ADVERTISEMENT

ವಿಚಾರವಾದಿಗಳ ಹತ್ಯೆ ಅಪಾಯಕಾರಿ ಬೆಳವಣಿಗೆ

ಗೌರಿ ಲಂಕೇಶ್‌ ಹತ್ಯೆಗೆ ಬಾಂಬೆ ಹೈಕೋರ್ಟ್‌ ಕಳವಳ: ದೇಶಕ್ಕೆ ಕೆಟ್ಟ ಹೆಸರು ತರುತ್ತಿರುವ ಕೊಲೆಗಳು

ಪಿಟಿಐ
Published 12 ಅಕ್ಟೋಬರ್ 2017, 19:30 IST
Last Updated 12 ಅಕ್ಟೋಬರ್ 2017, 19:30 IST
ವಿಚಾರವಾದಿಗಳ ಹತ್ಯೆ ಅಪಾಯಕಾರಿ ಬೆಳವಣಿಗೆ
ವಿಚಾರವಾದಿಗಳ ಹತ್ಯೆ ಅಪಾಯಕಾರಿ ಬೆಳವಣಿಗೆ   

ಮುಂಬೈ : ’ಉದಾರ ಮೌಲ್ಯಗಳನ್ನು ಪ್ರತಿಪಾದಿಸುವವರು ಮತ್ತು ವಿಭಿನ್ನ ಅಭಿಪ್ರಾಯ ವ್ಯಕ್ತಪಡಿಸುವ ವಿಚಾರವಾದಿಗಳನ್ನು ಹತ್ಯೆ ಮಾಡುತ್ತಿರುವುದು ಅಪಾಯಕಾರಿ ಬೆಳವಣಿಗೆಯಾಗಿದೆ’ ಎಂದು ಬಾಂಬೆ ಹೈಕೋರ್ಟ್‌ ಕಳವಳ ವ್ಯಕ್ತಪಡಿಸಿದೆ.

ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣವನ್ನು ಪ್ರಸ್ತಾಪಿಸಿದ ನ್ಯಾಯಮೂರ್ತಿ ಎಸ್‌.ಸಿ. ಧರ್ಮಾಧಿಕಾರಿ ಮತ್ತು ಭಾರತಿ ಡಾಂಗ್ರೆ ಅವರನ್ನೊಳಗೊಂಡ ಪೀಠವು, ’ಇತ್ತೀಚಿನ ಬೆಳವಣಿಗೆಗಳಿಂದ ದೇಶಕ್ಕೆ ಕೆಟ್ಟ ಹೆಸರು ಬರುತ್ತಿದೆ’ ಎಂದು ಅಭಿಪ್ರಾಯಪಟ್ಟಿದೆ.

ವಿಚಾರವಾದಿಗಳಾದ ಗೋವಿಂದ ಪಾನ್ಸರೆ ಮತ್ತು ನರೇಂದ್ರ ದಾಭೋಲ್ಕರ್‌ ಅವರ ಹತ್ಯೆ ಪ್ರಕರಣದ ತನಿಖೆಯನ್ನು ನ್ಯಾಯಾಲಯದ ನಿಗಾದಲ್ಲಿ ನಡೆಸಬೇಕು ಎಂದು ಸಲ್ಲಿಸಲಾಗಿದ್ದ ಮನವಿಯ ವಿಚಾರಣೆ ಸಂದರ್ಭದಲ್ಲಿ ಪೀಠವು ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ADVERTISEMENT

‘ಮುಕ್ತ ಚಿಂತನೆ, ಉದಾರವಾದ ಅಭಿಪ್ರಾಯಗಳು ಮತ್ತು ಮೌಲ್ಯಗಳಿಗೆ ಬೆಲೆಯೇ ಇಲ್ಲದಂತಾಗಿದೆ. ಮುಕ್ತ ಸಿದ್ಧಾಂತಗಳನ್ನು ಪ್ರತಿಪಾದಿಸುವವರನ್ನು ಗುರಿ ಮಾಡಲಾಗುತ್ತಿದೆ. ಜೀವ ಬೆದರಿಕೆ ಕೇವಲ ಚಿಂತಕರಿಗೆ ಮಾತ್ರ ಸೀಮಿತವಾಗಿಲ್ಲ. ಉದಾರ ಮನೋಭಾವ ಸಿದ್ಧಾಂತ ಪ್ರತಿಪಾದಿಸುವ ವ್ಯಕ್ತಿಗಳು ಅಥವಾ ಸಂಸ್ಥೆಯನ್ನು ಸಹ ಗುರಿ ಮಾಡಲಾಗುತ್ತಿದೆ. ಇದರಿಂದ ಅಪಾಯಕಾರಿ ವಾತಾವರಣ ಸೃಷ್ಟಿಯಾಗುತ್ತಿದೆ. ಉದಾಹರಣೆಗೆ ನನ್ನನ್ನು ಯಾರಾದರೂ ವಿರೋಧಿಸಿದರೆ ಅವನನ್ನು ಹತ್ಯೆ ಮಾಡಬೇಕು ಎನ್ನುವ ಭೀಭತ್ಸ ಮನಸ್ಥಿತಿ ಮೂಡುತ್ತಿದೆ’ ಎಂದು ಪೀಠ ಆತಂಕ ವ್ಯಕ್ತಪಡಿಸಿತು.

