ನವದೆಹಲಿ: ತೃಣಮೂಲ ಕಾಂಗ್ರೆಸ್ ಸಂಸದ ಸುದಿಪ್ ಬಂಧೋಪಾಧ್ಯಾಯ ಅವರು ತಮ್ಮದೇ ಪಕ್ಷದ ಸಚಿವ ದಿನೇಶ್ ತ್ರಿವೇದಿ ಚೊಚ್ಚಲ ಬಜೆಟ್ ಭಾಷಣ ಮಾಡುತ್ತಿದ್ದಾಗ ಪಕ್ಕದಲ್ಲೇ ಇದ್ದರೂ ಮುಖದಲ್ಲಿ ಮತ್ತು ಹಾವಭಾವದಲ್ಲಿ ಸ್ವಲ್ಪವೂ ವಿರೋಧ ವ್ಯಕ್ತಪಡಿಸಿಲ್ಲ.
ಬಜೆಟ್ ಭಾಷಣ ಮುಗಿಯುವವರೆಗೂ ಸುಮ್ಮನೆ ಕುಳಿತಿದ್ದ ಅವರು ನಂತರ ಹೊರಗೆ ಬಂದು ತಮ್ಮದೆ ಪಕ್ಷದ ಸಚಿವರು ಮಂಡಿಸಿದ ಬಜೆಟ್‌ಗೆ ವಿರೋಧ ವ್ಯಕ್ತಪಡಿಸುವ ಕಿಂಚಿತ್ ಸುಳಿವನ್ನೂ ನೀಡಿಲ್ಲ. ತ್ರಿವೇದಿ ತಮ್ಮ ಭಾಷಣದ ಆರಂಭದಲ್ಲೇ, `ತಮ್ಮ ಪಕ್ಷದ ಅಧ್ಯಕ್ಷೆ ಮಮತಾ ಬ್ಯಾನರ್ಜಿ ಮತ್ತು ಪಕ್ಷದ ಸಂಸದರ ನೆರವನಿಂದ ಈ ಬಜೆಟ್ ಮಂಡನೆ ಸಾಧ್ಯವಾಗಿದೆ~ ಎಂದು ಹೇಳಿದ್ದರು.
`ಪ್ರಧಾನಿ ಮನಮೋಹನ್ ಸಿಂಗ್, ಹಣಕಾಸು ಸಚಿವ ಪ್ರಣವ್ ಮುಖರ್ಜಿ ಮತ್ತು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಮಾರ್ಗದರ್ಶನದಿಂದ ಈ ಬಜೆಟ್ ಸಿದ್ಧಪಡಿಸಿದ್ದೇನೆ~ ಎಂದಿದ್ದರು.
ರೈಲ್ವೆ ಅಭಿವೃದ್ಧಿಗೆ ಶ್ರಮಿಸಿದ ಹಿಂದಿನ ಸಚಿವರ ಹೆಸರು ಹೇಳುವಾಗ ಮಮತಾ ಬ್ಯಾನರ್ಜಿ ಸೇರಿದಂತೆ ಅನೇಕರ ಹೆಸರನ್ನು ಪ್ರಸ್ತಾಪಿಸಿದ್ದರು. ಆದರೆ ಅವರು ಲಾಲೂ ಪ್ರಸಾದ್ ಮತ್ತು ರಾಮವಿಲಾಸ್ ಪಾಸ್ವಾನ್ ಅವರ ಹೆಸರನ್ನು ಪ್ರಸ್ತಾಪಿಸಲು ಮರೆತಿದ್ದರು. ನಂತರ ನೆನಪು ಮಾಡಿಕೊಂಡು ಈ ಇಬ್ಬರ ಹೆಸರನ್ನು ಹೇಳಿ ಕೃತಜ್ಞತೆ ಸಲ್ಲಿಸಿದರು.
ಬಜೆಟ್ ಓದುವಾಗ ಯಾರೂ ಅಡ್ಡಿಪಡಿಸಿಲ್ಲ. ಲಾಲು ಎರಡು ಬಾರಿ ಮಾತನಾಡಲು ಪ್ರಯತ್ನಿಸಿದರು. ಆದರೆ ಪ್ರತಿಕ್ರಿಯೆ ಸಿಗದ ಕಾರಣ ಸುಮ್ಮನಾದರು. ಇದೇ ಸಂದರ್ಭದಲ್ಲಿ ಅವರು ರೈಲ್ವೆ ನೌಕರರಿಗೆ ಕೃತಜ್ಞತೆ ಹೇಳಲು ಮರೆಯಲಿಲ್ಲ. `ನಿಮ್ಮ ಶ್ರದ್ಧೆಯ ದುಡುಮೆಯಿಂದ ಯಶಸ್ಸು ಸಾಧ್ಯವಾಗಿದೆ~ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.