ADVERTISEMENT

ವಿಶ್ವಸಂಸ್ಥೆ ಪರಿಸರ ಪ್ರಶಸ್ತಿಗೆ ಭಾರತೀಯ ವಿಜ್ಞಾನಿ ಆಯ್ಕೆ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2013, 19:59 IST
Last Updated 17 ಸೆಪ್ಟೆಂಬರ್ 2013, 19:59 IST

ಕೋಲ್ಕತ್ತ (ಪಿಟಿಐ): ವಾತಾವರಣಕ್ಕೆ ಬಿಡುಗಡೆಯಾಗುವ ‘ಕಪ್ಪು ಇಂಗಾಲ’­ವನ್ನು ತಗ್ಗಿಸುವ ಕುರಿತು ನಡೆಸಿದ ಸಂಶೋ­ಧನೆ­ಗಾಗಿ ಭಾರತೀಯ ಮೂಲದ ವಿಜ್ಞಾನಿ ವೀರಭದ್ರನ್ ­­ರಾಮ­ನಾಥನ್ ವಿಶ್ವಸಂಸ್ಥೆಯ ಪ್ರತಿಷ್ಠಿತ ‘ಚಾಂಪಿಯನ್ಸ್ ಆಫ್ ದಿ ಅರ್ಥ್ ಅವಾರ್ಡ್’ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

‘ಅಮೆರಿಕದ ಕ್ಯಾಲಿ­ಫೋರ್ನಿ­ಯಾದಲ್ಲಿರುವ ‘ಸ್ಕ್ರೀಪ್ಸ್ ಸಾಗರವಿಜ್ಞಾನ (ಒಷನಾಗ್ರಫಿ) ಸಂಸ್ಥೆ’ಯ ರಾಮ­ನಾಥನ್ ಅವರನ್ನು ಈ  ಬಾರಿಯ ವಿಶ್ವಸಂಸ್ಥೆಯ ಅತ್ಯುನ್ನತ ಪರಿಸರ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ’ ಎಂದು ‘ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ’ (ಯುಎನ್ಇಪಿ) ವಿಭಾಗ ಹೇಳಿಕೆಯಲ್ಲಿ ತಿಳಿಸಿದೆ. ಪ್ರಶಸ್ತಿಗೆ ತಮ್ಮನ್ನು ಆಯ್ಕೆ ಮಾಡಿರುವುದರ ಕುರಿತು ಪ್ರತಿಕ್ರಿಯಿ­ಸಿರುವ ರಾಮನಾಥನ್, ‘ಪರಿಸರದ ಮೇಲೆ ಪ್ರತಿಕೂಲ ಪರಿಣಾಮ­ಗಳನ್ನುಂಟು ಮಾಡುವ ಅಂಶಗಳನ್ನು ವಿವರಿಸುವ ವಿಜ್ಞಾನ ಮತ್ತು ಸಂಶೋಧನೆಯ ನಿರ್ಣಾಯಕ ಪಾತ್ರವನ್ನು ಗುರುತಿಸಿ, ನನ್ನನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಹೆಚ್ಚಿನ ಗೌರವ ತಂದಿದೆ’ ಎಂದಿದ್ದಾರೆ.

ರಾಮನಾಥನ್ ನೇತೃತ್ವದ ಸಂಶೋಧನಾ ತಂಡ ಮೊದಲ ಬಾರಿಗೆ 1997­ರಲ್ಲಿ ಅತಿಯಾದ ವಾಯು­ಮಾಲಿನ್ಯದಿಂದಾಗಿ ಏಷ್ಯಾದ ವಾತಾ­ವರಣದ ಮೇಲೆ ಉಂಟಾಗುತ್ತಿರುವ ಪ್ರತಿಕೂಲ ಪರಿಣಾಮವನ್ನು  ಪತ್ತೆ ಹಚ್ಚಿತ್ತು. ವಿಶ್ವದ ಗಮನ ಸೆಳೆದಿದ್ದ ರಾಮನಾಥನ್ ನೇತೃತ್ವದ ಈ ಸಂಶೋಧನೆ, ‘ವಾಯುಮಂಡಲದ ಕಂದು ಮೋಡ’ (ಎಬಿಸಿ– ಆಟ್ಮಸ್ಫೆರಿಕ್ ಬ್ರೌನ್ ಕ್ಲೌಡ್) ಎಂದೇ ಖ್ಯಾತಿಯಾಗಿತ್ತು.

ವಾತಾವರಣಕ್ಕೆ ಬಿಡುಗಡೆಯಾಗುವ ‘ಕಪ್ಪು ಇಂಗಾಲ’ವನ್ನು ತಗ್ಗಿಸಲು 16 ಕಾರ್ಯವಿಧಾನಗಳನ್ನು ಸೂಚಿಸಿದ್ದ ರಾಮನಾಥನ್, ‘ಆ ಮೂಲಕ ಉಸಿರಾಟದ ತೊಂದರೆಯಿಂದಾಗಿ ಪ್ರತಿ ವರ್ಷ ವಿಶ್ವದಾದ್ಯಂತ ಅಸುನೀಗುವ 20.5 ಲಕ್ಷ ಜನರನ್ನು ಉಳಿಸುವ ಜತೆಗೆ, ಯಥೇಚ್ಚ ಪ್ರಮಾಣದ ಬೆಳೆ ನಷ್ಟವನ್ನು ತಡೆಯಬಹುದು’ ಎಂದು ತಮ್ಮ ಸಂಶೋಧನೆಯಲ್ಲಿ ತಿಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT