ADVERTISEMENT

ವಯೋ ವಿವಾದ: ಸರ್ಕಾರ ಪರ ವಾಲಿದ ಸುಪ್ರೀಂ, ಅರ್ಜಿ ಹಿಂಪಡೆದ ಜನರಲ್ ಸಿಂಗ್

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2012, 9:35 IST
Last Updated 10 ಫೆಬ್ರುವರಿ 2012, 9:35 IST

ನವದೆಹಲಿ (ಪಿಟಿಐ/ ಐಎಎನ್ ಎಸ್): ಭಾರತೀಯ ಸೇನಾ ಮುಖ್ಯಸ್ಥ ಜನರಲ್ ವಿ.ಕೆ. ಸಿಂಗ್ ಅವರು ಸುಪ್ರೀಂಕೋರ್ಟಿಗೆ ಸಲ್ಲಿಸಿದ್ದ ವಯೋವಿವಾದಕ್ಕೆ ಸಂಬಂಧಿಸಿದ ತಮ್ಮ ಅರ್ಜಿಯನ್ನು ಶುಕ್ರವಾರ  ಹಿಂತೆಗೆದುಕೊಂಡಿದ್ದಾರೆ.

~ಸರ್ಕಾರವು ನನ್ನ ವಯಸ್ಸನ್ನು 10 ಮೇ 1951 ಎಂಬುದಾಗಿ ನಿರ್ಧರಿಸಲು ಬಯಸಿದರೆ, 48 ಗಂಟೆಗಳ ಒಳಗೆ ನಾನು ರಾಜೀನಾಮೆ ಸಲ್ಲಿಸುವೆ~ ಎಂದು ಸಿಂಗ್ ಸುಪ್ರೀಂಕೋರ್ಟಿಗೆ ತಿಳಿಸಿದರು.

ಇದಕ್ಕೆ ಸ್ವಲ್ಪ ಮುನ್ನ ತಮ್ಮ ಜನ್ಮ ದಿನಾಂಕವನ್ನು 10 ಮೇ 1950 ಎಂಬುದಾಗಿ ನಿರ್ಧರಿಸಿದ ಸರ್ಕಾರಿ ಆದೇಶವನ್ನು ಪ್ರಶ್ನಿಸಿ ಸಿಂಗ್ ಅವರು ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಲು ನಿರಾಕರಿಸಿದ ಸುಪ್ರೀಂಕೋರ್ಟ್ ~ಅರ್ಜಿಯನ್ನು ಹಿಂತೆಗೆದುಕೊಳ್ಳದೇ ಇದ್ದಲ್ಲಿ ಅದನ್ನು ವಜಾ ಮಾಡುವುದು ಅನಿವಾರ್ಯವಾಗುತ್ತದೆ~ ಎಂದು ಎಚ್ಚರಿಸಿತ್ತು.

ಈ ಮೂಲಕ ತಾನು ಹುಟ್ಟಿದ್ದು 10 ಮೇ 1951ರಂದು, 10 ಮೇ 1950ರಂದು ಅಲ್ಲ ಎಂಬ ತಮ್ಮ ವಾದಕ್ಕೆ ಸಂಬಂಧಿಸಿದಂತೆ ಪ್ರಕರಣ ಮುಂದುವರಿಕೆ ವಿಚಾರದಲ್ಲಿ ನಿರ್ಧರಿಸಲು ನ್ಯಾಯಾಲಯ ಸಿಂಗ್ ಅವರಿಗೆ ಅತ್ಯಂತ ಸೀಮಿತ ಅವಕಾಶ ನೀಡಿತು.

~ಈ ವಿಷಯವು ನಿಮ್ಮ ಗೌರವ ಮತ್ತು ಪ್ರಾಮಾಣಿಕತೆಗೆ ಸಂಬಂಧಿಸಿದ್ದು~ ಎಂದು ನ್ಯಾಯಾಲಯ ಎಚ್ಚರಿಸಿತು.
ಸಿಂಗ್ ಜನನ ವರ್ಷವನ್ನು 1950 ಎಂಬುದಾಗಿ ಮಾನ್ಯತೆ ಮಾಡಿ ಸರ್ಕಾರ ಹೊರಡಿಸಿರುವ ಆದೇಶ ಸಾರಾ ಸಗಟು ತಪ್ಪಲ್ಲ, ದುರಾಗ್ರಹದ್ದೂ ಅಲ್ಲ ಎಂದು ನ್ಯಾಯಾಲಯ ಹೇಳಿತು.

ಜನರಲ್ ಸಿಂಗ್ ಅವರು ಸರ್ಕಾರಕ್ಕೆ ಸಲ್ಲಿಸಿದ ಕೆಲವು ಪ್ರಮುಖ ದಾಖಲೆಗಳು ಅವರು 1950ರಲ್ಲಿ ಹುಟ್ಟಿದ್ದನ್ನು ದೃಢಪಡಿಸಿತ್ತವೆ ಎಂಬುದರತ್ತ ನ್ಯಾಯಾಲಯ ಬೊಟ್ಟು ಮಾಡಿತು.

ಈ ದಾಖಲೆಗಳು ಕೇಂದ್ರ ಲೋಕಸೇವಾ ಆಯೋಗ, ರಾಷ್ಟ್ರೀಯ ರಕ್ಷಣಾ ಅಕಾಡೆಮಿ, ಭಾರತೀಯ ಸೇನಾ ಅಕಾಡೆಮಿಗಳಿಗೆ ಸಂಬಂಧಿಸಿದಂತಹವುಗಳು.

ಈ ದಾಖಲೆಗಳು ಸರ್ಕಾರಕ್ಕೆ ಸಿಂಗ್ ಅವರ ಬಗ್ಗೆ ಪೂರ್ವಾಗ್ರಹವಿಲ್ಲ, ಬದಲಿಗೆ ಅವರ ಮೇಲೆ ಸರ್ಕಾರಕ್ಕೆ ಪೂರ್ಣ ವಿಶ್ವಾಸ ಇದೆ~ ಎಂಬುದನ್ನು ತೋರಿಸುತ್ತವೆ ಎಂದೂ ನ್ಯಾಯಾಲಯ ಹೇಳಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.