ನವದೆಹಲಿ (ಪಿಟಿಐ): ಎಲ್‌ಟಿಟಿಇ ವಿರುದ್ಧದ ನಿರ್ಣಾಯಕ ಯುದ್ಧ ನಡೆದಾಗ ತಮಿಳರ ವಿರುದ್ಧ ಶ್ರೀಲಂಕಾ ಸೇನೆ ನಡೆಸಿದ ಅಪರಾಧಗಳನ್ನು ಖಂಡಿಸಿ ಆ ಸರ್ಕಾರದ ವಿರುದ್ಧ ವಿಶ್ವಸಂಸ್ಥೆ ಕೈಗೊಂಡಿರುವ ಗೊತ್ತುವಳಿಯನ್ನು ಬೆಂಬಲಿಸದಿರುವಂತೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್) ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.
ಇದೊಂದು ಅಮೆರಿಕ ಪ್ರಾಯೋಜಿತ ಗೊತ್ತುವಳಿಯಾಗಿದೆ. ಮಾತ್ರವಲ್ಲ, ಪಾಶ್ಚಿಮಾತ್ಯರು ಪ್ರಜಾಪ್ರಭುತ್ವ ಸರ್ಕಾರಗಳ ಮೇಲೆ ತಮ್ಮ ಅಭಿಪ್ರಾಯವನ್ನು ಹೇರಲು ನಡೆಸುತ್ತಿರುವ ಹುನ್ನಾರ ಎಂದು ಆರ್‌ಎಸ್‌ಎಸ್ ಬಣ್ಣಿಸಿದೆ.
`ಗೊತ್ತುವಳಿ ಕುರಿತು ಭಾರತ ಸ್ಪಷ್ಟ ನಿರ್ಧಾರ ಪ್ರಕಟಿಸದೇ ತಟಸ್ಥ ನೀತಿ ಅನುಸರಿಸಿದರೆ ಅಮೆರಿಕ ಅಥವಾ ಐರೋಪ್ಯ ರಾಷ್ಟ್ರಗಳು ನಮ್ಮಂಥ ಪ್ರಜಾಪ್ರಭುತ್ವ ರಾಷ್ಟ್ರಗಳ ಮೇಲೆ ತಮ್ಮ ಅಭಿಪ್ರಾಯವನ್ನು ಬಲವಂತವಾಗಿ ಹೇರುತ್ತವೆ~ ಎಂದು ತನ್ನ ಮುಖವಾಣಿ `ಆರ್ಗನೈಸರ್~ನ ಸಂಪಾದಕೀಯದಲ್ಲಿ ಪ್ರಕಟಿಸಿದೆ.
ಇದೇ ಸಂಪಾದಕೀಯದಲ್ಲಿ `ಶ್ರೀಲಂಕಾ ಸರ್ಕಾರದ ಮಾನವ ಹಕ್ಕುಗಳ ಉಲ್ಲಂಘನೆ ಕುರಿತು ಆರೋಪಿಸಲಾಗಿದ್ದು, ಯುದ್ಧದಲ್ಲಿ ಎಲ್‌ಟಿಟಿಇ ಉಗ್ರರು ನಿಶಸ್ತ್ರರಾಗಿ ಹೋರಾಟಕ್ಕಿಳಿದಿರಲಿಲ್ಲ. ಅವರು ಅಹಿಂಸಾತ್ಮಕ ಹೋರಾಟ ನಡೆಸುತ್ತಿರಲಿಲ್ಲ. ಬದಲಾಗಿ ಅವರ ಬಳಿ ಅತ್ಯಾಧುನಿಕ ಗನ್‌ಗಳಿದ್ದವು, ರಾಕೆಟ್ ಲಾಂಚರ್‌ಗಳು ಹಾಗೂ ಟ್ಯಾಂಕರ್‌ಗಳಿದ್ದವು~ ಎಂದು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.