ನವದೆಹಲಿ: ನ್ಯಾಯಮೂರ್ತಿಗಳ ನೇಮಕದಲ್ಲಿ ಆಗುತ್ತಿರುವ ವಿಳಂಬಕ್ಕೆ ಅತೃಪ್ತಿ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್, ಮುಖ್ಯ ನ್ಯಾಯಮೂರ್ತಿ ನೇತೃತ್ವದ ಕೊಲಿಜಿಯಂನ ಶಿಫಾರಸುಗಳ ಬಗ್ಗೆ ಸರ್ಕಾರ ‘ಅಪನಂಬಿಕೆ’ ಹೊಂದಿರುವುದು ದೇಶಕ್ಕೆ ಒಳಿತಲ್ಲ ಎಂದಿದೆ.
‘ಇಂತಹ ಬಿಕ್ಕಟ್ಟಿನ ಸ್ಥಿತಿ ಒಳ್ಳೆಯದಲ್ಲ’ ಎಂದು ಮುಖ್ಯ ನ್ಯಾಯಮೂರ್ತಿ ಟಿ.ಎಸ್. ಠಾಕೂರ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ಹೇಳಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಇದಕ್ಕೆ ಕಾರಣರಾದವರ ಮೇಲೆ ‘ಹೊಣೆಗಾರಿಕೆ’ ಹೊರಿಸುವುದಕ್ಕೆ ಕೋರ್ಟ್ ಹಿಂಜರಿಯದು ಎಂದೂ ಪೀಠ ಹೇಳಿತು.
‘ಸುಮಾರು 40 ಲಕ್ಷ ಪ್ರಕರಣಗಳು ವಿಚಾರಣೆಗೆ ಬಾಕಿ ಇವೆ. ಹಲವು ಅಪರಾಧ ಪ್ರಕರಣಗಳ ಮೇಲ್ಮನವಿಗಳ ವಿಚಾರಣೆ ನಡೆಯಬೇಕಿದೆ. ಇಂತಹ ಅಪನಂಬಿಕೆ ಯಾಕೆ? ನಾವು ಕಳುಹಿಸಿರುವ ಪ್ರಸ್ತಾವಗಳಲ್ಲಿ ಇರುವ ಸಮಸ್ಯೆಯಾದರು ಏನು? ಹೈಕೋರ್ಟ್‌ಗಳಿಗೆ ನ್ಯಾಯಮೂರ್ತಿಗಳನ್ನು ನೇಮಕ ಮಾಡದಿರುವ ಮೂಲಕ ನ್ಯಾಯಾಂಗ ವ್ಯವಸ್ಥೆಯನ್ನು ಸ್ಥಗಿತಗೊಳಿಸಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ’ ಎಂದು ಮುಖ್ಯ ನ್ಯಾಯಮೂರ್ತಿ ಆಕ್ರೋಶದಿಂದ ಹೇಳಿದರು.
‘ನೇಮಕಾತಿಗಾಗಿ 75 ಹೆಸರು ಶಿಫಾರಸು ಮಾಡಲಾಗಿದೆ. ಆದರೆ ಅದಕ್ಕೆ ಕೇಂದ್ರದಿಂದ ಪ್ರತಿಕ್ರಿಯೆಯೇ ಇಲ್ಲ. ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ನೇಮಕವೂ ಬಾಕಿ ಉಳಿದಿದೆ. ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ವರ್ಗಾವಣೆಯ ಅಧಿಸೂಚನೆಯನ್ನೂ ಹೊರಡಿಸಲಾಗಿಲ್ಲ. ಎಂಟು ತಿಂಗಳ ಹಿಂದಿನ ಶಿಫಾರಸು ಬಗ್ಗೆ ಕೂಡ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಹೀಗೆಲ್ಲ ನಡೆಯಬಾರದು’ ಎಂದು ನ್ಯಾಯಮೂರ್ತಿಗಳಾದ ಎ.ಎಂ. ಖಾನವಿಲ್ಕರ್ ಮತ್ತು ಡಿ. ವೈ. ಚಂದ್ರಚೂಡ ಅವರಿದ್ದ ಪೀಠ ಅಸಮಾಧಾನ ವ್ಯಕ್ತಪಡಿಸಿದೆ.
ಈ ಬಗ್ಗೆ ಸದ್ಯಕ್ಕೆ ನೋಟಿಸ್ ನೀಡದಂತೆ ಅಟಾರ್ನಿ ಜನರಲ್ ಮುಕುಲ್ ರೋಹಟಗಿ ವಿನಂತಿಸಿಕೊಂಡರು. ‘ವಿಷಯದ ಗಾಂಭೀರ್ಯ ನನಗೆ ಅರ್ಥವಾಗಿದೆ. ನಾನು ಇದನ್ನು ಅತ್ಯುನ್ನತ ಹಂತದಲ್ಲಿ ಪ್ರಸ್ತಾಪಿಸುತ್ತೇನೆ’ ಎಂದು ಅವರು ಹೇಳಿದರು.
