ADVERTISEMENT

ವಿದ್ಯಾರ್ಥಿ ಕಾಲ್ಪಟ್ಟಿ ಪ್ರಕರಣ: ಸಿಬಲ್ ಬೇಸರ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2011, 18:15 IST
Last Updated 2 ಫೆಬ್ರುವರಿ 2011, 18:15 IST


ನವದೆಹಲಿ (ಪಿಟಿಐ): ಕ್ಯಾಲಿಫೋರ್ನಿಯಾದಲ್ಲಿ ಭಾರತೀಯ ವಿದ್ಯಾರ್ಥಿಗಳಿಗೆ ಕಾಲ್ಪಟ್ಟಿ ತೊಡಿಸಿದ ಕ್ರಮದ ಬಗ್ಗೆ ಅಮೆರಿಕದ ರಾಯಭಾರ ಕಚೇರಿ ವಕ್ತಾರರು ನೀಡಿದ ಪ್ರತಿಕ್ರಿಯೆ ‘ಮನ ನೋಯಿಸು’ವ ಹೇಳಿಕೆ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವ ಕಪಿಲ್ ಸಿಬಲ್ ಹೇಳಿದರು.

ಹೈದರಾಬಾದ್‌ನಲ್ಲಿರುವ ಅಮೆರಿಕ ರಾಯಭಾರಿ ಕಚೇರಿಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಜ್ಯೂಲಿಯೆಟ್ ವೂರ್ ‘ರೇಡಿಯೋಕಾಲರ್-ಕಾಲ್ಪಟ್ಟಿ ಜೈಲು ಶಿಕ್ಷೆಗೆ ಸಮನಾದುದು’ ಎಂಬರ್ಥದ ಹೇಳಿಕೆ   ನೀಡಿದ್ದರು.

ದೆಹಲಿಯಲ್ಲಿ ಬುಧವಾರ ನಡೆದ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ (ಐಸಿಎಆರ್) ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಸಿಬಲ್ ಸುದ್ದಿಗಾರರ ಪ್ರಶ್ನೆಗೆ ಈ ರೀತಿ  ಉತ್ತರಿಸಿದರು.

‘ಕಾಲ್ಪಟ್ಟಿ ತೊಡಿಸುವುದು ಜೈಲು ಶಿಕ್ಷೆಗೆ ಸಮನಾದುದು. ಪಾನಮತ್ತರಾಗಿ ವಾಹನ ಚಲಾಯಿಸಿ ಸಿಕ್ಕಿ   ಬಿದ್ದ ಅದೆಷ್ಟೊ ಮಂದಿ ಹಾಲಿವುಡ್ ಸಿನಿ ತಾರೆಯರು ಕಿತ್ತಳೆ ಬಣ್ಣದ ಉಡುಪಿನಲ್ಲಿ ಜೈಲಿನಲ್ಲಿ ಇರುವದಕ್ಕಿಂತ ಕಾಲ್ಪಟ್ಟಿ ಹಾಕಿಕೊಂಡು ಓಡಾಡುವುದೇ ಸೂಕ್ತ ಎಂಬಂತೆ ಆಯ್ಕೆ ಮಾಡಿ ಕೊಳ್ಳುತ್ತಿದ್ದಾರೆ.

ಕಾಲ್ಪಟ್ಟಿ ಅಥವಾ ಜೈಲು ಶಿಕ್ಷೆ ಯಾವುದನ್ನಾದರೂ ಆರಿಸಿಕೊಳ್ಳಬಹುದು. ವ್ಯಕ್ತಿ ಪರಾರಿಯಾಗದಂತೆ ತಡೆಯಲು ಇದನ್ನು ಬಳಸಲಾಗುತ್ತದೆ’ ಎಂದು ವೂರ್ ಹೇಳಿಕೆ ನೀಡಿದ್ದರು.

ಆದರೆ ಭಾರತೀಯರು ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಬಳಿಕ ವೂರ್ ತಮ್ಮ ಹೇಳಿಕೆಗೆ ಕ್ಷಮೆ ಕೋರಿದ್ದರು.ಪ್ರಕರಣದ ಬಗ್ಗೆ ವಿದೇಶಾಂಗ ವ್ಯವಹಾರ ಇಲಾಖೆ ಕ್ರಮ  ಕೈಗೊಳ್ಳುತ್ತಿದೆ ಎಂದು ಹೇಳಿರುವ ಸಿಬಲ್, ಭಾರತೀಯ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಆಯ್ಕೆ ಸಂದರ್ಭದಲ್ಲಿ ಎಚ್ಚರ  ವಹಿಸಬೇಕು ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.