ADVERTISEMENT

ವಿದ್ಯಾರ್ಥಿಗಳಲ್ಲಿ ಹೆಚ್ಚುತ್ತಿರುವ ಗೀಳು

ಪಿಟಿಐ
Published 20 ಮೇ 2018, 19:38 IST
Last Updated 20 ಮೇ 2018, 19:38 IST
ವಿದ್ಯಾರ್ಥಿಗಳಲ್ಲಿ ಹೆಚ್ಚುತ್ತಿರುವ ಗೀಳು
ವಿದ್ಯಾರ್ಥಿಗಳಲ್ಲಿ ಹೆಚ್ಚುತ್ತಿರುವ ಗೀಳು   

ನವದೆಹಲಿ: ಭಾರತದ ಕಾಲೇಜು ವಿದ್ಯಾರ್ಥಿಗಳು ಪ್ರತಿದಿನ ಸರಾಸರಿ 150 ಕ್ಕೂ ಹೆಚ್ಚು ಬಾರಿ ತಮ್ಮ ಸ್ಮಾರ್ಟ್‌ಫೋನ್‌ಗಳನ್ನು ಪರಿಶೀಲಿಸುತ್ತಾರೆ ಎಂದು ಅಲಿಗಡ ಮುಸ್ಲಿಂ ವಿಶ್ವವಿದ್ಯಾಲಯ ಮತ್ತು ಇಂಡಿಯನ್‌ ಕೌನ್ಸಿಲ್‌ ಆಫ್‌ ಸೋಷಿಯಲ್‌ ಸೈನ್ಸ್‌ ರಿಸರ್ಚ್‌ (ಐಸಿಎಸ್‌ಎಸ್‌ಆರ್‌) ನಡೆಸಿದ ಅಧ್ಯಯನ ಹೇಳಿದೆ.

‘ಸ್ಮಾರ್ಟ್‌ಫೋನ್‌ ಅವಲಂಬನೆ ಮತ್ತು ಕೊಳ್ಳುವಿಕೆಯ ವರ್ತನೆ; ಡಿಜಿಟಲ್‌ ಇಂಡಿಯಾ ಕ್ರಮಗಳು’ ಶೀರ್ಷಿಕೆಯಡಿ ಈ ಅಧ್ಯಯನವನ್ನು ದೇಶದ 20 ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ನಡೆಸಲಾಗಿತ್ತು. ಪ್ರತಿ ವಿವಿಯಲ್ಲಿ 200 ವಿದ್ಯಾರ್ಥಿಗಳನ್ನು ಸಂದರ್ಶಿಸಲಾಗಿತ್ತು.

‘ಆತಂಕ, ಮಾಹಿತಿ ಕಳೆದುಕೊಳ್ಳುವ ಭಯದಿಂದಾಗಿ ವಿದ್ಯಾರ್ಥಿಗಳು ಪ್ರತಿದಿನ 150ಕ್ಕೂ ಹೆಚ್ಚು ಬಾರಿ ತಮ್ಮ ಸ್ಮಾರ್ಟ್‌ಫೋನ್‌ಗಳನ್ನು ಪರಿಶೀಲಿಸುತ್ತಾರೆ. ಇದು ಅವರ ಶೈಕ್ಷಣಿಕ ಚಟುವಟಿಕೆ ಮತ್ತು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟು ಮಾಡುತ್ತದೆ’ ಎಂದು ಅಧ್ಯಯನ ವಿವರಿಸಿದೆ.

ADVERTISEMENT

‘ಕೇವಲ ಶೇ 26ರಷ್ಟು ಜನ ಮಾತ್ರ ಕರೆ ಮಾಡಲು ಸ್ಮಾರ್ಟ್‌ಫೋನ್‌ ಅನ್ನು ಬಳಸುತ್ತೇವೆ’ ಎಂದು ಪ್ರತಿಕ್ರಿಯಿಸಿದ್ದಾರೆ. ಉಳಿದವರು ಸಾಮಾಜಿಕ ಜಾಲತಾಣ, ಗೂಗಲ್‌ನಲ್ಲಿ ಹುಡುಕಾಟಕ್ಕೆ, ಮನೋರಂಜನೆ ಮತ್ತು ಚಲನಚಿತ್ರ ವೀಕ್ಷಣೆಗೆ ಬಳಸುತ್ತಾರೆ’ ಎಂದು ಈ ಸಂಶೋಧನಾ ಯೋಜನೆಯ ನಿರ್ದೇಶಕ ಮಹಮದ್‌ ನಾವೆದ್‌ ಖಾನ್‌ ತಿಳಿಸಿದ್ದಾರೆ.

ಕನಿಷ್ಠ ಶೇ 14ರಷ್ಟು ವಿದ್ಯಾರ್ಥಿಗಳು ಪ್ರತಿದಿನ ಮೂರು ಗಂಟೆ ಅಥವಾ ಅದಕ್ಕಿಂತ ಕಡಿಮೆ ಅವಧಿಯ ಕಾಲ ಸ್ಮಾರ್ಟ್‌ಫೋನ್‌ ಬಳಸುತ್ತಾರೆ. ಶೇ 63ರಷ್ಟು ಜನ ದಿನಕ್ಕೆ 4ರಿಂದ 7 ಗಂಟೆಗಳಷ್ಟು ಕಾಲ ಸ್ಮಾರ್ಟ್‌ಫೋನ್‌ ಬಳಸುತ್ತಾರೆ.

‘ಇನ್ನೊಂದು ಆಘಾತಕಾರಿ ಅಂಶವೆಂದರೆ ಶೇ 23ರಷ್ಟು ವಿದ್ಯಾರ್ಥಿಗಳು ಪ್ರತಿದಿನ 8ಗಂಟೆಗೂ ಹೆಚ್ಚು ಕಾಲ ಸ್ಮಾರ್ಟ್‌ಫೋನ್‌ ಬಳಸುತ್ತಾರೆ’ ಎಂದು ಖಾನ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.