ADVERTISEMENT

ವಿಮಾನ ವಿಳಂಬಕ್ಕೆ ಪ್ರಯಾಣಿಕರಿಗೆ ಪರಿಹಾರ

ಕರಡು ನಿಯಮಗಳನ್ನು ಪ್ರಕಟಿಸಿದ ವಿಮಾನಯಾನ ಸಚಿವಾಲಯ

​ಪ್ರಜಾವಾಣಿ ವಾರ್ತೆ
Published 22 ಮೇ 2018, 19:40 IST
Last Updated 22 ಮೇ 2018, 19:40 IST
ವಿಮಾನ ವಿಳಂಬಕ್ಕೆ ಪ್ರಯಾಣಿಕರಿಗೆ ಪರಿಹಾರ
ವಿಮಾನ ವಿಳಂಬಕ್ಕೆ ಪ್ರಯಾಣಿಕರಿಗೆ ಪರಿಹಾರ   

ನವದೆಹಲಿ: ವಿಮಾನ ಪ್ರಯಾಣ ನಾಲ್ಕು ಗಂಟೆಗಿಂತ ಹೆಚ್ಚು ವಿಳಂಬವಾದರೆ ವಿಮಾನಯಾನ ಸಂಸ್ಥೆಗಳು ಪ್ರಯಾಣಿಕರಿಗೆ ಟಿಕೆಟ್‌ ಶುಲ್ಕದ ಪೂರ್ತಿ ಹಣ ವಾಪಸ್‌ ಕೊಡಬೇಕು, ಟಿಕೆಟ್‌ ಕಾಯ್ದಿರಿಸಿದ 24 ಗಂಟೆಗಳ ಒಳಗಾಗಿ ಪ್ರಯಾಣಿಕರು ಟಿಕೆಟ್‌ ರದ್ದುಗೊಳಿಸಿದರೆ ರದ್ದತಿ ಶುಲ್ಕ ವಿಧಿಸುವಂತಿಲ್ಲ...

–ವಿಮಾನ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ಮಂಗಳವಾರ ಪ್ರಕಟಿಸಿರುವ ಕರಡು ನಿಯಮಗಳಲ್ಲಿನ ಪ್ರಮುಖ ಅಂಶಗಳಿವು.

‘30 ದಿನಗಳ ಕಾಲ ಈ ಕರಡು ನಿಯಮಗಳ ಬಗ್ಗೆ ಪರಿಶೀಲನೆ ಅಥವಾ ಜನರ ಅಭಿಪ್ರಾಯ ಪಡೆಯುವ ಪ್ರಕ್ರಿಯೆ ನಡೆಯಲಿದೆ. ಎರಡು ತಿಂಗಳುಗಳಲ್ಲಿ ಪರಿಷ್ಕೃತ ನಿಯಮಗಳನ್ನು ಪ್ರಕಟಿಸುವ ಸಾಧ್ಯತೆ ಇದೆ. ಈ ವಿಚಾರಕ್ಕೆ ಸಂಬಂಧಿಸಿದ ಎಲ್ಲರೊಂದಿಗೂ ನಾವು ಸಮಾಲೋಚನೆ ನಡೆಸಲಿದ್ದೇವೆ’ ಎಂದು ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ADVERTISEMENT

ಕರಡಿನಲ್ಲೇನಿದೆ?

* ಹಾರಾಟ ವಿಳಂಬವಾಗಿ ಮಧ್ಯರಾತ್ರಿ 12ಗಂಟೆಯ ನಂತರ ವಿಮಾನ ಪ್ರಯಾಣ ಆರಂಭಿಸಿದರೆ ಪ್ರಯಾಣಿಕರಿಗೆ ಟಿಕೆಟ್‌ ಹಣ ವಾಪಸ್‌ ನೀಡುವುದರ ಜೊತೆಗೆ, ಹೋಟೆಲ್‌ನಲ್ಲಿ ಉಳಿದುಕೊಳ್ಳಲು ಉಚಿತ ವ್ಯವಸ್ಥೆ ಮಾಡಬೇಕು.

