ADVERTISEMENT

ವಶಪಡಿಸಿಕೊಂಡ 35 ಲಕ್ಷ; 12 ಭಕ್ತರ ದೇಣಿಗೆ

​ಪ್ರಜಾವಾಣಿ ವಾರ್ತೆ
Published 20 ಜೂನ್ 2011, 19:30 IST
Last Updated 20 ಜೂನ್ 2011, 19:30 IST

ಬೆಂಗಳೂರು: ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ಪೊಲೀಸರು ಇತ್ತೀಚೆಗೆ ವಶಪಡಿಸಿಕೊಂಡ 35 ಲಕ್ಷ ರೂಪಾಯಿಯನ್ನು ಸಾಯಿಬಾಬಾ ಅವರ ಸಮಾಧಿ ನಿರ್ಮಾಣ ಕಾರ್ಯಕ್ಕೆ ದೇಣಿಗೆಯಾಗಿ ನೀಡಲಾಗಿತ್ತು ಎಂದು 12 ಮಂದಿ ಭಕ್ತರು ತಿಳಿಸಿದ್ದಾರೆ.

`ಸಾಯಿ ಬಾಬಾ ಅವರ ಸಮಾಧಿ ನಿರ್ಮಾಣಕ್ಕೆ ದೇಣಿಗೆ ನೀಡುವಂತೆ ಟ್ರಸ್ಟ್‌ನ ಸದಸ್ಯ ಆರ್.ಜೆ ರತ್ನಾಕರ ಅವರು ಭಾನುವಾರ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ದೇಣಿಗೆ ರೂಪದಲ್ಲಿ ಈ ಹಣ ನೀಡಲಾಗಿತ್ತು~ ಎಂದು ಭಕ್ತರು ಸೋಮವಾರ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.

ಆದರೆ, ಟ್ರಸ್ಟ್ ಯಾವುದೇ ಸಂದರ್ಭದಲ್ಲೂ ಹಣದ ರೂಪದಲ್ಲಿ ದೇಣಿಗೆ ಸ್ವೀಕರಿಸುವುದಿಲ್ಲ. ದೇಣಿಗೆಯನ್ನು ಬ್ಯಾಂಕ್ ಖಾತೆಗೆ ಜಮಾ ಮಾಡುವಂತೆ ಸೂಚಿಸಲಾಗಿತ್ತು ಎಂದು ರತ್ನಾಕರ್ ಅವರು ಏಪ್ರಿಲ್‌ನಲ್ಲಿ ಲಿಖಿತ ಹೇಳಿಕೆ ನೀಡಿದ್ದನ್ನು ಸ್ಮರಿಸಬಹುದು.

 ಅಲ್ಲದೇ, ಟ್ರಸ್ಟ್‌ನ ವ್ಯವಹಾರ ಸಮರ್ಪಕವಾಗಿಲ್ಲ ಎಂಬುದಾಗಿ ಮಾಧ್ಯಮಗಳಲ್ಲಿ ಪ್ರಕಟವಾದ ವರದಿಗಳಿಗೆ ಟ್ರಸ್ಟ್ ಸ್ಪಷ್ಟನೆ ಕೂಡ ನೀಡಿತ್ತು.

ಶನಿವಾರ ವಶಪಡಿಸಿಕೊಳ್ಳಲಾದ 35 ಲಕ್ಷ ರೂಪಾಯಿ ಕುರಿತು ಅನಂತಪುರ ಜಿಲ್ಲೆಯ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಅಲ್ಲದೇ ಈ ಪ್ರಕರಣದ ಬಗ್ಗೆ ಮಾಹಿತಿ ಪಡೆದಿರುವ ಆದಾಯ ತೆರಿಗೆ ಇಲಾಖೆ ಕೂಡ ಈ ಭಾರಿ ಮೊತ್ತದ ಹಣದ ಮೂಲದ ಕುರಿತು ತನಿಖೆ ಆರಂಭಿಸಲಿದೆ.

ಪ್ರಶಾಂತಿ ನಿಲಯದ ಆವರಣದಲ್ಲಿ ಬಾಬಾ ಅವರ ಸಮಾಧಿ ನಿರ್ಮಾಣ ಕಾರ್ಯಕ್ಕೆ ದೇಣಿಗೆ ನೀಡಿರುವುದಾಗಿ ಭಕ್ತರು ಹೇಳಿಕೆ ನೀಡಿದ್ದರೂ ಬೇರೆ ಉದ್ದೇಶಕ್ಕೆ ಈ ಹಣ ರವಾನಿಸಲಾಗುತ್ತಿತ್ತು ಎಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ಬೃಹತ್ ಮೊತ್ತದ ಹಣವನ್ನು ರತ್ನಾಕರ್ ಎಂಬುವರಿಗೆ ಸೇರಿದ್ದು ಎನ್ನಲಾದ ಡಬ್ಲ್ಯೂಐಎ6 ಕೊಠಡಿಯಲ್ಲಿ ಗಂಟು ಕಟ್ಟಿ ನಂತರ ಸಾಗಿಸಲಾಗಿತ್ತು ಎಂದು ಮೂಲಗಳು ಹೇಳಿವೆ.

