ADVERTISEMENT

ವೇತನ ಮಂಡಳಿ ವರದಿ: ತಿರಸ್ಕಾರಕ್ಕೆ ಐಎನ್‌ಎಸ್ ಮನವಿ.

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2011, 19:30 IST
Last Updated 12 ಫೆಬ್ರುವರಿ 2011, 19:30 IST

ನವದೆಹಲಿ :  ಕಾರ್ಯನಿರತ ಪತ್ರಕರ್ತರು ಮತ್ತು ಇತರ ವೃತ್ತಪತ್ರಿಕಾ ಉದ್ಯೋಗಿಗಳ ರಾಷ್ಟ್ರೀಯ ವೇತನ ಮಂಡಳಿ ಅಧ್ಯಕ್ಷ ನ್ಯಾಯಮೂರ್ತಿ ಜಿ.ಆರ್.ಮಜಿಥಿಯಾ ಅವರು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿರುವ ವರದಿ ಏಕಮುಖ ಮತ್ತು ಅನೇಕ ಲೋಪಗಳಿಂದ ಕೂಡಿರುವ ಕಾರಣ ಅದನ್ನು ತಿರಸ್ಕರಿಸುವಂತೆ ಭಾರತೀಯ ವೃತ್ತಪತ್ರಿಕಾ ಸಂಘ (ಐಎನ್‌ಎಸ್)ದ ಅಧ್ಯಕ್ಷ ಕುಂದನ್ ಆರ್. ವ್ಯಾಸ್ ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮನವಿ ಮಾಡಿದ್ದಾರೆ.

ಈ ವರದಿ ಹಲವಾರು ಲೋಪದೋಷಗಳನ್ನು ಒಳಗೊಂಡಿದೆ. ಒಂದು ವೇಳೆ ಈ ವರದಿಯನ್ನು ಅಂಗೀಕರಿಸಿದರೆ ಹಲವಾರು ವೃತ್ತಪತ್ರಿಕಾ ಸಂಸ್ಥೆಗಳು ಸಂಕಷ್ಟಕ್ಕೆ ಸಿಲುಕಲಿವೆ. ವೇತನ ಮಂಡಳಿಯ ಸದಸ್ಯರೊಂದಿಗೆ ಸಮಾಲೋಚನೆ ನಡೆಸದೆಯೇ ರಾಷ್ಟ್ರೀಯ ವೇತನ ಮಂಡಳಿ ಅಧ್ಯಕ್ಷರು ವರದಿ ಸಲ್ಲಿಸಿದ್ದಾರೆ. ವೇತನ ಮಂಡಳಿ ರಚನೆ ಅಸಮರ್ಪಕವಾಗಿದ್ದು, ಹಲವು ನಿಯಮಗಳನ್ನು ಮತ್ತು ವಿಧಿವಿಧಾನಗಳನ್ನು ಉಲ್ಲಂಘಿಸಿ ವರದಿಯನ್ನು ಸಿದ್ಧಪಡಿಸಲಾಗಿದೆ.

ನಿಯಮಾವಳಿಗಳಿಗೆ ವಿರುದ್ಧವಾಗಿ ತನ್ನ ಪರಾಮರ್ಶನ ಮತ್ತು ವ್ಯಾಪ್ತಿಯ ಮಿತಿಗಳನ್ನು ಮೀರಿ  ಕೆಲವು ಸಲಹೆಗಳನ್ನು ನೀಡಿದೆ. ವಿವಿಧ ವರ್ಗದ ಪ್ರಕಾಶಕರ ವೇತನ ಪಾವತಿ ಸಾಮರ್ಥ್ಯದ ಬಗ್ಗೆ ಯಾವುದೇ ವ್ಯಾವಹಾರಿಕ ದಾಖಲೆಗಳನ್ನು ವೇತನ ಮಂಡಳಿ ವಿಶ್ಲೇಷಿಸಿಲ್ಲ. ವೃತ್ತಪತ್ರಿಕಾ ಸಂಸ್ಥೆಗಳ ಮೇಲೆ ಉಂಟಾಗುವ ಹೊರೆಯನ್ನೂ ತಿಳಿದುಕೊಳ್ಳುವ ಯಾವುದೇ ಪ್ರಯತ್ನ ನಡೆಸಿಲ್ಲ ಎಂದು ವ್ಯಾಸ್ ಹೇಳಿದ್ದಾರೆ. ಈ ಹಿಂದಿನ ವೇತನ ಮಂಡಳಿಗಳು ನೀಡಿದ್ದ ಪ್ರಾಯೋಗಿಕ ಪ್ರಸ್ತಾವನೆಗಳನ್ನು ಈ ಮಂಡಳಿ ಪ್ರಕಟಿಸುವ ಗೋಜಿಗೇ ಹೋಗಿಲ್ಲ ಎಂದು ಅವರು ತಿಳಿಸಿರುವುದಾಗಿ ಐಎನ್‌ಎಸ್‌ನ ಪ್ರಧಾನ ಕಾರ್ಯದರ್ಶಿ ವಿ.ಶಂಕರನ್ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.