ADVERTISEMENT

ವೈಮನಸ್ಸು ತಿಳಿಗೊಳಿಸುವ ಯತ್ನ ವಿಫಲ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2011, 18:30 IST
Last Updated 10 ಮಾರ್ಚ್ 2011, 18:30 IST

ನವದೆಹಲಿ: ಒಡೆದ ಮನಸುಗಳು ಒಗ್ಗೂಡಲಿಲ್ಲ. ಕದಡಿರುವ ಮನಸುಗಳನ್ನು ತಿಳಿಗೊಳಿಸಿ ಕೈಕೈ ಕುಲುಕಿಸುವ ಆಶಯದೊಂದಿಗೆ ಒಂದೆಡೆ ಸೇರಿದ್ದವರು ‘ಬಂದ ದಾರಿಗೆ ಸುಂಕವಿಲ್ಲ’ ಎಂಬಂತೆ ಹಿಂತಿರುಗಿದರು.ಇದು ನಡೆದಿದ್ದು ಗುರುವಾರ. ದೆಹಲಿಯ ತೀನ್‌ಮೂರ್ತಿ ಲೇನ್‌ನಲ್ಲಿರುವ ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ ಅವರ ಅಧಿಕೃತ ನಿವಾಸದಲ್ಲಿ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರ ನೇಮಕಕ್ಕೆ ಸಂಬಂಧಿಸಿದಂತೆ ಯಡಿಯೂರಪ್ಪ ಮತ್ತು ಈಶ್ವರಪ್ಪ ಅವರ ನಡುವೆ ಭಿನ್ನಾಭಿಪ್ರಾಯ ಉಂಟಾಗಿದೆ.

ಭಿನ್ನಮತ ಎಷ್ಟು ವಿಕೋಪಕ್ಕೆ ಹೋಗಿದೆ ಎಂದರೆ ಇಬ್ಬರೂ ಈಗ ಮಾತನಾಡುತ್ತಿಲ್ಲ. ಈ ಕಾರಣಕ್ಕೆ ಇಬ್ಬರನ್ನು ಗಡ್ಕರಿ ಕರೆಸಿ ರಾಜಿ- ಸಂಧಾನ ಮಾಡಲು ಪ್ರಯತ್ನಿಸಿದರು. ಆದರೆ, ಪ್ರಯತ್ನ ಫಲಿಸಲಿಲ್ಲ. ಈಶ್ವರಪ್ಪ ಒಂದು ಹಂತದಲ್ಲಿ ಯಡಿಯೂರಪ್ಪ ಅವರ ಜತೆ ಮುಖಾಮುಖಿ ಆಗುವುದಕ್ಕೆ ಸಿದ್ಧರಿರಲಿಲ್ಲ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.

ಎರಡು ವಾರದ ಹಿಂದೆ ಮೈಸೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ನಾಗೇಂದ್ರ ಅವರನ್ನು ಅಧ್ಯಕ್ಷರಾಗಿ ನೇಮಕ ಮಾಡಲಾಯಿತು. ಮಹಾನಗರಪಾಲಿಕೆ ವಿರೋಧ ಪಕ್ಷದ ನಾಯಕರಾದ ನಾಗೇಂದ್ರ ಹಿರಿಯ ಮುಖಂಡ ಡಿ.ಬಿ. ಚಂದ್ರೇಗೌಡ, ಸಚಿವ ಅಶೋಕ್ ಮತ್ತು ಮಾಜಿ ಸಚಿವ ರಾಮಚಂದ್ರಗೌಡ ಅವರ ಅಭ್ಯರ್ಥಿ. ಇವರೆಲ್ಲರ ಒತ್ತಡಕ್ಕೆ ಮಣಿದು ಮುಖ್ಯಮಂತ್ರಿ ನಾಗೇಂದ್ರ ಅವರನ್ನು ನೇಮಕ ಮಾಡಿದರು ಎಂದು ಮೂಲಗಳು ವಿವರಿಸಿವೆ.

ಆದರೆ, ಇದು ಈಶ್ವರಪ್ಪ, ಸಚಿವರಾದ ರಾಮದಾಸ್ ಮತ್ತು ಶೋಭಾ ಕರಂದ್ಲಾಜೆ ಅವರಿಗೆ ಇಷ್ಟ ಇರಲಿಲ್ಲ. ನಾಗೇಂದ್ರ ಅವರನ್ನು ನೇಮಕ ಮಾಡಬಾರದು ಎಂದು ಬಿಜೆಪಿ ಅಧ್ಯಕ್ಷರು ಮುಖ್ಯಮಂತ್ರಿಗೆ ನೇರವಾಗಿ ಹೇಳಿದ್ದರು. ಅವರ ಮಾತಿಗೆ ಬೆಲೆ ಸಿಗಲಿಲ್ಲ. ಇದರಿಂದ ಈಶ್ವರಪ್ಪ ಅಸಮಾಧಾನಗೊಂಡರು. ಮುಖ್ಯಮಂತ್ರಿ ಜತೆ ಮಾತೂ ಬಿಟ್ಟರು.ಇದು ಪಕ್ಷದ ವರಿಷ್ಠರ ಗಮನಕ್ಕೆ ಬಂತು. ಇಬ್ಬರ ನಡುವಿನ ಮನಸ್ತಾಪ ತಿಳಿಗೊಳಿಸಲು ದೆಹಲಿಗೆ ಕರೆಸಲಾಯಿತು. ಆದರೆ, ಪ್ರಯೋಜನವಾಗಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.