ಪಾನ್ಸಾರೆ ಮತ್ತು ದಾಭೋಲ್ಕರ್‌ ಹತ್ಯೆ ಪ್ರಕರಣದ ತನಿಖಾ ವರದಿಗಳನ್ನು ಸಿಬಿಐ ಮತ್ತು ಮಹಾರಾಷ್ಟ್ರದ ಸಿಐಡಿ ನ್ಯಾಯಾಲಯಕ್ಕೆ ಸಲ್ಲಿಸಿದವು. ಈ ಎರಡು ವರದಿಗಳಲ್ಲಿನ ಕೆಲವು ಅಂಶಗಳ ಬಗ್ಗೆಯೂ ಪೀಠ ಅಸಮಾಧಾನ ವ್ಯಕ್ತಪಡಿಸಿತು.

‘ತನಿಖಾ ಸಂಸ್ಥೆಗಳು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದ್ದರೂ ಯಾವುದೇ ರೀತಿಯ ಫಲಿತಾಂಶ ದೊರೆತಿಲ್ಲ. ಪ್ರಮುಖ ಆರೋಪಿಗಳು ಇನ್ನೂ ಪತ್ತೆಯಾಗಿಲ್ಲ. ಈ ಪ್ರಕರಣದ ವಿಚಾರಣೆಯನ್ನು ಮತ್ತೊಂದು ದಿನ ನಡೆಸುವ ಮುನ್ನ ಅತ್ಯಮೂಲ್ಯ ವ್ಯಕ್ತಿಯ ಕೊಲೆಯಾಗುತ್ತಿದೆ. ಕಳೆದ ತಿಂಗಳು ಬೆಂಗಳೂರಿನಲ್ಲಿ ಉದಾರ ಮನೋಭಾವ ಹೊಂದಿದ್ದ ಮಹಿಳೆಯ ಕೊಲೆಯಾಯಿತು’ ಎಂದು ಗೌರಿ ಲಂಕೇಶ್‌ ಹತ್ಯೆ ಪ್ರಕರಣವನ್ನು ಪೀಠವು ಉಲ್ಲೇಖಿಸಿತು.

‘ತನಿಖಾ ಸಂಸ್ಥೆಗಳು ತನಿಖೆಯ ಮಾರ್ಗವನ್ನು ಬದಲಾಯಿಸಿಕೊಳ್ಳಬೇಕು. ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಕೊಲೆಗಾರರನ್ನು ಬಂಧಿಸಬೇಕು. ಕೊಲೆಗಾರರಿಗೆ ಸಂಸ್ಥೆಗಳ ಬೆಂಬಲ, ಹಣಕಾಸಿನ ಮತ್ತು ತಾಂತ್ರಿಕತೆಯ ನೆರವು ಹಾಗೂ ಶಸ್ತ್ರಾಸ್ತ್ರಗಳು ದೊರೆಯುತ್ತಿರಬಹುದು. ಈ ಬಗ್ಗೆ ತನಿಖೆ ನಡೆಸಬೇಕು’ ಎಂದು ನ್ಯಾಯಾಲಯ ತಿಳಿಸಿತು.

‘ತನಿಖಾ ವರದಿಯ ವಿವರಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ. ತನಿಖಾ ಸಂಸ್ಥೆಗಳು ಸಮಗ್ರವಾಗಿ ತನಿಖೆ ನಡೆಸಿವೆ. ಈ ಪ್ರಕರಣಗಳಲ್ಲಿ ಸನಾತನ ಸಂಸ್ಥೆಯ ಪಾತ್ರವಿರುವ ಸಾಧ್ಯತೆಯನ್ನೂ ತನಿಖಾ ಸಂಸ್ಥೆಗಳು ಕಡೆಗಣಿಸಿಲ್ಲ’ ಎಂದು ಪೀಠ ತಿಳಿಸಿದೆ.

ಸಾರಂಗ ಅಕೋಲ್ಕರ್‌ ಮತ್ತು ವಿನಯ ಪವಾರ್‌ ಎನ್ನುವವರು 2013ರಲ್ಲಿ ದಾಭೋಲ್ಕರ್‌ ಅವರನ್ನು ಕೊಲೆ ಮಾಡಿರುವ ಆರೋಪಿಗಳು ಎಂದು ಸಿಬಿಐ ಗುರುತಿಸಿದೆ. ಆದರೆ, ಇದುವರೆಗೆ ಈ ಇಬ್ಬರು ಪತ್ತೆಯಾಗಿಲ್ಲ ಎನ್ನುವುದನ್ನು ನ್ಯಾಯಾಲಯ ವಿಚಾರಣೆ ಸಂದರ್ಭದಲ್ಲಿ ಪ್ರಸ್ತಾಪಿಸಿತು.

ದಾಭೋಲ್ಕರ್‌ ಮತ್ತು ಪಾನ್ಸರೆ ಅವರ ಸಂಬಂಧಿಕರು ನ್ಯಾಯಾಲಯದ ನಿಗಾದಲ್ಲಿ ತನಿಖೆ ನಡೆಸುವಂತೆ ಮನವಿ ಸಲ್ಲಿಸಿದ್ದರು.

* ಸಿದ್ಧಾಂತಗಳಿಗಾಗಿ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಜನರ ಕೊಲೆಯಾಗುವುದಿಲ್ಲ ಎನ್ನುವುದಕ್ಕೆ ಏನಾದರೂ ಖಾತ್ರಿ ಇದೆಯೇ?

–ಬಾಂಬೆ ಹೈಕೋರ್ಟ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.