ನವದೆಹಲಿ (ಪಿಟಿಐ): ಅಮೆರಿಕದ ಬಹುರಾಷ್ಟ್ರೀಯ ದೈತ್ಯ ವಾಲ್ ಮಾರ್ಟ್ ಭಾರತದ ಮಾರುಕಟ್ಟೆ ಪ್ರವೇಶಿಸಲು ನಡೆಸಿದ ಲಾಬಿ ಚಟುವಟಿಕೆಗಳ ಬಗ್ಗೆ ತನಿಖೆ ನಡೆಸಲು ಸರ್ಕಾರದಿಂದ ನೇಮಕಗೊಂಡಿದ್ದ ಸಮಿತಿಯು ತನ್ನ ವರದಿಯನ್ನು ಸಿದ್ಧ ಪಡಿಸಿದ್ದು ಎರಡು ಮೂರು ದಿನಗಳ ಒಳಗೆ ಸರ್ಕಾರಕ್ಕೆ ಸಲ್ಲಿಸುವ ಸಾಧ್ಯತೆಗಳಿವೆ.
ಪಂಜಾಬ್ ಮತ್ತು ಹರಿಯಾಣ ಹೈಕೋರ್ಟಿನ ಮಾಜಿ ಮುಖ್ಯ ನ್ಯಾಯಮೂರ್ತಿ ಮುಕುಲ್ ಮುದಗಲ್ ನೇತೃತ್ವದ ಸಮಿತಿಯನ್ನು ಸರ್ಕಾರವು ಕಳೆದ ವರ್ಷ ವಿಷಯಕ್ಕೆ ಸಂಬಂಧಿಸಿದಂತೆ ರಾಜಕೀಯ ಬಿರುಗಾಳಿ ಎದ್ದ ಸಂದರ್ಭದಲ್ಲಿ ರಚಿಸಿತ್ತು. ಈ ಹಗರಣದ ಪರಿಣಾಮವಾಗಿ ಸಂಸತ್ತಿ ಕಲಾಪ ಕೂಡಾ ಸ್ಥಗಿತಗೊಂಡಿತ್ತು.
ಭಾನುವಾರ ಅಥವಾ ಸೋಮವಾರ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗುವ ನಿರೀಕ್ಷೆ ಇದೆ ಎಂದು ಮೂಲಗಳು ಹೇಳಿವೆ.
ಸಮಿತಿಯ ತೀರ್ಮಾನಗಳೇನು ಎಂಬುದು ತತ್ ಕ್ಷಣಕ್ಕೆ ಗೊತ್ತಾಗಿಲ್ಲ.
'ಭಾರತೀಯ ಕಾನೂನಿಗೆ ವಿರುದ್ಧವಾಗಿ ವಾಲ್ ಮಾರ್ಟ್ ಭಾರತದಲ್ಲಿ ತನ್ನ ಚಟುವಟಿಕೆಗಳನ್ನು ನಡೆಸಿತ್ತೇ' ಎಂಬುದನ್ನು ಪರಿಶೀಲಿಸಲು ಈ ವರ್ಷ ಜನವರಿಯಲ್ಲಿ ಸಮಿತಿಯನ್ನು ರಚಿಸಲಾಗಿತ್ತು.
ಭಾರತೀಯ ಮಾರುಕಟ್ಟೆಗೆ ಪ್ರವೇಶ ಪಡೆಯಲು ಅನುಕೂಲ ಮಾಡಿಕೊಡುವಂತೆ ವಾಲ್ ಮಾರ್ಟ್ 2008ರಿಂದಲೇ ಲಾಬಿ ನಿರತವಾಗಿ ಅಮೆರಿಕದ ಶಾಸನಕರ್ತರ ಮೇಲೆ ಒತ್ತಡ ತಂದಿತ್ತು ಎಂಬ ವರದಿಗಳ ಹಿನ್ನೆಲೆಯಲ್ಲಿ ರಾಜಕೀಯ ಬಿರುಗಾಳಿ ಎದ್ದಿತ್ತು.
ಲಾಬಿಗೆ ಸಂಬಂಧಿಸಿದಂತೆ ಪ್ರಕಟಗೊಂಡ ಅಮೆರಿಕ ಕಾಂಗ್ರೆಸ್ ದಾಖಲೆಗಳ ಪ್ರಕಾರ ವಾಲ್ ಮಾರ್ಟ್ ಕಂಪೆನಿಯು ಈ ಲಾಬಿಗಾಗಿ ಮಾಡಿದ ವೆಚ್ಚ 6.13 ಅಮೆರಿಕನ್ ಡಾಲರ್ ಗಳು (33 ಕೋಟಿ ರೂಪಾಯಿಗಳು).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.