‘ಶಿಫಾರಸು ಮಾಡಲಾದ ಯಾವುದೇ ಹೆಸರಿಗೆ ಆಕ್ಷೇಪ ಇದ್ದರೆ ಅದನ್ನು ತಿಳಿಸಿ. ಆಕ್ಷೇಪಗಳಿಗೆ ಸಾಕಷ್ಟು ಆಧಾರ ಇದ್ದರೆ ನೀವು ಕಡತವನ್ನು ವಾಪಸ್ ಕಳುಹಿಸಬಹುದು. ಆದರೆ ಇಂತಹ ಬಿಕ್ಕಟ್ಟು ಸೃಷ್ಟಿ ಒಳ್ಳೆಯದಲ್ಲ’ ಎಂದೂ ಪೀಠ ಹೇಳಿತು.
ವಿಳಂಬಕ್ಕೆ ಕಾರಣ: ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ಗಳಿಗೆ ನ್ಯಾಯಮೂರ್ತಿಗಳನ್ನು ನೇಮಕ ಮಾಡುವ ಕೊಲಿಜಿಯಂ ವ್ಯವಸ್ಥೆಯ ಬದಲಿಗೆ ಸರ್ಕಾರ ರಚಿಸಿದ್ದ ನ್ಯಾಯಾಂಗ ನೇಮಕಾತಿ ಆಯೋಗ ಕಾಯ್ದೆಯನ್ನು ಕಳೆದ ಅಕ್ಟೋಬರ್‌ನಲ್ಲಿ ಸುಪ್ರೀಂ ಕೋರ್ಟ್ ರದ್ದುಪಡಿಸಿತು. ಹಾಗಾಗಿ ಹಳೆಯ ಕೊಲಿಜಿಯಂ ವ್ಯವಸ್ಥೆಯೇ ಮತ್ತೆ ಜಾರಿಗೆ ಬಂತು.
ಆದರೆ ಈಗ ನ್ಯಾಯಮೂರ್ತಿಗಳ ನೇಮಕದ ಕೊಲಿಜಿಯಂ ಶಿಫಾರಸುಗಳಿಗೆ ಅನುಮೋದನೆ ನೀಡಲು ಸರ್ಕಾರ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದೆ.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಜತೆ ಸಮಾಲೋಚನೆ ನಡೆಸಿ ನ್ಯಾಯಮೂರ್ತಿಗಳ ನೇಮಕದ ನಿಯಮಗಳು ಮತ್ತು ಮಾರ್ಗದರ್ಶಿ ಸೂತ್ರಗಳನ್ನೂ ಸರ್ಕಾರ ಸಿದ್ಧಪಡಿಸಬೇಕಿದೆ. ಅದೂ ವಿಳಂಬವಾಗುತ್ತಿದೆ.
ನ್ಯಾಯಮೂರ್ತಿಗಳ ವಿರುದ್ಧದ ದೂರು ವಿಚಾರಣೆಗೆ ಮಸೂದೆ ಇಲ್ಲ
ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ನ್ಯಾಯಮೂರ್ತಿಗಳ ವಿರುದ್ಧದ ದೂರುಗಳ ವಿಚಾರಣೆಗೆ ವ್ಯವಸ್ಥೆಯೊಂದನ್ನು ಸ್ಥಾಪಿಸಲು ಮಸೂದೆ ರೂಪಿಸುವ ಉದ್ದೇಶ ಇಲ್ಲ ಎಂದು ರಾಜ್ಯಸಭೆಗೆ ಸರ್ಕಾರ ತಿಳಿಸಿದೆ.
ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ 2012ರ ಮಾರ್ಚ್‌ನಲ್ಲಿ ನ್ಯಾಯಾಂಗದ ಗುಣಮಟ್ಟ ಮತ್ತು ವಿಶ್ವಾಸಾರ್ಹತೆ ಮಸೂದೆಯನ್ನು ಲೋಕಸಭೆಯಲ್ಲಿ ಅಂಗೀಕರಿಸಲಾಗಿತ್ತು. ಆದರೆ ರಾಜ್ಯಸಭೆಯಲ್ಲಿ ಅದನ್ನು ಚರ್ಚೆಗೆ ಎತ್ತಿಕೊಳ್ಳಲು ಸಾಧ್ಯವಾಗಿರಲಿಲ್ಲ. 2014ರಲ್ಲಿ 15ನೇ ಲೋಕಸಭೆ ವಿಸರ್ಜನೆ ಆಗುವುದರೊಂದಿಗೆ ಮಸೂದೆ ಮೌಲ್ಯ ಕಳೆದುಕೊಂಡಿತು.
ಈ ಮಸೂದೆಯನ್ನು ಮತ್ತೆ ತರುವ ಬಗ್ಗೆ ಯಾವುದೇ ನಿರ್ಧಾರ ಕೈಗೊಳ್ಳಲಾಗಿಲ್ಲ ಎಂದು ಕಾನೂನು ಖಾತೆಯ ರಾಜ್ಯ ಸಚಿವ ಪಿ.ಪಿ. ಚೌಧರಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.