ಪಟ್ನಾ (ಪಿಟಿಐ): ಬಿಹಾರದಲ್ಲಿ ಮೂರು ದಿನಗಳ ಹಿಂದೆಯಷ್ಟೇ ಅಸ್ತಿತ್ವಕ್ಕೆ ಬಂದ ಮುಖ್ಯಮಂತ್ರಿ ಜೀತನ್ ರಾಂ ಮಾಂಝಿ ಅವರ ನೇತೃತ್ವದ ಜೆಡಿಯು ಸರ್ಕಾರ ಶುಕ್ರವಾರ ಸದನದಲ್ಲಿ ವಿಶ್ವಾಸಮತ ಸಾಬೀತು ಪಡಿಸುವಲ್ಲಿ ಯಶಸ್ವಿಯಾಗಿದೆ.
237 ಸದಸ್ಯ ಬಲದ ಬಿಹಾರ ವಿಧಾನಸಭೆಯಲ್ಲಿ ನೂತನ ಮುಖ್ಯಮಂತ್ರಿ ಮಾಂಝಿ ಯಾಚಿಸಿದ ವಿಶ್ವಾಸಮತವನ್ನು ಧ್ವನಿಮತದಿಂದ ಅಂಗೀಕರಿಸಲಾಯಿತು. ಜೆಡಿಯುನ 117 ಶಾಸಕರು ಸೇರಿ ಒಟ್ಟು 145 ಸದಸ್ಯರು ವಿಶ್ವಾಸಮತದ ಪರ ಮತ ಚಲಾಯಿಸಿದರು. ಇದಕ್ಕೂ ಮೊದಲು ವಿರೋಧಪಕ್ಷವಾದ ಬಿಜೆಪಿಯ 88 ಶಾಸಕರು ಸದನದಿಂದ ಹೊರನಡೆದರು.
ಜೆಡಿಯು ಸರ್ಕಾರಕ್ಕೆ ಲಾಲು ಪ್ರಸಾದ್ ಬೇಷರತ್ ಬೆಂಬಲ ಘೋಷಿಸಿದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಜನತಾದಳದ (ಆರ್ಜೆಡಿ) 21 ಶಾಸಕರು ವಿಶ್ವಾಸ ಮತದ ಪರ ಮತ ಹಾಕಿದರು. ಕಾಂಗ್ರೆಸ್ನ ನಾಲ್ವರು, ಇಬ್ಬರು ಪಕ್ಷೇತರ ಶಾಸಕರು ಹಾಗೂ ಸಿಪಿಐನ ಒಬ್ಬ ಶಾಸಕ ಸರ್ಕಾರದ ಬೆಂಬಲಕ್ಕೆ ನಿಂತರು. ಇದಕ್ಕೂ ಮೊದಲು ಸದನದ ಕಲಾಪ ಆರಂಭವಾಗುತ್ತಿದ್ದಂತೆಯೇ ವಿರೋಧಪಕ್ಷದ ನಾಯಕ ನಂದಕಿಶೋರ್ ಯಾದವ್ ಹಾಗೂ ಇತರ ಸದಸ್ಯರ ಬಳಿ ತೆರಳಿದ ಮಾಂಝಿ ಹಸ್ತಲಾಘವ ನೀಡಿದರು.
ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಕಳಪೆ ಪ್ರದರ್ಶನದ ನೈತಿಕ ಹೊಣೆ ಹೊತ್ತು ನಿತೀಶ್ಕುಮಾರ್, ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ನಂತರ ಮಾಂಝಿ ಮಂಗಳವಾರ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಈ ಮೊದಲು ಅಂಚೆ ವಿಭಾಗದಲ್ಲಿ ಗುಮಾಸ್ತರಾಗಿ ಕೆಲಸ ನಿರ್ವಹಿಸಿದ್ದ ಅವರು, ದಲಿತರಲ್ಲಿಯೇ ಶೋಷಿತ ‘ಮಹಾದಲಿತ’ ಸಮುದಾಯದವರು.
‘ಬಿಜೆಪಿಯವರು ಹೇಡಿಗಳು’: ಸದನದಿಂದ ಹೊರನಡೆದ ಬಿಜೆಪಿಯ ನಡೆಯನ್ನು ‘ಪುಕ್ಕಲುತನ’ ಎಂದು ಜೆಡಿಯು ನಾಯಕ ನಿತೀಶ್ ಕುಮಾರ್ ಲೇವಡಿ ಮಾಡಿದ್ದಾರೆ. ಹೇಡಿಗಳಂತೆ ಅವರು ಸದನದಿಂದ ಬಿಜೆಪಿಯವರು ಹೊರ ನಡೆದರು ಎಂದು ಅವರು ಸಾಮಾಜಿಕ ಜಾಲತಾಣ ಫೇಸ್ಬುಕ್ನಲ್ಲಿ ಬಣ್ಣಿಸಿದ್ದಾರೆ. ಬಿಜೆಪಿಯವರ ಈ ನಡೆ ಪ್ರಜಾಪ್ರಭುತ್ವದಲ್ಲಿಯ ಕಪ್ಪುಚುಕ್ಕೆ. ಬಿಹಾರ ಇತಿಹಾಸಕ್ಕೆ ಮಸಿ ಬಳಿದಿದ್ದಾರೆ ಎಂದರು.
‘ಮತ್ತೆ ಒಂದಾದ ಜಾಲಿಗಿಡ, ಲಾಲು’: ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಜೆಡಿಯು, ಕಾಂಗ್ರೆಸ್ ಆರ್ಜೆಡಿ ಪಕ್ಷಗಳೂ ಜಾತ್ಯತೀತ ಶಕ್ತಿಯ ಹೆಸರಿನಲ್ಲಿ ಒಂದಾಗಿವೆ. ಇದು ಅನೈತಿಕ ಮೈತ್ರಿ ಎಂದು ವಿರೋಧಪಕ್ಷದ ನಾಯಕ ನಂದಕಿಶೋರ್ ಯಾದವ್ ಟೀಕಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.