇಶದಲ್ಲಿ ನಡೆದ ಭ್ರಷ್ಟಾಚಾರ ಪ್ರಕರಣವೊಂದಕ್ಕೆ ಸಂಬಂಧಪಟ್ಟಂತೆ ತನಿಖೆ ಕೈಗೆತ್ತಿಕೊಂಡ ಲೋಕಾಯುಕ್ತವು ಸರ್ಕಾರದ ಕಾರ್ಯದರ್ಶಿಗೆ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳೊಂದಿಗೆ ಹಾಜರಾಗುವಂತೆ ನೋಟಿಸ್ ನೀಡಿತ್ತು. ಲೋಕಾಯುಕ್ತದ ಈ ಕ್ರಮದಿಂದ ಹಕ್ಕು ಉಲ್ಲಂಘನೆಯಾಗಿದೆ ಎಂದ ರಾಜ್ಯ ಸರ್ಕಾರವು ಪ್ರತಿಯಾಗಿ ಲೋಕಾಯುಕ್ತಕ್ಕೆ ಷೋಕಾಸ್ ನೋಟಿಸ್ ಕಳುಹಿಸಿತ್ತು. ನಂತರ ಈ  ಪ್ರಕರಣವು  ಸುಪ್ರೀಂ ಕೋರ್ಟ್ ಮೇಟ್ಟಿಲೇರಿದೆ.

ಪ್ರಕರಣದ ವಿಚಾರಣೆ ವೇಳೆ ಲೋಕಾಯುಕ್ತದ ಕ್ರಮವನ್ನು ಎತ್ತಿಹಿಡಿದ ಪೀಠವು ಅದರಿಂದ ಯಾವುದೇ ಹಕ್ಕು ಉಲ್ಲಂಘನೆಯಾಗಿಲ್ಲ ಎಂದು ಹೇಳಿತು.

ತೀರ್ಪು ಪ್ರಕಟಿಸಿದ ನ್ಯಾಯಮೂರ್ತಿ ಸದಾಶಿವಂ ಅವರು `ಭ್ರಷ್ಟಾಚಾರ ತಡೆ  ಕಾಯ್ದೆ ಉಲ್ಲಂಘಿಸುವ ಯಾವುದೇ ಅಧಿಕಾರಿಗೆ ಭ್ರಷ್ಟಾಚಾರ ಕುರಿತಂತೆ ಪೊಲೀಸರಿಗೆ ಮಾಹಿತಿ ನೀಡುವುದರೊಂದಿಗೆ ಅವರೊಂದಿಗೆ ಸಹಕರಿಸಬೇಕೆಂಬ ಕರ್ತವ್ಯದ ವಿವೇಚನೆ ಇರಬೇಕು' ಎಂದು ಹೇಳಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.