ADVERTISEMENT

ವಿಮಾನದ ಟೈರ್‌ ಸ್ಫೋಟ

ಏಜೆನ್ಸೀಸ್
Published 2 ಜೂನ್ 2018, 19:30 IST
Last Updated 2 ಜೂನ್ 2018, 19:30 IST

ಅಹಮದಾಬಾದ್: ಇಲ್ಲಿನ ವಿಮಾನ ನಿಲ್ದಾಣದಿಂದ ಬ್ಯಾಂಕಾಕ್‌ಗೆ ಹೊರಟಿದ್ದ ಸ್ಪೈಸ್‌ಜೆಟ್‌ ವಿಮಾನದ ಟೈರ್‌, ಹಾರಾಟ ಆರಂಭಿಸಿದ ಕೆಲವೇ ನಿಮಿಷಗಳಲ್ಲಿ ಸ್ಫೋಟಿಸಿದ್ದು, ಪೈಲಟ್‌ಗಳ ಸಮಯಪ್ರಜ್ಞೆಯಿಂದ 188 ಪ್ರಯಾಣಿಕರು ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ.

ಟೈರ್‌ ಸ್ಫೋಟದ ನಂತರ ವಿಮಾನ ರನ್‌ವೇಯಲ್ಲಿ ನಿಂತಿದ್ದರಿಂದ ಸಂಚಾರ ದಟ್ಟಣೆ ಉಂಟಾಯಿತು. 25 ವಿಮಾನಗಳ ಸಂಚಾರ 2 ಗಂಟೆ ತಡವಾಯಿತು.

ಸಿಆರ್‌ಪಿಎಫ್‌ ಯೋಧ ಆತ್ಮಹತ್ಯೆ

ADVERTISEMENT

ಚೆನ್ನೈ: ಹರಿಯಾಣ ಮೂಲದ ಸಿಆರ್‌ಪಿಎಫ್‌ ಯೋಧ ರಾಜೇಶ್‌ಕುಮಾರ್‌ ಎಂಬುವವರು ಗುಂಡು ಹಾರಿಸಿಕೊಂಡು ಶನಿವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಚೆನ್ನೈನಲ್ಲಿರುವ ಸಿಆರ್‌ಪಿಎಫ್‌ ಶಿಬಿರದಲ್ಲಿ ಬೆಳಿಗ್ಗೆ ಗುಂಡು ಹಾರಿಸಿಕೊಂಡ ರಾಜೇಶ್ ಕುಮಾರ್‌ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಸಾವಿಗೆ ಕಾರಣ ತಿಳಿದುಬಂದಿಲ್ಲ. ಆತ್ಮಹತ್ಯೆಗೆ ಕೆಲಸದ ಒತ್ತಡ ಅಥವಾ ಇತರ ಕಾರಣ ಇರಬಹುದೇ ಎಂಬ ಕುರಿತು ತನಿಖೆ ನಡೆಸಲಾಗುವುದು ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕರ್ಫ್ಯೂ ಮುಂದುವರಿಕೆ

ಶಿಲ್ಲಾಂಗ್‌: ಅಕ್ರಮ ವಲಸಿಗರ ವಿರುದ್ಧ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿ ಇಲ್ಲಿ ನಡೆಯುತ್ತಿರುವ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು ಗುಂಪೊಂದು ಅಂಗಡಿ, ಮನೆಗೆ ಬೆಂಕಿ ಹಚ್ಚಿದ್ದು ಪೊಲೀಸ್‌ ಅಧಿಕಾರಿಯೊಬ್ಬರಿಗೆ ರಾಡ್‌ನಿಂದ ಹೊಡೆದಿದೆ.

ಘಟನೆಯಲ್ಲಿ ಕನಿಷ್ಠ 10 ಮಂದಿ ಗಾಯಗೊಂಡಿದ್ದು, ಐದು ವಾಹನಗಳಿಗೆ ಹಾನಿಯಾಗಿದೆ. ರಾತ್ರಿ ಪೂರ್ತಿ ಹಿಂಸಾಚಾರ ಮುಂದುವರಿದ ಕಾರಣ ಈ ಪ್ರದೇಶದಲ್ಲಿ ಹೇರಿರುವ ಕರ್ಫ್ಯೂವನ್ನು ಮುಂದುವರಿಸಲಾಗಿದೆ.

ಗಾಯಗೊಂಡಿರುವ ಪೊಲೀಸ್ ವರಿಷ್ಠಾಧಿಕಾರಿ (ನಗರ) ಸ್ಟೀಫನ್ ರೈನ್ಜಾ ಅವರನ್ನು ಶಿಲ್ಲಾಂಗ್‌ನ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಗುರುವಾರ ಮಧ್ಯಾಹ್ನ ಥೆಮ್‌ ಮೆಟೋರ್‌ ಪ್ರದೇಶದ ನಿವಾಸಿಗಳು ಬಸ್‌ ಕ್ಲೀನರ್ ಮೇಲೆ ಹಲ್ಲೆ ನಡೆಸಿರುವ ವದಂತಿ ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿದ ನಂತರ ಗಲಭೆ ಆರಂಭವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.