ADVERTISEMENT

ಲೋಹ ಶೋಧನಾ ಯಂತ್ರದಿಂದ ಪರೀಕ್ಷಾರ್ಥಿಗಳ ತಪಾಸಣೆ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2018, 19:30 IST
Last Updated 27 ಮಾರ್ಚ್ 2018, 19:30 IST

ನವದೆಹಲಿ: ದೇಶದಾದ್ಯಂತ ಏಪ್ರಿಲ್‌ 8ರಂದು ನಡೆಯುವ ಜಂಟಿ ಪ್ರವೇಶ ಪರೀಕ್ಷೆಯಲ್ಲಿ (ಜೆಇಇ–ಮುಖ್ಯ) ಪರೀಕ್ಷಾರ್ಥಿಗಳು ಲೋಹ ಶೋಧನಾ ಯಂತ್ರದ ತಪಾಸಣೆಗೆ ಒಳಗಾಗಬೇಕಾಗುತ್ತದೆ.

ಅತ್ಯಾಧುನಿಕ ತಂತ್ರಜ್ಞಾನ ಬಳಸಿ ‌ಪರೀಕ್ಷೆಯಲ್ಲಿ ನಕಲು ಮಾಡುವುದನ್ನು ತಪ್ಪಿಸುವ ಉದ್ದೇಶದಿಂದ ಕೇಂದ್ರ ಪ್ರೌಢಶಿಕ್ಷಣ ಮಂಡಳಿಯು (ಸಿಬಿಎಸ್‌ಇ) ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಲೋಹ ಶೋಧನಾ ಯಂತ್ರವನ್ನು ಅಳವಡಿಸಲು ನಿರ್ಧರಿಸಿದೆ. ಪರೀಕ್ಷಾರ್ಥಿಗಳು ಈ ಯಂತ್ರದ ಮೂಲಕ ತಪಾಸಣೆಗೆ ಒಳಪಟ್ಟ ಬಳಿಕ ಪರೀಕ್ಷಾ ಕೇಂದ್ರಗಳನ್ನು ಪ್ರವೇಶಿಸಬೇಕಾಗುತ್ತದೆ ಎಂದು ಮಂಡಳಿಯ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

’ಪರೀಕ್ಷಾರ್ಥಿಗಳು ಎಲೆಕ್ಟ್ರಾನಿಕ್‌ ಡಿವೈಸ್‌ಗಳನ್ನು ತೆಗೆದುಕೊಂಡು ಪರೀಕ್ಷಾ ಕೇಂದ್ರಗಳೊಳಗೆ ಪ್ರವೇಶಿಸಲು ಮುಂದಾದರೆ ಅವರು ಲೋಹ ಶೋಧನಾ ಯಂತ್ರದಲ್ಲಿ ಸಿಕ್ಕಿಬೀಳುತ್ತಾರೆ. ಇದರಿಂದ ಪರೀಕ್ಷಾ ಅಕ್ರಮ, ನಕಲಿಗೆ ಕಡಿವಾಣ ಬೀಳುತ್ತದೆ’ ಎಂದು ಅವರು ಹೇಳಿದ್ದಾರೆ.

ADVERTISEMENT

ಹಿಂದಿನ ಪರೀಕ್ಷೆಯೊಂದರಲ್ಲಿ ಅಭ್ಯರ್ಥಿಯೊಬ್ಬ ‘ಬ್ಲೂಟೂತ್‌’ ಬಳಸಿ ಪರೀಕ್ಷಾ ಅಕ್ರಮದಲ್ಲಿ ಪಾಲ್ಗೊಂಡಿದ್ದ ನಿದರ್ಶನವಿದೆ. ಈ ರೀತಿಯ ಅಕ್ರಮಗಳಿಗೆ ಅವಕಾಶ ನೀಡದಿರಲು ಹೆಚ್ಚಿನ ಮುನ್ನೆಚ್ಚರಿಕಾ ಕ್ರಮಗಳನ್ನು ಈ ಬಾರಿ ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.

ಮೊಬೈಲ್‌ ಫೋನ್‌, ಎಲೆಕ್ಟ್ರಾನಿಕ್‌ ವಾಚ್‌ ಮತ್ತು ಕ್ಯಾಲ್ಕ್ಯುಲೇಟರ್‌ಗಳನ್ನೂ ಪರೀಕ್ಷಾ ಕೇಂದ್ರದೊಳಗೆ ತರದಂತೆ ನಿಷೇಧಿಸಲಾಗಿದೆ.

ಪರೀಕ್ಷಾ ಕೇಂದ್ರದ ಪ್ರವೇಶದ ವೇಳೆ ಅಭ್ಯರ್ಥಿಗಳು ಪ್ರವೇಶ ಪತ್ರದ ಜತೆಗೆ ಆಧಾರ್‌ ಕಾರ್ಡ್‌, ಪಾಸ್‌ಪೋರ್ಟ್‌ ಅಥವಾ ಇತರ ಗುರುತಿನ ಪತ್ರವನ್ನು ತೋರಿಸಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ (ಎನ್‌ಐಟಿ), ಭಾರತೀಯ ತಾಂತ್ರಿಕ ಮಾಹಿತಿ ತಂತ್ರಜ್ಞಾನ ಸಂಸ್ಥೆ (ಐಐಐಟಿ) ಸೇರಿದಂತೆ ಕೇಂದ್ರ ಸರ್ಕಾರದ ಅನುದಾನ ಪಡೆಯುವ ಪ್ರತಿಷ್ಠಿತ ತಾಂತ್ರಿಕ ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶ ಕಲ್ಪಿಸಲು ಮಂಡಳಿ ಜೆಇಇ–ಮುಖ್ಯ ಪರೀಕ್ಷೆ ನಡೆಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.