ರತ್ನಾಕರ್ ಪ್ರತಿಕ್ರಿಯೆ:
ಈ ಮಧ್ಯೆ, ಪುಟ್ಟಪರ್ತಿಯಿಂದ `ಪ್ರಜಾವಾಣಿ~ಗೆ ಪ್ರತಿಕ್ರಿಯೆ ನೀಡಿದ ರತ್ನಾಕರ್, `ಹಣ ಟ್ರಸ್ಟ್‌ಗೆ ಸಂದಾಯವಾಗುತ್ತಿರಲಿಲ್ಲ. ಈಗಲೂ ಟ್ರಸ್ಟ್ ಬ್ಯಾಂಕ್ ಠೇವಣಿ ಮೂಲಕವಷ್ಟೇ ನೆರವು ಸ್ವೀಕರಿಸುತ್ತಿದೆ~ ಎಂದು ಸ್ಪಷ್ಟಪಡಿಸಿದರು.

ಆದರೆ, ಆರೋಪಿಯಿಂದ ಹೇಗೆ ನಗದು ರೂಪದಲ್ಲಿ ಹಣ ವಶಪಡಿಸಿಕೊಳ್ಳಲಾಯಿತು ಹಾಗೂ ಆತ ಈ ಹಣ ಟ್ರಸ್ಟ್‌ಗೆ ಸೇರಿದ್ದು ಎಂಬುದನ್ನು ಒಪ್ಪಿಕೊಂಡಿರುವ ಕುರಿತು ಕೇಳಿದ ಪ್ರಶ್ನೆಗೆ, `ಭಕ್ತರು ಸಾಯಿಬಾಬಾ ಸಮಾಧಿಗಾಗಿ ನೆರವು ನೀಡುವ ಕಾಳಜಿಯಿಂದಾಗಿ ದೇಣಿಗೆಯನ್ನು ಹಣದ ರೂಪದಲ್ಲಿ ನೀಡಿದ್ದಾರೆ. ಇಲ್ಲದಿದ್ದರೆ ಅವರು ಬ್ಯಾಂಕ್ ಖಾತೆಗೆ ಜಮಾ ಮಾಡುತ್ತಿದ್ದರು~ ಎಂದರು.

ಹಾಗಾದರೆ, ಪುಟ್ಟಪರ್ತಿಯಲ್ಲಿ ಸಮಾಧಿ ನಿರ್ಮಿಸುತ್ತಿರುವಾಗ ಬೆಂಗಳೂರಿಗೆ ಏಕೆ ಹಣ ಸಾಗಿಸಲಾಗುತ್ತಿತ್ತು ಎಂಬ ಮತ್ತೊಂದು ಪ್ರಶ್ನೆಗೆ, `ಸಮಾಧಿ ನಿರ್ಮಾಣ ಕಾರ್ಯದ ಹೊಣೆ ಹೊತ್ತ ಗುತ್ತಿಗೆದಾರ (ಚೌಹಾಣ್) ಅವರಿಗೆ ನೀಡಲು ಹಣ ಕೊಂಡೊಯ್ಯಲಾಗುತ್ತಿತ್ತು~ ಎಂದು ಸ್ಪಷ್ಟನೆ ನೀಡಿದರು.

ಈ ಮಧ್ಯೆ, ಅಕ್ರಮ ಹಣ ಸಾಗಣೆಗೆ ಸಂಬಂಧಿಸಿದಂತೆ ಟ್ರಸ್ಟ್‌ನ ಇಬ್ಬರು ಸದಸ್ಯರಾದ ವೇಣು ಶ್ರೀನಿವಾಸನ್ ಹಾಗೂ ಆರ್.ಜೆ. ರತ್ನಾಕರ್ ಅವರನ್ನು ತಕ್ಷಣವೇ ಬಂಧಿಸಬೇಕು. ಈ ಪ್ರಕರಣದಲ್ಲಿ ರಾಜಕಾರಣಿಗಳ ಕೈವಾಡ ಶಂಕೆಯಿರುವ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಯೊಬ್ಬರಿಂದ ತನಿಖೆ ನಡೆಸಬೇಕು ಎಂದು ತೆಲುಗು ದೇಶಂ ಪಕ್ಷ ಆಗ್ರಹಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.