ADVERTISEMENT

ಲೋಕಾಯುಕ್ತ ನೇಮಕ ವಿವಾದ; ಹೈಕೋರ್ಟ್‌ನಲ್ಲಿ ಮೋದಿ ಸರ್ಕಾರಕ್ಕೆ ಮುಖಭಂಗ

​ಪ್ರಜಾವಾಣಿ ವಾರ್ತೆ
Published 18 ಜನವರಿ 2012, 9:45 IST
Last Updated 18 ಜನವರಿ 2012, 9:45 IST

ಅಹಮದಾಬಾದ್ (ಪಿಟಿಐ): ರಾಜ್ಯಪಾಲರು ಲೋಕಾಯುಕ್ತರನ್ನು ನೇಮಿಸಿದ್ದು ಸರಿಯಾದ ಕ್ರಮ ಎಂದು ಗುಜರಾತ್ ಹೈಕೋರ್ಟ್ ಬುಧವಾರ ಐತಿಹಾಸಿಕ ತೀರ್ಪು ನೀಡಿದ್ದು, ಸರ್ಕಾರದ ಅರ್ಜಿಯನ್ನು ವಜಾಗೊಳಿಸಿದೆ.

ರಾಜ್ಯಪಾಲರು ಸರ್ಕಾರದೊಂದಿಗೆ ಸಮಾಲೋಚಿಸದೆ ಏಕಪಕ್ಷೀಯವಾಗಿ ಲೋಕಾಯುಕ್ತರನ್ನು ನೇಮಕ ಮಾಡಿರುವುದನ್ನು ಪ್ರಶ್ನಿಸಿ ರಾಜ್ಯಸರ್ಕಾರ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಈ ಬಗ್ಗೆ ವಿಚಾರಣೆ ನಡೆಸಿದ ಇಬ್ಬರು ನ್ಯಾಯಮೂರ್ತಿಗಳ ನ್ಯಾಯಪೀಠವು ವಿಭಿನ್ನ ತೀರ್ಪು ನೀಡಿತ್ತು. ಇದರಿಂದ ಪ್ರಕರಣದ ವಿಚಾರಣೆಯು ನ್ಯಾಯಮೂರ್ತಿ ವಿ.ಎಂ. ಸಾಯ್ ಅವರ ಹೆಗಲೇರಿತ್ತು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿ.ಎಂ. ಸಾಯ್ ಅವರು ಸರ್ಕಾರವನ್ನು ಸಂಪರ್ಕಿಸದೆ ರಾಜ್ಯಪಾಲರು ಲೋಕಾಯುಕ್ತರನ್ನು ನೇಮಕ ಮಾಡಿದ್ದು ಸರಿ ಎಂದು ತೀರ್ಪು ನೀಡಿದರು. ಇದರಿಂದ ನರೇಂದ್ರ ಮೋದಿ ಸರ್ಕಾರಕ್ಕೆ ಹಿನ್ನಡೆಯಾಗಿದೆ.

ಈ ತೀರ್ಪನ್ನು ಪರಿಶೀಲಿಸಿ ಕಾನೂನು ತಜ್ಞರೊಂದಿಗೆ ಸಮಾಲೋಚಿಸಿ ಆದೇಶದ ವಿರುದ್ಧ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸುವುದಾಗಿ ಸರ್ಕಾರ ತಿಳಿಸಿದೆ.

ರಾಜ್ಯಪಾಲೆ ಕಮಲಾ ಬೇನಿವಾಲ್ ಅವರು ಕಳೆದ 7 ವರ್ಷಗಳಿಂದ ಖಾಲಿ ಉಳಿದಿದ್ದ ಲೋಕಾಯುಕ್ತ ಹುದ್ದೆಗೆ ಕಳೆದ ಆಗಸ್ಟ್‌ನಲ್ಲಿ ವಿರೋಧಪಕ್ಷಗಳೊಂದಿಗೆ ಚರ್ಚಿಸಿ ನಿವೃತ್ತ ನ್ಯಾಯಮೂರ್ತಿ ಆರ್.ಎ. ಮೆಹ್ತಾ ಅವರನ್ನು ನೇಮಿಸಿದ್ದರು. ಆದರೆ ಅವರು ಈ ವಿಷಯಕ್ಕೆ ಸಂಬಂಧಿಸಿದಂತೆ ಸರ್ಕಾರದೊಂದಿಗೆ ಚರ್ಚಿಸಿರಲಿಲ್ಲ. ಇದು ಮೋದಿ ಸರ್ಕಾರವನ್ನು ಕೆರಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.