ADVERTISEMENT

ವಿದ್ಯುತ್ ದರ ನಿಗದಿ ಅಧಿಕಾರ ಶೀಘ್ರ ನಿಯಂತ್ರಣ ಮುಕ್ತ?

​ಪ್ರಜಾವಾಣಿ ವಾರ್ತೆ
Published 21 ಜನವರಿ 2012, 19:55 IST
Last Updated 21 ಜನವರಿ 2012, 19:55 IST

ನವದೆಹಲಿ: ವಿದ್ಯುತ್ ವಿತರಣಾ ಕಂಪೆನಿಗಳು ಇನ್ನು ಮುಂದೆ ದರ ಏರಿಕೆಗೆ ಸರ್ಕಾರದ ಮರ್ಜಿ ಕಾಯುವ ಅಗತ್ಯ ಬೀಳುವುದಿಲ್ಲ. ಆಯಾ ರಾಜ್ಯಗಳ ವಿದ್ಯುತ್ ನಿಯಂತ್ರಣ ಆಯೋಗವೇ ಸ್ವಪ್ರೇರಣೆಯಿಂದ ವಿದ್ಯುತ್ ದರ ಪರಿಷ್ಕರಣೆಗೆ ವಿದ್ಯುತ್ ವಿತರಣಾ ಕಂಪೆನಿಗಳಿಗೆ ಆದೇಶಿಸುವ ಕಾಲ ಸನ್ನಿಹಿತವಾಗಿದೆ.

ಮಾರುಕಟ್ಟೆ ಪರಿಸ್ಥಿತಿ ಆಧರಿಸಿ ವಿದ್ಯುತ್ ವಿತರಣಾ ಕಂಪೆನಿಗಳೇ ದರ ಪರಿಷ್ಕರಿಸಲು ಅಧಿಕಾರ ನೀಡಲು ಚಿಂತನೆ ನಡೆಸಲಾಗಿದ್ದು, ಇದರಿಂದ ರಾಜಕಾರಣಿಗಳ ಹಸ್ತಕ್ಷೇಪಕ್ಕೆ ಕಡಿವಾಣ ಬೀಳಲಿದೆ.

12ನೇ ಪಂಚವಾರ್ಷಿಕ ಯೋಜನೆಯಲ್ಲಿ (2012-2017) ಅಳವಡಿಸಲಾಗುವ ನೀತಿಗೆ ಸಂಬಂಧಿಸಿದ ಇಂಧನ ಖಾತೆಯ ಕರಡು ವರದಿಯಲ್ಲಿ ವಿದ್ಯುತ್ ಕಾಯ್ದೆಗೆ ತಿದ್ದುಪಡಿ ಮಾಡಿ ರಾಜ್ಯ ವಿದ್ಯುತ್ ನಿಯಂತ್ರಣ ಆಯೋಗಕ್ಕೆ ವಿದ್ಯುತ್ ದರ ಪರಿಷ್ಕರಿಸುವ ಅಧಿಕಾರ ನೀಡುವ ಪ್ರಸ್ತಾಪವಿದೆ.

ಪ್ರತಿ ವರ್ಷವೂ ವಿದ್ಯುತ್ ಉತ್ಪಾದನಾ ವೆಚ್ಚ ಹೆಚ್ಚುತ್ತಿರುವುದರಿಂದ ವಿತರಣಾ ಕಂಪೆನಿಗಳ ಹಣಕಾಸು ಸ್ಥಿತಿಯಲ್ಲಿ ಸ್ಥಿರತೆ ಕಾಪಾಡಲು ದರ ನಿಗದಿಯ ಸ್ವಾತಂತ್ರ್ಯ ನೀಡಲು ಉದ್ದೇಶಿಸಲಾಗಿದೆ ಎಂದು ಇಂಧನ ಇಲಾಖೆಯ ಹಿರಿಯ ಅಧಿಕಾರಿಗಳು `ಪ್ರಜಾವಾಣಿ~ಗೆ ತಿಳಿಸಿದ್ದಾರೆ. 

ಅನೇಕ ರಾಜ್ಯಗಳ ವಿದ್ಯುತ್ ವಿತರಣಾ ಕಂಪೆನಿಗಳು ಸತತ ನಷ್ಟ ಅನುಭವಿಸುತ್ತಿರುವುದರಿಂದ ಕೇಂದ್ರ ಇಂಧನ ಇಲಾಖೆ 12ನೇ ಪಂಚವಾರ್ಷಿಕ ಯೋಜನೆಯ ನೀತಿಯಲ್ಲಿ ಇದನ್ನು ಅಳವಡಿಸಲು ಉದ್ದೇಶಿಸಿದೆ.

ವಿತರಣಾ ಕಂಪೆನಿಗಳು ಉತ್ಪಾದನಾ ಕಂಪೆನಿಗಳಿಂದ ನೇರ ವಿದ್ಯುತ್ ಖರೀದಿಸುವ ಬದಲು ಸ್ಪರ್ಧಾತ್ಮಕ ಬೆಲೆ ನಿಗದಿ ಮೂಲಕ ಖರೀದಿ ಮಾಡಬೇಕು ಎಂಬ ಪ್ರಸ್ತಾವವೂ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.