ADVERTISEMENT

ವಾಟ್ಸ್‌ಆ್ಯಪ್‌ ಪಾವತಿ ಸೇವೆ ಫೇಸ್‌ಬುಕ್‌ಗೆ ಮಿತ ಮಾಹಿತಿ

ಪಿಟಿಐ
Published 10 ಜೂನ್ 2018, 19:05 IST
Last Updated 10 ಜೂನ್ 2018, 19:05 IST

ನವದೆಹಲಿ: ತಾನು ಒದಗಿಸುತ್ತಿರುವ ಪಾವತಿ ಸೇವೆಗಳ ಸೀಮಿತ ಮಾಹಿತಿಯನ್ನು ಮಾತ್ರ ಮಾತೃಸಂಸ್ಥೆ ಫೇಸ್‌ಬುಕ್‌ ಜತೆ ಹಂಚಿಕೊಳ್ಳಲಾಗುತ್ತಿದೆ ಎಂದು ವಾಟ್ಸ್‌ಆ್ಯಪ್‌ ಹೇಳಿದೆ.

ಈ ದತ್ತಾಂಶವನ್ನು ವಾಣಿಜ್ಯ ಉದ್ದೇಶಗಳಿಗೆ ಫೇಸ್‌ಬುಕ್‌ ಬಳಸಿಕೊಳ್ಳುತ್ತಿಲ್ಲ. ಪಾವತಿಗೆ ಸಂಬಂಧಿಸಿದ ಅಗತ್ಯ ಮಾಹಿತಿಯನ್ನು ಬ್ಯಾಂಕುಗಳು  ಮತ್ತು ರಾಷ್ಟ್ರೀಯ ಪಾವತಿ ನಿಗಮಕ್ಕೆ (ಎನ್‌ಪಿಸಿಐ) ತಲುಪಿಸುವ ಕೆಲಸವನ್ನಷ್ಟೇ ಮಾಡುತ್ತಿದೆ ಎಂದೂ ವಾಟ್ಸ್‌ಆ್ಯಪ್‌ ತಿಳಿಸಿದೆ.

ಕೆಲವೊಮ್ಮೆ, ಗ್ರಾಹಕರಿಗೆ ನೆರವಾಗುವುದಕ್ಕಾಗಿ ಮತ್ತು ಪಾವತಿಯನ್ನು ಸುರಕ್ಷಿತವಾಗಿಸಲು ಈ ಮಾಹಿತಿಯನ್ನು ಫೇಸ್‌ಬುಕ್ ಬಳಕೆ ಮಾಡುತ್ತಿದೆ ಎಂದು ಹೇಳಿದೆ.

ADVERTISEMENT

ಭಾರತದಲ್ಲಿ ವಾಟ್ಸ್‌ಆ್ಯಪ್‌ನ ಪಾವತಿ ಸೇವೆಯ ಬೀಟಾ ಆವೃತ್ತಿ ಇದೆ. 

ವಾಟ್ಸ್ಆ್ಯಪ್‌ ಪಾವತಿ ಸೇವೆಯು ನಿಯಮಗಳಿಗೆ ಬದ್ಧವಾಗಿದೆಯೇ ಮತ್ತು ಅದು ಫೇಸ್‌ಬುಕ್‌ ಜತೆಗೆ ಮಾಹಿತಿ ಹಂಚಿಕೆ ಮಾಡುತ್ತಿದೆಯೇ ಎಂಬುದನ್ನು ಪರಿಶೀಲಿಸುವಂತೆ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಎನ್‌ಪಿಸಿಐಗೆ ತಿಳಿಸಿತ್ತು.

ಬಳಕೆದಾರರು ಪಾವತಿ ಸೇವೆಯನ್ನು ಬಳಸಿಕೊಂಡಾಗ, ಹಣ ಕಳುಹಿಸುವವರು ಮತ್ತು ಪಡೆದುಕೊಳ್ಳುವವರ ನಡುವೆ ಅಗತ್ಯ ಸಂಪರ್ಕವನ್ನು ಆ್ಯಪ್ ಸೃಷ್ಟಿಸುತ್ತದೆ. ಇದಕ್ಕೆ ಫೇಸ್‌ಬುಕ್‌ ಮೂಲಸೌಕರ್ಯವನ್ನು ಬಳಸಿಕೊಳ್ಳಲಾಗುತ್ತದೆ ಎಂದು ವಾಟ್ಸ್‌ಆ್ಯಪ್‌ ವೆಬ್‌ಸೈಟ್‌ನಲ್ಲಿ ಹೇಳಲಾಗಿದೆ.

ಬ್ರಿಟನ್‌ನ ದತ್ತಾಂಶ ವಿಶ್ಲೇಷಣಾ ಕಂಪನಿ ಕೇಂಬ್ರಿಜ್‌ ಅನಲಿಟಿಕಾ, ಫೇಸ್‌ಬುಕ್‌ ಮಾಹಿತಿಯನ್ನು ಅಕ್ರಮವಾಗಿ ಬಳಸಿಕೊಂಡಿರುವುದು ಬಯಲಾದ ಬಳಿಕ ಭಾರತದಲ್ಲಿರುವ ಫೇಸ್‌ಬುಕ್‌ ಬಳಕೆದಾರರ ಮಾಹಿತಿಯ ಸುರಕ್ಷತೆಯ ಬಗ್ಗೆ ಮಾಹಿತಿ ತಂತ್ರಜ್ಞಾನ ಸಚಿವಾಲಯವು ಹೆಚ್ಚು ಕಳವಳಗೊಂಡಿದೆ ಎಂದು ಮೂಲಗಳು ತಿಳಿಸಿವೆ.

**

ವಾಟ್ಸ್‌ಆ್ಯಪ್‌ ಹೇಳಿದ್ದೇನು?

* ಭಾರತದಲ್ಲಿ 10 ಕೋಟಿ ಜನರು ವಾಟ್ಸ್‌ಆ್ಯಪ್‌ ಪಾವತಿ ಸೇವೆ ಬಳಸುತ್ತಿದ್ದಾರೆ

* ಒಂದು ಬಾರಿಯ ಪಾಸ್‌ವರ್ಡ್‌ನಂತಹ ಮಾಹಿತಿಯನ್ನು ಸಂಗ್ರಹಿಸುವುದಿಲ್ಲ

* ಬ್ಯಾಂಕ್‌ ಖಾತೆ ಸಂಖ್ಯೆ, ಡೆಬಿಟ್‌ ಕಾರ್ಡ್‌ ಸಂಖ್ಯೆಯನ್ನು ದಾಖಲಿಸಿಕೊಳ್ಳುವುದಿಲ್ಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.