* ಹಾರಾಟ ತಡವಾಗಿದ್ದರಿಂದ ಪ್ರಯಾಣಿಕನಿಗೆ ಮತ್ತೊಂದು ವಿಮಾನ ನಿಲ್ದಾಣದಲ್ಲಿ ಸಂಪರ್ಕ ವಿಮಾನ (ಕನೆಕ್ಟಿಂಗ್‌ ಫ್ಲೈಟ್‌) ತಪ್ಪಿದರೆ ಪ್ರಯಾಣಿಕರಿಗೆ ಈ ಕೆಳಗಿನಂತೆ ಪರಿಹಾರ ನೀಡಬೇಕು

(i)  ಸಂಪರ್ಕ ವಿಮಾನಕ್ಕಾಗಿ 3 ಗಂಟೆವರೆಗೆ ಕಾಯಬೇಕಾಗಿ ಬಂದರೆ ₹5,000

(ii) 4ರಿಂದ 12 ಗಂಟೆ ವಿಳಂಬವಾದರೆ ₹ 10 ಸಾವಿರ

(iii) 12 ಗಂಟೆಗಳಿಗೂ ಹೆಚ್ಚು ವಿಳಂಬವಾದರೆ ₹20 ಸಾವಿರ

* ಟಾರ್ಮ್ಯಾಕ್‌ನಲ್ಲಿ (ವಿಮಾನ ನಿಲ್ಲುವ ಜಾಗ) ವಿಮಾನವು 60 ನಿಮಿಷಗಳಿಗಿಂತ ಹೆಚ್ಚು ಹೊತ್ತು ನಿಂತರೆ ಪ್ರಯಾಣಿಕರಿಗೆ  ಉಚಿತವಾಗಿ ತಿಂಡಿ ಮತ್ತು ಪಾನೀಯ ನೀಡಬೇಕು. ಹಾರಾಟ ‌ಎರಡು ಗಂಟೆ ತಡವಾದರೆ ಪ್ರಯಾಣಿಕರನ್ನು ವಿಮಾನದಿಂದ ಇಳಿಸಬೇಕು.

* ವಿಮಾನ ಹಾರಾಟ ರದ್ದುಗೊಳಿಸಿರುವ ಮಾಹಿತಿಯ‌ನ್ನು ವಿಮಾನಯಾನ ಸಂಸ್ಥೆಗಳು ಎರಡು ವಾರ ಮೊದಲು ಮತ್ತು ಹಾರಾಟಕ್ಕೆ 24 ಗಂಟೆ ಇರುವವರೆಗಿನ ಅವಧಿಯಲ್ಲಿ ನೀಡದೇ ಇದ್ದರೆ ರದ್ದುಗೊಂಡಿರುವ ವಿಮಾನದ ವೇಳಾಪಟ್ಟಿಗೆ ಅನುಗುಣವಾಗಿ ಎರಡು ಗಂಟೆ ಆಸುಪಾಸಿನಲ್ಲಿ ಪ್ರಯಾಣಿಕರಿಗೆ ಒಪ್ಪಿಗೆಯಾಗುವಂತೆ ಪ್ರತ್ಯೇಕ ವಿಮಾನ ವ್ಯವಸ್ಥೆ ಮಾಡಬೇಕು ಇಲ್ಲವೇ ಟಿಕೆಟ್‌ ಹಣ ವಾಪಸ್‌ ಮಾಡಬೇಕು. ಒಂದು ವೇಳೆ, ಹಾರಾಟಕ್ಕೆ 24 ಗಂಟೆ ಇರುವವರೆಗೂ ಮಾಹಿತಿ ನೀಡದಿದ್ದರೆ ಟಿಕೆಟ್‌ನ ಸಂಪೂರ್ಣ ಹಣ ಹಿಂತಿರುಗಿಸಬೇಕು.

* ಮಿತಿಗಿಂತ ಹೆಚ್ಚು ಟಿಕೆಟ್‌ ಬುಕಿಂಗ್‌ ಮಾಡಿದ್ದ ಕಾರಣಕ್ಕೆ ವಿಮಾನ ಹತ್ತಲು (ಬೋರ್ಡಿಂಗ್‌) ಅವಕಾಶ ನೀಡದಿದ್ದರೆ ಟಿಕೆಟ್‌ ದರಕ್ಕೆ ಅನುಗುಣವಾಗಿ ಕನಿಷ್ಠ ₹5,000 ಅಥವಾ ಅದಕ್ಕಿಂತ ಹೆಚ್ಚು ಪರಿಹಾರ ಕೊಡಬೇಕು.

* ಲಗೇಜು ನಾಪತ್ತೆ, ವಿಳಂಬ ಮತ್ತು ಹಾನಿಯಾದರೆ ಪ್ರತಿ ಕೆ.ಜಿ ಲಗೇಜ್‌ಗೆ ಕ್ರಮವಾಗಿ ₹3,000, ₹1,000 ಪರಿಹಾರ ನೀಡಬೇಕು.

