ADVERTISEMENT

ವಿಕಿರಣ ನಿರೋಧಕವಾಗಿ ತುಳಸಿ

​ಪ್ರಜಾವಾಣಿ ವಾರ್ತೆ
Published 7 ಜನವರಿ 2012, 19:30 IST
Last Updated 7 ಜನವರಿ 2012, 19:30 IST

ಭುವನೇಶ್ವರ (ಐಎಎನ್‌ಎಸ್): ಭಾರತೀಯ ಪರಂಪರೆಯಲ್ಲಿ ತುಳಸಿಗೆ ವಿಶಿಷ್ಟವಾದ ಸ್ಥಾನವಿದೆ. ಅರ್ಚನೆಯಿಂದ ಹಿಡಿದು ಮನೆ ಮದ್ದಿನವರೆಗೆ ಇದರ ಬಳಕೆಯ ವ್ಯಾಪ್ತಿ ಚಾಚಿಕೊಂಡಿದೆ. ಹೀಗೆ ಪಾರಂಪರಿಕ ಹಾಗೂ ವೈದ್ಯಕೀಯ ಮಹತ್ವವುಳ್ಳ ತುಳಸಿ ವಿಕಿರಣ ನಿರೋಧಕವಾಗಿಯೂ ಕೆಲಸ ಮಾಡುತ್ತದೆ ಎನ್ನುವ ಸಂಗತಿ ಇದೀಗ ದೃಢಪಟ್ಟಿದೆ.

ವಿಕಿರಣ ಹೊರಸೂಸುವಿಕೆಯಿಂದ ಬಾಧಿತರಾದವರ ಚಿಕಿತ್ಸೆಯಲ್ಲಿ ತುಳಸಿಯನ್ನು ಬಳಸಲಾಗಿದ್ದು, ಕೆಲವೊಂದು ಧನಾತ್ಮಕ ಪರಿಣಾಮಗಳು ಕಂಡುಬಂದಿವೆ ಎಂದು ಶನಿವಾರ ಇಲ್ಲಿ ಮುಕ್ತಾಯಗೊಂಡ ಐದು ದಿನಗಳ ಭಾರತೀಯ ವಿಜ್ಞಾನ ಸಮಾವೇಶದಲ್ಲಿ ವಿಜ್ಞಾನಿಗಳು ಪ್ರತಿಪಾದಿಸಿದ್ದಾರೆ. ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ) ವಿಜ್ಞಾನಿಗಳು ತುಳಸಿಯನ್ನು ಒಳಗೊಂಡ ಮೂಲಿಕೆ ಔಷಧವನ್ನು ಅಭಿವೃದ್ಧಿಪಡಿಸಿದ್ದು, ಇದು ಈಗಾಗಲೇ ಎರಡನೇ ಹಂತದ ಪ್ರಯೋಗ ಪರೀಕ್ಷೆಗೆ ಒಳಪಟ್ಟಿದೆ.

ತುಳಸಿಯಲ್ಲಿ ಆ್ಯಂಟಿ ಆಕ್ಸಿಡೆಂಟ್ ಅಂಶವಿದ್ದು, ಇದು ವಿಕಿರಣದ ಪ್ರಭಾವದಿಂದ ಹಾನಿಗೊಳಗಾದ ಜೀವಕೋಶಗಳ ಪುನಶ್ಚೇತನಕ್ಕೆ ಸಹಕಾರಿ ಎಂದು ವಿಜ್ಞಾನಿಗಳು ಹೇಳಿದ್ದಾರೆ. `ತುಳಸಿಯಿಂದ ತಯಾರಿಸಿದ ಮೂಲಿಕೆ ಔಷಧವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವಮುನ್ನ ಇನ್ನೂ ಹೆಚ್ಚಿನ ಪ್ರಯೋಗಗಳು ನಡೆಯಬೇಕಿದೆ. ಪ್ರಾಣಿಗಳ ಮೇಲೆ ಈಗಾಗಲೇ ಈ ಔಷಧವನ್ನು ಪ್ರಯೋಗಿಸಲಾಗಿದ್ದು, ಫಲಿತಾಂಶ ಉತ್ತೇಜನಕಾರಿಯಾಗಿದೆ~ ಎಂದು ಡಿಆರ್‌ಡಿಒ ಮುಖ್ಯ ನಿಯಂತ್ರಕ ಸೆಲ್ವಮೂರ್ತಿ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ವಿಕಿರಣ ಹೊರಸೂಸುವಿಕೆಯಿಂದ ಬಾಧೆಗೊಳಗಾದವರ ಚಿಕಿತ್ಸೆಯಲ್ಲಿ ಇದೇ ಮೊದಲ ಬಾರಿಗೆ ವಿಶ್ವದಲ್ಲಿ ತುಳಸಿಯನ್ನು ಬಳಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

`ವಿಕಿರಣ ನಿರೋಧಕ ತುಳಸಿ ಮೂಲಿಕೆ ಔಷಧ ಯೋಜನೆಯು ಸುಮಾರು 7 ಕೋಟಿ ರೂಪಾಯಿ ವೆಚ್ಚದ್ದಾಗಿದೆ. ಸಾಮಾನ್ಯವಾಗಿ ವಿಕಿರಣ ಸಂಬಂಧಿ ಸಮಸ್ಯೆಗಳ ಚಿಕಿತ್ಸೆಗೆ ಬಳಸುವ ಔಷಧಗಳು ವಿಷಕಾರಕವಾಗಿರುತ್ತವೆ. ಈ ದೃಷ್ಟಿಯಿಂದ ನೋಡಿದರೆ ತುಳಸಿ ಮೂಲಿಕೆ ಔಷಧ ಅತ್ಯಂತ ಸುರಕ್ಷಿತ~ ಎಂದು ಅವರು ವಿಶ್ಲೇಷಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.