ADVERTISEMENT

ವೈದ್ಯ ‍ಪಿ.ಜಿ. ರಾಜ್ಯದವರಿಗೆ ಮೀಸಲು: ‘ಸುಪ್ರೀಂ’ ತಡೆ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2018, 19:36 IST
Last Updated 27 ಮಾರ್ಚ್ 2018, 19:36 IST
ಸುಪ್ರೀಂ ಕೋರ್ಟ್‌ (ಸಂಗ್ರಹ ಚಿತ್ರ).
ಸುಪ್ರೀಂ ಕೋರ್ಟ್‌ (ಸಂಗ್ರಹ ಚಿತ್ರ).   

ನವದೆಹಲಿ: ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಲ್ಲಿ ಸರ್ಕಾರಿ ಕೋಟಾದ ಸೀಟುಗಳಿಗೆ ಕರ್ನಾಟಕದಲ್ಲಿ ಕನಿಷ್ಠ 10 ವರ್ಷ ಕಲಿತವರು ಅಥವಾ ಕರ್ನಾಟಕದಲ್ಲಿಯೇ ಹುಟ್ಟಿ ಬೆಳೆದವರಿಗೆ ಮಾತ್ರ ಅರ್ಹತೆ ಎಂಬ ನಿರ್ಧಾರಕ್ಕೆ ಸಂಬಂಧಿಸಿ ಮುಂದುವರಿಯುವಂತಿಲ್ಲ ಎಂದು ಕರ್ನಾಟಕ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಸೂಚಿಸಿದೆ.

ಕರ್ನಾಟಕ ಸರ್ಕಾರವು ಈ ಅಧಿಸೂಚನೆ ಬಗ್ಗೆ ಇದೇ 30ರಂದು ಅಥವಾ ಅದರ ಬಳಿಕ ಯಾವುದೇ ನಿರ್ಧಾರ ಕೈಗೊಳ್ಳುವಂತಿಲ್ಲ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ರಾಷ್ಟ್ರಮಟ್ಟದ ಕೋಟಾದಲ್ಲಿ ಪ್ರವೇಶ ಪಡೆದು ರಾಜ್ಯದ ಕಾಲೇಜುಗಳಲ್ಲಿ ಎಂಬಿಬಿಎಸ್‌ ಅಥವಾ ಬಿಡಿಎಸ್‌ ಪದವಿ ಪಡೆದವರಿಗೆ ಅವಕಾಶ ನಿರಾಕರಿಸಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿಗಳಾದ ಅರುಣ್‌ ಮಿಶ್ರಾ ಮತ್ತು ಯು.ಯು.ಲಲಿತ್‌ ಅವರ ಪೀಠ ಹೇಳಿದೆ. ಪ್ರವೇಶ ಪ‍ರೀಕ್ಷೆಯ ಅಂತಿಮ ಫಲಿತಾಂಶ ಪ್ರಕಟಿಸುವುದಕ್ಕೆ ಪೀಠವು ತಡೆ ನೀಡಿದೆ.

ADVERTISEMENT

ಸ್ನಾತಕೋತ್ತರ ಪದವಿ ಮತ್ತು ಇತರ ಸೂಪರ್‌ ಸ್ಪೆಶಾಲಿಟಿ ಕೋರ್ಸ್‌ಗಳಲ್ಲಿ ಇಂತಹ ಯಾವುದೇ ಮೀಸಲಾತಿ ನೀಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್‌ ಹಿಂದೆಯೂ ಹಲವು ತೀರ್ಪುಗಳನ್ನು ನೀಡಿದೆ ಎಂದು ಡಾ. ಕೃತಿ ಲಖಿನಾ ಮತ್ತು ಇತರ 39 ಅಭ್ಯರ್ಥಿಗಳ ಪರವಾಗಿ ಹಿರಿಯ ವಕೀಲ ಅಮರೇಂದ್ರ ಶರಣ್‌ ವಾದಿಸಿದರು.

ರಾಜ್ಯದ ಹೊರಗಿನವರಿಗೆ ಪ್ರವೇಶ ನಿರಾಕರಿಸಿ ಅಧಿಸೂಚನೆ ಹೊರಡಿಸುವುದು ಸಂವಿಧಾನ ನೀಡಿರುವ ಮೂಲಭೂತ ಹಕ್ಕಿನ ಉಲ್ಲಂಘನೆಯಾಗುತ್ತದೆ. ಚುನಾವಣೆ ಎದುರಾದಾಗ ಪ್ರತಿಬಾರಿಯೂ ಕರ್ನಾಟಕ ಇಂತಹ ಕ್ರಮಗಳನ್ನು ಕೈಗೊಳ್ಳುತ್ತದೆ. ಕರ್ನಾಟಕದ ಇಂತಹ ಅಧಿಸೂಚನೆಗಳನ್ನು ಸುಪ್ರೀಂ ಕೋರ್ಟ್‌ ಹಿಂದೆಯೂ ರದ್ದು ಮಾಡಿತ್ತು ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.