* ಟಿಕೆಟ್‌ನಲ್ಲಿ ತಪ್ಪಾಗಿ ನಮೂದಾಗಿರುವ ಹೆಸರಿನಲ್ಲಿ ಕೇವಲ ಮೂರು ಅಕ್ಷರಗಳನ್ನು ತಿದ್ದಬೇಕಾದಲ್ಲಿ ಮತ್ತು ಆಗಿರುವ ತಪ್ಪನ್ನು ಪ್ರಯಾಣಿಕರು ಟಿಕೆಟ್‌ ಕಾಯ್ದಿರಿಸಿದ 24 ಗಂಟೆಗಳ ಒಳಗಾಗಿ ವಿಮಾನಯಾನ ಸಂಸ್ಥೆಯ ಗಮನಕ್ಕೆ ತಂದಲ್ಲಿ ಯಾವುದೇ ಹೆಚ್ಚುವರಿ ಶುಲ್ಕವನ್ನು ಹಾಕುವಂತಿಲ್ಲ.

*  ಎಲ್ಲ ವಿಮಾನಗಳಲ್ಲಿ ಅಂಗವಿಕಲರಿಗಾಗಿ ಪ್ರತ್ಯೇಕ ಆಸನ ವ್ಯವಸ್ಥೆ ಕಲ್ಪಿಸಬೇಕು.

* ಎಲ್ಲ ವಿಮಾನ ನಿಲ್ದಾಣಗಳು ವೈದ್ಯರು, ಆಂಬುಲೈನ್ಸ್‌, ಕನಿಷ್ಠ ವೈದ್ಯಕೀಯ ಸೌಲಭ್ಯ ನೀಡುವ ತರಬೇತಿ ಪಡೆದ ವೈದ್ಯಕೀಯ ಸಿಬ್ಬಂದಿಯನ್ನು ಕಡ್ಡಾಯವಾಗಿ ಹೊಂದಿರಬೇಕು.

* ವಿಮಾನ ನಿಲ್ದಾಣಗಳಲ್ಲಿ ನಿರ್ಗಮನ ಮತ್ತು ಆಗಮನ ಟರ್ಮಿನಲ್‌ಗಳ ಹೊರಗಡೆ ಶೌಚಾಲಯ ವ್ಯವಸ್ಥೆಯನ್ನು ಕಡ್ಡಾಯವಾಗಿ ಕಲ್ಪಿಸಬೇಕು.

* ಪ್ರಯಾಣಿಕರಿಗೆ ಉಚಿತವಾಗಿ 30 ನಿಮಿಷಗಳ ಕಾಲ ವೈ–ಫೈ ಸೌಕರ್ಯವನ್ನು ಎಲ್ಲ ವಿಮಾನ ನಿಲ್ದಾಣಗಳು ಒದಗಿಸಬೇಕು.

24 ಗಂಟೆವರೆಗೆ ಟಿಕೆಟ್‌ ರದ್ದು ಶುಲ್ಕ ಇಲ್ಲ

ವಿಮಾನಯಾನ ಸಂಸ್ಥೆಗಳು ಯಾವುದೇ ಸಂದರ್ಭದಲ್ಲೂ ಮೂಲಪ್ರಯಾಣ ದರ ಮತ್ತು ಇಂಧನ ಸರ್‌ಚಾರ್ಜ್‌ನ ಒಟ್ಟು ಮೊತ್ತಕ್ಕಿಂತ ಹೆಚ್ಚಿನ ಹಣವನ್ನು ಟಿಕೆಟ್‌ ರದ್ದುಗೊಳಿಸಿರುವ ಶುಲ್ಕ ಎಂದು ಕಡಿತಗೊಳಿಸುವಂತಿಲ್ಲ ಎಂದು ಕರಡು ನಿಯಮಗಳಲ್ಲಿ ಹೇಳಲಾಗಿದೆ.

ಟಿಕೆಟ್‌ ಕಾಯ್ದಿರಿಸಿದ 24 ಗಂಟೆಗಳವರೆಗೆ ಯಾವುದೇ ಶುಲ್ಕವಿಲ್ಲದೇ ಟಿಕೆಟ್‌ ರದ್ದುಪಡಿಸುವ ಅವಕಾಶವನ್ನೂ ಪ್ರಯಾಣಿಕರಿಗೆ ನೀಡಬೇಕು ಎಂದು ಅದು ಹೇಳಿದೆ.

ಟಿಕೆಟ್‌ ರದ್ದುಗೊಳಿಸಿದರೆ ಪ್ರಯಾಣಿಕರಿಗೆ ವಿಧಿಸಲಾಗುವ ಶುಲ್ಕದ ವಿವರಗಳನ್ನು 12  ಫಾಂಟ್ ಗಾತ್ರದ ಅಕ್ಷರದಲ್ಲಿ ಟಿಕೆಟ್‌ನಲ್ಲಿ ಮುದ್ರಿಸಬೇಕು ಎಂದೂ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.